Thursday, August 10, 2017

"Hagar - Resisting to be a Comodity..."

ಆದಿಕಾಂಡ 16:1-6

ಸರಕುಗಳು/ಕೊಮೋಡಿಟಿ/ವ್ಯಾಪಾರದ ವಸ್ತುಗಳು – ವ್ಯಕ್ತಿಯೊಬ್ಬನ/ಳ ಭೋಗದ ವಸ್ತುಗಳು - ಸರಕುಗಳನ್ನು ಕೊಂಡವ ಹೇಗೆಬೇಕಾದರೂ ಅದನ್ನು ಬಳಸಿಕೊಳ್ಳಬಹುದು - ಸರಕಿಗೆ ಇಚ್ಚಾಸ್ವಾತಂತ್ರ್ಯವಿಲ್ಲ – ಕನಸುಗಳನ್ನು ಹೆಣೆಯುವ ಅವಕಾಶವೂ ಸರಕಿಗೆ ಇಲ್ಲ. ಸರಕು ಸಂಸ್ಕøತಿ ನಮ್ಮ ಕಾಲದ ಅನಿವಾರ್ಯ ವಾಸ್ತವ. ಕೊಳ್ಳುವ ಶಕ್ತಿಯುಳ್ಳವನೇ ಒಡೆಯ. ಕೊಳ್ಳುವವನೇ ದೊರೆ. ಕಸ್ಟಮರ್ ಇಸ್ ದ ಕಿಂಗ್. ಕನ್ಸ್ಯೂಮರ್ ಈಸ್ ದ ಎಂಪರರ್. ಸರಕುಗಳು ಕೊಳ್ಳುವವನ ತೃಷೆಯನ್ನು ನೀಗಿಸುವ ವಸ್ತುಗಳು ಮಾತ್ರ. ಆದರೆ ದುರದೃಷ್ಟವಷಾತ್ ಈ ಸರಕುಗಳ ಪಟ್ಟಿಯಲ್ಲಿ ವ್ಯಕ್ತಿಗಳೂ ಸೇರಿರುವುದು ಚಾರಿತ್ರಿಕ ಸತ್ಯ. ಹೀಗೆ ವ್ಯಕ್ತಿಯೊಬ್ಬಳು ಸರಕು ಆದ ಕಥನ ಇಂದಿನ ಹಳೆ ಒಡಂಬಡಿಕೆಯ ಪರಿಚ್ಚೇದ.

ಹಾಗರಳು – ಅಬ್ರಾಮ ಮತ್ತು ಸಾರ ಎಂಬ ಕೊಳ್ಳುವ ಸಾಮಥ್ರ್ಯವಿದ್ದ ಕಸ್ಟಮರ್ಸಗಳ ಕಯ್ಯಲ್ಲಿ ಸಿಲುಕಿ ನಜ್ಜುಗುಜ್ಜಾದ ಸರಕು. ಅಬ್ರಾಮ ಮತ್ತು ಸಾರಳಿಂದ ಬಳಸಲ್ಪಟ್ಟ, ದುರ್ಬಳಕೆಯಾದ ಮತ್ತು ಬಳಸಿ ಎಸೆಯಲ್ಪಟ್ಟ ಸರಕು - ಹಾಗರ್. ಸಾರಳು ಎಂಬ ಉಳ್ಳವಳ ದಾಸಿ ಹಾಗರ. ಸಾರಳಿಗೆ ಸಂತಾನವಾಗದ ಸಂದರ್ಭದಲ್ಲಿ ತನ್ನ ಗಂಡನಿಗೆ ಸಂತಾನ ಕೊಡಿಸಲು ಸಾರಳು ಬಳಸಿದ ಮಗುವನ್ನು ಹೆರುವ ಯಂತ್ರ/ಮೆಷಿನ್ ಹಾಗರ. ಸಾರಳು ಇಲ್ಲಿ ಪ್ರಭುತ್ವದ ಹೆಂಗಸಾದರೆ ಹಾಗರಳು ಗುಲಾಮ ಹೆಂಗಸು. ಸಾರಳು ಇಸ್ರಾಯೇಲ್ ಸಂತತಿಯ ಮೂಲವಾದರೆ ಹಾಗರಳು ಐಗುಪ್ತಳು, ಎಂದರೆ ಪರಕೀಯಳು. ಇಬ್ಬರೂ ಸ್ತ್ರೀಯರೇ ಆಗಿದ್ದರೂ ಸಾಮಾಜಿಕ ಸ್ಥರದಲ್ಲಿ ಒಬ್ಬಳು ಮೊಹಲ್ಲಾದವಳಾದರೆ, ಇನ್ನೊಬ್ಬಳು ಫೂಟ್‍ಪಾತಿನವಳು. ಈ ವೈರುಧ್ಯ ಅಸ್ಮಿತೆಗಳು ಸರಕುಸಂಸ್ಕøತಿಯ ಮೂಲಭೂತ ಲಕ್ಷಣ. ಇಲ್ಲಿ ಗಮನಾರ್ಹ ವಿಷಯವೆಂದರೆ ಈ ಇಬ್ಬರು ಸ್ತ್ರೀಯರ ಭಿನ್ನತೆ ಕೇಂದ್ರಿತವಾಗಿರುವುದು ಒಬ್ಬ ಪುರುಷನಲ್ಲಿ – ಅಬ್ರಾಮನಲ್ಲಿ. 

ಈ ಘಟನೆಯ ರಚಕ ಅಬ್ರಾಮನನ್ನು ಮುಗ್ಧನನ್ನಾಗಿ ಚಿತ್ರಿಸುವ ಹರಸಾಹಸ ಮಾಡುವುದು ಮೊದಲನೇ ಓದಿನಲ್ಲಿಯೇ ಕಂಡುಬರುತ್ತದೆ. ಅಬ್ರಾಮ ಇಲ್ಲಿ ಏನೂ ತಿಳಿಯದ ಪಾಪಚ್ಚಿ. ಹೆಂಡತಿ ಹೇಳಿದ್ಲು ಅಂತ ಹೆಂಡತಿಯ ದಾಸಿಯನ್ನು ಬಸಿರುಮಾಡುವಷ್ಟು ಮುಗ್ಧ. ಹೆಂಡತಿಗೆ ನೋವಾಗಬಾರದಲ್ಲಾ! ಪಾಪ, ಅಬ್ರಾಮ. ಬಾಯಿತೆರೆಯದೇ ಬಸಿರುಮಾಡುವ ಕೆಲಸಕ್ಕೆ ಮುಂದಾಗ್ತಾನೆ. ಆದರೆ ಈ ಪಾಪಚ್ಚಿಯ ಅಸಲೀ ಮುಖ ತಿಳಿಯಲು ಹೆಚ್ಚು ಸಮಯ ಬೇಕಿಲ್ಲ. ಮುದ್ದಿನ ಮಡದಿ ತನ್ನ ಒಳ್ಳೇತನಕ್ಕೆ ಪ್ರಶ್ನೆ ಹಾಕಿದಾಗ ಅಬ್ರಾಮನ ಅಸಲೀ ರೂಪ ಬೆಳಕಿಗೆ ಬರುತ್ತದೆ. ತನ್ನ ವಶದಲ್ಲಿರುವ ಸರಕು, ಅಂದರೆ ಹಾಗರಳು, ತನ್ನ ಮೇಲೆಯೇ ತಿರುಗಿ ಬಿದ್ದಾಗ ಸಾರಳು ಅಬ್ರಾಮನ ಮೇಲೆ ರೊಚ್ಚಿಗೇಳ್ತಾಳೆ. “ನನ್ನ ಗೋಳು ನಿನಗೆ ತಗಲಲಿ, ನನಗೂ ನಿನಗೂ ಯೆಹೋವನೇ ನ್ಯಾಯ ತೀರಿಸಲಿ” ಅಂತ ವ್ಯಾಜ್ಯಕ್ಕಿಳೀತಾಳೆ. ಆಗ ನಮ್ಮ ಪಾಪದ, ಮುಗ್ಧ, ಒಳ್ಳೆಯ ಅಬ್ರಾಮ ಈ ಹಿಂದೆ ತಾನು ಹೆಂಡತಿ ಎಂದು ಕರೆದು ಜೊತೆಯಲ್ಲಿ ಮಲಗಿ ಸರಸವಾಡಿ ಸಂತಾನವೊಂದನ್ನು ಬಿತ್ತಿದ ಹಾಗರಳನ್ನು ಕೇವಲ ಒಂದು ಸರಕಾಗಿ ಕಾಣ್ತಾನೆ. “ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳೆ; ಮನಸ್ಸು ಬಂದಂತೆ ಮಾಡು” ಅಂತ ಜಾರಿಕೊಳ್ಳುವ ಯತ್ನ ಮಾಡ್ತಾನೆ. ಅಂತೂ ನನ್ನ ಮೇಲೆ ಮಾತ್ರ ಗೂಬೆ ಕೂರಿಸಬೇಡ ಅನ್ನೋದು ಅಬ್ರಾಮನ ಮಾತಿನ ಪರಿ. ಅಬ್ರಾಮ ಜಾರಿಕೊಳ್ಳುವುದರಲ್ಲಿ ನಿಸ್ಸೀಮ ಅನ್ನೋದು ಸಾರಾಳಿಗೆ ಈಗಾಗಲೇ ಗೊತ್ತಾಗಬೇಕಿತ್ತು. ಐಗುಪ್ತದಲ್ಲಿ ಫರೋಹನಿಂದ ತನ್ನ ಜೀವಕ್ಕೆ ಹಾನಿಯಾದೀತು ಅಂತ ಹೆದರಿ ಹೆಂಡತಿಯನ್ನೇ ತಂಗಿ ಎಂದವನಲ್ಲವೇ ಇವನು. ಈಗ ಈ ದಾಸಿಯನ್ನು ಸರಕಿನಂತೆ ಕಾಣುವುದರಲ್ಲಿ ಅಚ್ಚರಿಯೇನಿಲ್ಲ, ಬಿಡಿ. ತನ್ನ ಅಸ್ತಿತ್ವದ ಉಳಿವಿಗಾಗಿ ಹೆಂಗಸನ್ನೇ ಹೆಂಗಸಿನ ವಿರುದ್ಧ ಎತ್ತಿಕಟ್ಟುವ ನಿಪುಣನೀತ. ವಚನ 6 - “ಆಗ ಸಾರಯಳು ಹಾಗರಳನ್ನು ಬಾಧಿಸಲು ಅವಳು ಓಡಿಹೋದಳು” – ಅಂದರೆ ಸಾರಳು ಮಾತ್ರ ಈ ಶೋಷಣೆಗೆ ಕಾರಣಳೋ? ಅಷ್ಟಕ್ಕೂ ಸಾರಳು ಬಯಸಿದ್ದು ಏನನ್ನು? ತನ್ನ ಗಂಡನಿಗೊಂದು ಸಂತಾನವನ್ನು. ಬಂಜೆ ಎಂದು ಕರೆಸಿಕೊಂಡು ಬಹಿಷ್ಕøತಳಾಗುವುದರಿಂದ ತಪ್ಪಿಸಿಕೊಳ್ಳಲು ಸಾರ ತನ್ನ ದಾಸಿಯನ್ನು ಸರಕಾಗಿ ಬಳಸಿದ್ದು ನಿಜ. ಆದರೆ ಅದರ ಹಿಂದೆ ಮೂಲಪಿತೃ ಅಬ್ರಾಮ ಇರಲಿಲ್ಲವೇ?  

ಹಾಗರಳು ಅಬ್ರಾಮ-ಸಾರರ ಸಂಘರ್ಷದ ನಡುವೆ ಸಿಲುಕಿ ಬಳಲಿದ ಸರಕು. ಆಕೆಯ ಮೇಲಾದ ಅನ್ಯಾಯ ಬಹುರೂಪದ್ದು: ಮೊದಲನೇದಾಗಿ, ಅವಳೊಬ್ಬ ಐಗುಪ್ತಳು, ಅಂದರೆ ಅಬ್ರಾಮನ ನೆಲದಲ್ಲಿ ಆಕೆ ಪರಕೀಯಳು, 2. ಅವಳೊಬ್ಬ ದಾಸಿ ಅಂದರೆ ಪರಾವಲಂಬಿ ಮತ್ತು 3. ಅವಳೊಬ್ಬ ಸ್ತ್ರೀ ಅಂದರೆ ಪುರುಷಪ್ರಾಬಲ್ಯಕ್ಕೆ ಸಿಲುಕಿದವಳು. ಹೀಗೆ ಬಹು ಸ್ಥರದ ಶೋಷಣೆ-ದಬ್ಬಾಳಿಕೆಗೆ ಒಳಗಾದ ಹಾಗರ ಇಂದು ನಮ್ಮ ವಿಶ್ವಾಸದ ಪ್ರಶ್ನೆಯಾಗುವ ತೀವ್ರ ಅಗತ್ಯತೆಯಿದೆ. ಕ್ರೈಸ್ತ ಪರಂಪರೆ ಸಾರಳನ್ನೂ ಸಾರಳಿಂದ ಹುಟ್ಟಿದ ಸಂತತಿಯನ್ನೂ ವಾಗ್ಧಾನಕ್ಕೆ ಸಮೀಕರಿಸಿ, ಹಾಗರಳನ್ನೂ ಆಕೆಯಿಂದ ಹುಟ್ಟಿದ ಸಂತತಿಯನ್ನು ದಾಸತ್ವಕ್ಕೆ ಸಮೀಕರಿಸಿದೆ. ಆ ಮೂಲಕ ಹಾಗರಳನ್ನು ಮತ್ತೊಮ್ಮೆ ಸರಕು ಮಾಡಿದೆ. ಪೌಲನ ಗಲಾತ್ಯಪತ್ರಿಕೆಯ ಮಾತನ್ನು ಇಲ್ಲಿ ಜ್ಞಾಪಿಸಿಕೊಳ್ಳುವುದು ಉಚಿತ: “ದಾಸಿಯನ್ನೂ ಅವಳ ಮಗನನ್ನೂ ಹೊರಕ್ಕೆ ಹಾಕು; ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯನಾಗಬಾರದು. ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ.” ಯೇಸುಕ್ರಿಸ್ತನಲ್ಲಿ ನಮಗೆ ಪ್ರತ್ಯಕ್ಷನಾದ ನಮ್ಮ ದೇವರು ಶೋಷಿತರಲ್ಲಿ ತನ್ನನ್ನು ಒಂದುಮಾಡಿಕೊಳ್ಳುತ್ತಾನೆ ಎಂಬುದು ನಮ್ಮ ವಿಶ್ವಾಸ. ಆದರೆ ಪೌಲನ ಮಾತು ಶೋಷಣೆ ಮಾಡಿದವರಲ್ಲಿ ನಮ್ಮನ್ನು ಒಂದು ಮಾಡಿಕೊಳ್ಳಲು ಕರೆಯುತ್ತದೆಯೋ? ಈ ಕುರಿತು ನಾವು ಗಂಬೀರ ಜಿಜ್ಞಾಸೆಯಲ್ಲಿ ತೊಡಗುವ ಅಗತ್ಯವಿದೆ. ನಾವು ಧರ್ಮಪತ್ನಿಯ ಮಕ್ಕಳು ಎಂಬುದು ನಮ್ಮ ಅರಿಕೆಯಾಗಿದ್ದರೆ, ಹಾಗರಳಿಗಾದ ಅನ್ಯಾಯದಲ್ಲಿ ನಮ್ಮ ಪಾಲೂ ಇದೆ.  

ಇತ್ತೀಚೆಗೆ ಪ್ಯಾಲಸ್ತೀನ್ ನಲ್ಲಿ ನವಜಾತ ಹೆಣ್ಣುಶಿಶುಗಳಿಗೆ “ಹಾಗರಳು” ಎಂಬ ಹೆಸರಿಡುವ ಚಳುವಳಿ ಹುಟ್ಟಿಕೊಂಡಿತ್ತು. ಕಾರಣ ಹಾಗರಳು ಪ್ಯಾಲಸ್ತೀನಿಯನ್ನರ ಶ್ರಮೆ, ಶೋಷಣೆ ಮತ್ತು ದಬ್ಬಾಳಿಕೆಯ ಬದುಕಿಗೆ ಸಂಕೇತ ಎಂಬುದು. ಯೇಸು ಒಬ್ಬ ಪ್ಯಾಲಸ್ತೀನೀಯ. ಯೇಸುವಿನ ಹಿಂಬಾಲಕರು ಎಂದು ಕರೆದುಕೊಳ್ಳುವ ನಾವು ಪ್ಯಾಲಸ್ತೀನಿಯನ್ನರ ಶ್ರಮೆ, ಶೋಷಣೆ ಮತ್ತು ದಬ್ಬಾಳಿಕೆಗೆ ಗುರುತಾದ ಹಾಗರಳೊಂದಿಗೆ ಒಂದಾಗದಿದ್ದರೆ, ನಮ್ಮ ವಿಶ್ವಾಸವೇ ಪ್ರಶ್ನಾರ್ಹ.  

ಹಾಗರಳು ಸತ್ತಿಲ್ಲ, ಬದುಕಿದ್ದಾಳೆ. ಎಲ್ಲೆಲ್ಲಿ ಅಮಾಯಕರು ಸರಕುಗಳಾಗಿ ಬಳಸಲ್ಪಟ್ಟು ಎಸೆಯಲ್ಪಡುತ್ತಿದ್ದಾರೋ ಅಲ್ಲೆಲ್ಲಾ ಹಾಗರಳು ರೋಧಿಸುತ್ತಿದ್ದಾಳೆ. ಎಲ್ಲೆಲ್ಲ್ಲಿ ಅಬ್ರಹಾಮನ ಮೂಲಪಿತೃತ್ವದ ಬಗ್ಗೆ ಜನರು ಹೆಮ್ಮೆ ಪಡುತ್ತಾರೋ ಅಲ್ಲೆಲ್ಲಾ ಹಾಗರಳು ಅಣಕವಾಡುತ್ತಿದ್ದಾಳೆ. ಎಲ್ಲೆಲ್ಲಿ ಪ್ರಭುಪ್ರದಾನ ವ್ಯವಸ್ಥೆ ತನ್ನ ಬೇಳೆ ಬೇಯಿಸಿಕೊಳ್ಳಲು ಹೆಣ್ಣನ್ನು ಹೆಣ್ಣಿನ ವಿರುದ್ಧ ಎತ್ತಿಕಟ್ಟುತ್ತದೋ, ಅಲ್ಲೆಲ್ಲಾ ಹಾಗರಳು ಪ್ರತಿಭಟಿಸುತ್ತಿದ್ದಾಳೆ. ಎಲ್ಲೆಲ್ಲಿ ಜನರು ತಾವು ಒಳ್ಳೆಯವರಾಗಲು ನಿರಪರಾಧಿಗಳನ್ನು ಬಲಿಪಶು ಮಾಡುತ್ತಿದ್ದಾರೋ, ಅಲ್ಲೆಲ್ಲಾ ಹಾಗರಳು ನ್ಯಾಯಕ್ಕಾಗಿ ಆಕ್ರಂದಿಸುತ್ತಿದ್ದಾಳೆ. ಶರೀರದಲ್ಲಿ ಮತ್ತು ಆತ್ಮದಲ್ಲಿ ಅಬ್ರಹಾಮ ಮತ್ತು ಸಾರಳ ಸಂತತಿ ಎಂದು ಕರೆದುಕೊಳ್ಳುವ ಕ್ರೈಸ್ತ ಸಭೆ, ಅಂದರೆ ನಾವು, ಹಾಗರಳ ಧನಿಗೆ ಕಿವಿಕೊಡುವ ಅಗತ್ಯವಿದೆ ಮತ್ತು ಹಾಗರಳ ಈ ಧಾರುಣ ಕಥೆಗೆ ಉತ್ತರಿಸುವ ತ್ವರಿತತೆ ಇದೆ. ಆಕೆ ನಮ್ಮ ಮುಂದೆ ತೆರೆದಿಡುವ ಈ ದೈವಶಾಸ್ತ್ರೀಯ ಸವಾಲುಗಳನ್ನು ತಾತ್ಸಾರಮಾಡುವುದು ನಮ್ಮ ವಿಶ್ವಾಸವನ್ನೇ ಹುಸಿಯೆಂದು ಸಾಭೀತುಪಡಿಸಿದಂತೆ.

ಹಾಗರಳು ಸತ್ತಿಲ್ಲ, ಬದುಕಿದ್ದಾಳೆ, ನಮ್ಮ ನಡುವೆಯೂ ಹಾಗರಳಿದ್ದಾಳೆ. ಆಕೆಯನ್ನು ಗುರುತಿಸಬೇಕಿದೆ, ವ್ಯಕ್ತಿಯಾಗಿಯೇ ಹೊರತು ಸರಕಾಗಿ ಅಲ್ಲ.  

No comments:

Post a Comment