Friday, July 6, 2018

ದೆಬೋರಾ: ಉರಿಯುವ ಬೆಂಕಿ

(ನ್ಯಾಯಸ್ಥಾಪಕರು 4:1-16)

ಜ್ಯೋತಿ ಸಿಂಗ್ ಪಾಂಡೆ ಎಂಬ ಹೆಸರು ನಮ್ಮಲ್ಲಿ ಎಷ್ಟು ಜನರಿಗೆ ಪರಿಚಯ ಇದೆ? ಬಹುತೇಕ ಎಲ್ಲರಿಗೂ ಇದೊಂದು ಅಪರಿಚಿತ ಹೆಸರು. “ನಿರ್ಭಯ” ಎಂಬ ಹೆಸರು? ಈ ಹೆಸರನ್ನು ಕೇಳದವರೇ ವಿರಳ. “ನಿರ್ಭಯ” - ಈ ಹೆಸರು ಕೇಳಿದ ಕೂಡಲೇ ನಮ್ಮ ಸ್ಮøತಿಪಟಲದಲ್ಲಿ ತೇಲಿಬರುವ ದೃಶ್ಯ ಯಾವುದು? ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ವಿಕೃತ ಮಾಂಸದಾಹಿಗಳಿಂದ ಬರ್ಬರವಾಗಿ ರೇಪ್‍ಗೆ ಒಳಗಾದ ಯುವತಿ! ಅಲ್ವಾ? ಆ ನಿರ್ಭಯಾಳ ನಿಜವಾದ ಐಡೆಂಟಿಟಿ ಜ್ಯೋತಿ ಸಿಂಗ್ ಪಾಂಡೆ ಅನ್ನೋದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ಇಲ್ಲ ಅನ್ನುವ ಮನೋಭಾವ. ಜ್ಯೋತಿ ಸಿಂಗ್‍ಳಿಗೆ ‘ನಿರ್ಭಯ’ ಅಂತ ಹೆಸರಿಟ್ಟಿದ್ದು ನನ್ನ ನಿಮ್ಮಂಥ ಸ್ವಸ್ಥ ಸಮಾಜದ ಅಸ್ವಸ್ಥ ಮನಸ್ಸುಗಳು. ಯಾಕೆ? ಹದಿಹರೆಯದ ಆ ಯುವತಿಯಲ್ಲಿ ವಿಕೃತ ಮನಸ್ಸುಗಳು ಭೀತಿ ಮೂಡಿಸಲಿಲ್ಲವೇ? ಆ ಅಮಾಯಕಳ ಪುಟ್ಟ ಹೃದಯದಲ್ಲಿ ಆ ಕ್ರೂರಿಗಳು ಭಯ ಹುಟ್ಟಿಸಿದ್ದು ಸುಳ್ಳೇ? ವಿಕೃತ ಕಾಮಿಗಳ ಆ ಭೀಬತ್ಸ ಕೃತ್ಯ ಆಕೆಯನ್ನು ಭಯಗ್ರಸ್ತಳನ್ನಾಗಿಸಿಲ್ವಾ? ಮತ್ಯಾಕೆ ಆಕೆಯನ್ನು ‘ನಿರ್ಭಯ’ ಅಂತ ಕರೆದು ಸುಳ್ಳು ಹೇಳ್ತಿದ್ದೇವೆ?    

ಒಂದು ವರ್ಗದ ಜನರ ಹೆಸರನ್ನು, ಅವರ ಐಡೆಂಟಿಟಿಯನ್ನು ಮತ್ತೊಂದು ವರ್ಗ ತಿರುಚಿ ತನ್ನ ಬಲಹೀನತೆಯನ್ನು ಮುಚ್ಚಿಕೊಳ್ಳುವ ಕಾರ್ಯಮಾಡುತ್ತಿರುವುದು ಇಂದು ನೆನ್ನೆಯ ಕೆಲಸವಲ್ಲ. ಅದು ನಮ್ಮ ಸಮಾಜದ ಶತಶತಮಾನಗಳ ಹತಾಶ ಯತ್ನ. ಬೈಬಲ್ ಕೂಡಾ ಇದಕ್ಕೆ ಹೊರತಲ್ಲ. ಬೈಬಲ್‍ನಲ್ಲೂ ತಮ್ಮ ಐಡೆಂಟಿಟಿಗಳ ಆಹುತಿಗೆ ಒಳಗಾದ ಪಾತ್ರಗಳಿವೆ. ಹೀಗೆ ಐಡೆಂಟಿಟಿಯ ಆಹುತಿಗೆ ಒಳಗಾದ ಒಬ್ಬ ವ್ಯಕ್ತಿ ದೆಬೋರಾ. ನ್ಯಾಯಸ್ಥಾಪಕರ ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ದೆಬೋರಳು ಎಂಬ ಒಬ್ಬ ನ್ಯಾಯಸ್ಥಾಪಕಿ ಹಾಗೂ ಪ್ರವಾದಿನಿಯ ಐಡೆಂಟಿಟಿಯನ್ನು ತಿರುಚುವ ಯತ್ನ ನಡೆದಿದೆ. ನಾವೀಗ ಓದಿ ಕೇಳಿದ ನ್ಯಾಯಸ್ಥಾಪಕರ ಪುಸ್ತಕದ 4ನೇ ಅಧ್ಯಾಯದ 4ನೇ ವಚನದಲ್ಲಿ “ಲಪ್ಪಿದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯತೀರಿಸುತ್ತಿದ್ದಳು” ಎಂಬ ಪ್ರಸ್ತಾಪವಿದೆ. ಈ ಲಪ್ಪಿದೋತ ಯಾರು? ಈತ ಒಬ್ಬ ವ್ಯಕ್ತಿಯೋ ಅಥವಾ ಭಾಷಾಂತರಕಾರರ ಪೊಳ್ಳು ಸೃಷ್ಟಿಯೋ? ಇಬ್ರಿಯ ಭಾಷೆಯಲ್ಲಿ ಲಪ್ಪಿದೋತನ ಹೆಂಡತಿ ಎಂಬದಕ್ಕೆ ‘ಎಷೆತ್ ಲಪಿದೋತ್’ ಎಂಬ ಪದಬಳಕೆಯಿದೆ. ಎಷೆತ್ ಎಂದರೆ ಮೂಲ ಅರ್ಥ ಸ್ತ್ರೀ ಮತ್ತು ಲಪಿದೋತ್ ಎಂದರೆ ಬೆಂಕಿ. ಅಂದರೆÉ ಎಷೆತ್ ಲಪಿದೋತ್ ದೆಬೋರಾ ಎಂದರೆ ಬೆಂಕಿಯತೆ ಉರಿಯುವ ಸ್ತ್ರೀಯಾದ ದೆಬೋರಳು ಎಂಬ ಭಾಷಾಂತರದ ಸಾಧ್ಯತೆಯಿದೆ. ಈ ಸಾಧ್ಯತೆಯನ್ನು ಇಂಗ್ಲೀಷ್ ಭಾಷಾಂತರವಾಗಲೀ ಕನ್ನಡ ಭಾಷಾಂತರವಾಗಲೀ ಮತ್ತಾವ ಭಾಷೆಯ ತರ್ಜುಮೆಯಾಗಲೀ ಅಡಿಟಿಪ್ಪಣಿಯಲ್ಲಿಯೂ ನೀಡುವುದಿಲ್ಲ. ಹಾಗಾದರೆ ಇದೊಂದು ಮುಗ್ಧ ಭಾಷಾಂತರವೋ?ಅಥವಾ ಇದರ ಹಿಂದೊಂದು ಪ್ರಭುಪ್ರಧಾನ ವ್ಯವಸ್ಥೆಯ ಹತಾಶ ಯತ್ನವಿದೆಯೋ? 

ನ್ಯಾಯಸ್ಥಾಪಕರು 4:4ರ ಉಲ್ಲೇಖವನ್ನು ಬಿಟ್ಟರೆ ಬೈಬಲ್‍ನ ಬೇರಾವ ಭಾಗದಲ್ಲಿಯೂ ಲಪ್ಪಿದೋತ್ ಎಂದರೆ ಒಬ್ಬ ವ್ಯಕ್ತಿ ಎಂಬ ವಿವರಣೆ ಇಲ್ಲ. ಆದರೆ ಲಪ್ಪಿದೋತ ಎಂಬ ಇಬ್ರಿಯ ಪದ ಮಾತ್ರ ಬೈಬಲ್‍ನಲ್ಲಿ ಬೇರೆ ಕಡೆಯೂ ಬಳಕೆಯಾಗಿದೆ. ವಿಮೋಚನಾಕಾಂಡ 20:18ನೇ ವಚನ: “ಆ ಗುಡುಗುಮಿಂಚುಗಳನ್ನೂ ತುತೂರಿಧ್ವನಿಯಾಗುತ್ತಿರುವುದನ್ನೂ ಬೆಟ್ಟದಿಂದ ಹೊಗೆ ಹೊರಡುವುದನ್ನೂ ಜನರೆಲ್ಲರು ನೋಡಿ ನಡುಗುತ್ತಾ ದೂರದಲ್ಲಿ ನಿಂತುಕೊಂಡರು.” ಇಲ್ಲಿ ಮಿಂಚು ಅಥವಾ ಬೆಂಕಿ ಎಂಬ ಪದಕ್ಕೆ ಬಳಕೆಯಾದ ಇಬ್ರಿಯ ಪದ ಲಪ್ಪಿದೋತ್. ಆದರೆ ಈ ಬೆಂಕಿ/ಲಪ್ಪಿದೋತ್ ದೇಬೋರಳ ವಿಷಯಕ್ಕೆ ಬರುವಾಗ ವ್ಯಕ್ತಿಯಾದದ್ದು ಹೇಗೆ? ಅದರಲ್ಲೂ ಅವಳ ಗಂಡನ ಸ್ಥಾನ ಪಡೆದದ್ದು ಯಾಕೆ? ಸೋಜಿಗ, ಅಲ್ವಾ? ಅದಲ್ಲದೆ ಇಬ್ರಿಯ ಭಾಷಾ ತಜ್ಞರ ಪ್ರಕಾರ ಲಪ್ಪಿದೋತ್ ಎಂಬುದು ಬೈಬಲ್‍ನ ಹೊರಗೂ ಎಲ್ಲಿಯೂ ಒಬ್ಬ ವ್ಯಕ್ತಿಯ ಹೆಸರಾಗಿ ಬಳಸಲ್ಪಟ್ಟಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಿದ್ದರೂ ಬೈಬಲ್ ಇದುವರೆಗೆ ಎಷ್ಟೇ ಭಾಷಾಂತರ ಕಂಡಿದ್ದರೂ ಇಂದಿಗೂ ಲಪ್ಪಿದೋತ್ ಎಂಬ ಪದವನ್ನು ಒಬ್ಬ ಪುರುಷನ ನಾಮಾಂಕಿತ ಹಾಗೂ ಅದು ದೆಬೋರಳ ಗಂಡನ ಹೆಸರು ಎಂದು ಬಳಸಲು ಕಾರಣವೇನು? ಅಷ್ಟಕ್ಕೂ ದೆಬೋರಳನ್ನು ವಿವಾಹದ ಚೌಕಟ್ಟಿನೊಳಗೆ ಕೂರಿಸುವ ಹತಾಶ ಯತ್ನವಾದರೂ ಏಕೆ? ಪ್ರಾಯಶಃ ಒಬ್ಬ ಯಶಸ್ವೀ ಮಹಿಳೆಗೆ ಅವಳದೇ ಆದ ಇಂಡಿಪೆಂಡೆಂಟ್ ಐಡೆಂಟಿಟಿ ಇರಲು ಸಾಧ್ಯವಿಲ್ಲ ಎಂಬ ಭ್ರಮೆ ಇರಬಹುದಾ?

ಈ ಇಡೀ ಕಥನದಲ್ಲಿ ದೆಬೋರಳು ಆ ಕಾಲದಲ್ಲಿ ಒಬ್ಬ ಪ್ರಭಾವೀ ನಾಯಕಿಯಾಗಿದ್ದಳು ಎಂಬುದು ಸ್ಪಷ್ಟವಾಗಿ ಕಾಣ್ತದೆ. ಈಕೆಯನ್ನು ಬಿಟ್ಟರೆ ಮತ್ತಾವ ನ್ಯಾಯಸ್ಥಾಪಕರಿಗೂ ಪ್ರವಾದಿ ಎಂಬ ಹೆಸರು ಕೊಡಲ್ಪಟ್ಟಿಲ್ಲ ಅನ್ನೋದು ಇಲ್ಲಿ ಗಮನಾರ್ಹ. ದೆಬೋರಳ ಕ್ರಿಯೆಗಳು ಆಕೆಯ ಸಮರ್ಥ ನಾಯಕತ್ವವನ್ನು ನಮ್ಮ ಮುಂದೆ ಬಿಚ್ಚಿಡ್ತವೆ: ಅವಳು ಖರ್ಜೂರ ವೃಕ್ಷದ ಕೆಳಗೆ ಆಸೀನಳಾಗಿದ್ದಳು ಮತ್ತು ಜನರು ನ್ಯಾಯವಿಚಾರಣೆಗೆ ಆಕೆ ಇದ್ದಲ್ಲಿಗೆ ಬರ್ತಾ ಇದ್ದ್ರು ಅನ್ನೋದು ಆಕೆಗೆ ತನ್ನದೇ ಆದ ಅಧಿಕಾರ ಇತ್ತು ಮತ್ತು ಅದು ಅವಳ ಅಸಾಮಾನ್ಯ ಐಡೆಂಟಿಟಿಯಾಗಿತ್ತು ಎಂಬುದನ್ನು ಸೂಚಿಸ್ತದೆ. ಮುಂದೆ ಆಕೆ ಬಾರಾಕನನ್ನು ಯುದ್ಧಕ್ಕೆ ಕಳುಹಿಸ್ತಾಳೆ – ಮತ್ತೊಮ್ಮೆ ಅವಳ ಅಧಿಕಾರ ಮತ್ತು ಯುದ್ಧನೀತಿಯ ಚಾಣಕ್ಷತೆಯನ್ನು ಇದು ಸೂಚಿಸ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ದೆಬೋರಳು ಎದ್ದು ಬಾರಾಕನೊಡನೆ ಕದೆಷಿಗೆ ಹೋದಳು” ಎಂಬ ಉಲ್ಲೇಖ ಕೂಡಾ ಇದೆ – ತನ್ನ ನ್ಯಾಯಸ್ಥಾಪಕ ಸ್ಥಾನದಿಂದ ಎದ್ದು ಯುದ್ಧವೀರಳಾಗಿ ನಡೆಯುವ ವೀರನಾರಿ ದೆಬೋರಾ. ಎಲ್ಲಕ್ಕೂ ಮಿಗಿಲಾಗಿ ದೆಬೋರ ಆಡುವ ಮಾತು “ಯೆಹೋವನು ಸೀಸೆರನನ್ನು ಒಬ್ಬ ಸ್ತ್ರೀಗೆ ಒಪ್ಪಿಸಿಕೊಡುವನು” ಎಂಬ ಮಾತು ಇಲ್ಲಿ ಬಹಳ ಪರಿಣಾಮಕಾರಿ. ಶತೃವನ್ನು ಗೆಲ್ಲುವ ಹೆಣ್ಣು ದೆಬೋರಾ. ಇಸ್ರಾಯೇಲ್ಯರನ್ನು ಪರಕೀಯ ಪ್ರಭುತ್ವಗಳಿಂದ ತಪ್ಪಿಸುವ ರಕ್ಷಕಳು ದೆಬೋರಾ.

ಇಷ್ಟೆಲ್ಲಾ ಸಾಮಥ್ರ್ಯವಿದ್ದರೂ, ಅಸಾಮಾನ್ಯ ಐಡೆಂಟಿಟಿ ಇದ್ದರೂ ಆ ಸ್ತ್ರೀ ಸ್ವತಂತ್ರಳಲ್ಲ ಎಂಬುದನ್ನು ಎತ್ತಿ ಸಾರುವ ತವಕ ಭಾಷಾಂತರಕಾರರದ್ದು. ದೆಬೋರಾ ಒಬ್ಬ ಪುರುಷನಿಗೆ ಸೇರಿದವಳು ಮತ್ತು ಆಕೆಯ ಐಡೆಂಟಿಟಿ ಒಬ್ಬ ಪುರುಷನನ್ನು ಆತುಕೊಂಡಾಗಲೇ ಆಕೆಯ ಬದುಕಿಗೆ ಅರ್ಥ ಎಂಬಂತೆ ಇಲ್ಲಿ ಚಿತ್ರಿಸಲಾಗಿದೆ. ದೆಬೋರಳು ಒಬ್ಬ ಪುರುಷನ ಹೆಂಡತಿ ಎಂಬ ಹೇಳಿಕೆ ಆ ಕಾಲದಲ್ಲಿ ಹೆಂಡತಿಗೆ ಇದ್ದ (ಮತ್ತು ಈಗಲೂ ಇರುವ) ದ್ವಿತೀಯ ದರ್ಜೆಯ ಸ್ಥಾನದ ಹಿನ್ನೆಲೆಯಲ್ಲಿ ಅರ್ಥವಿಸಲ್ಪಡಬೇಕು. ಆದ್ದರಿಂದಾಗಿ ಇದೊಂದು ಮುಗ್ಧ ಭಾಷಾಂತರ ಅಲ್ಲ. ಇದೊಂದು ಉದ್ದೇಶಪೂರ್ವಕ ರಾಜಕೀಯಪ್ರೇರಿತ ಭಾಷಾಂತರ. ಆದರೆ ನನ್ನ ದೃಷ್ಟಿಯಲ್ಲಿ ದೆಬೋರಾ ಇಲ್ಲಿ ನಿಜಕ್ಕೂ ಎಷೆತ್ ಲಪಿದೋತಳೇ, ಆದರೆ ಲಪಿದೋತ್ ಎಂಬ ಕಲ್ಪಿತ ವ್ಯಕ್ತಿಯ ಹೆಂಡತಿ ಎಂಬ ಅರ್ಥದಲ್ಲಿ ಅಲ್ಲ; ಬದಲು ಬೆಂಕಿಯತೆ ಉರಿಯುವ/ಕೆರಳುವ ಸ್ತ್ರೀ ಎಂಬ ಅರ್ಥದಲ್ಲಿ. ತನ್ನ ಜನರ ಉಳಿವಿಗಾಗಿ ಸ್ವತಃ ರಣಭೂಮಿಗೆ ಇಳಿಯಬಲ್ಲ ಬೆಂಕಿಯ ಕಿಡಿ. ಆ ಅರ್ಥದಲ್ಲಿ ದೆಬೋರಳು ಇಲ್ಲಿ ‘ಎಷೆತ್ ಲಪಿದೋತ್’. ಇದಕ್ಕೆ ಪೂರಕವಾಗಿ ಮತ್ತೊಂದು ಗಮನಾರ್ಹ ವಿಷಯ ಅಂದ್ರೆ ಬಾರಾಕ್ ಎಂಬ ಪಾತ್ರದ ಪ್ರಾಮುಖ್ಯತೆ. ಬಾರಾಕ್ ಎಂಬ ಹೆಸರಿಗೆ ಮಿಂಚು ಎಂಬ ಅರ್ಥವಿದೆ. ಆದರೆ ಆ ಮಿಂಚು ಹೊಳೆಯುವುದಕ್ಕೆ ಕಾರಣವಾದ ಬೆಂಕಿಯ ಕಿಡಿ ದೆಬೋರಾ ಅನ್ನೋದನ್ನ ನಾವು ಗಮನಿಸ್ಬೇಕು. ಲಪಿದೋತ್ ಎಂಬ ಪುರುಷನ ಪತ್ನಿಯಾಗಿ ಐಡೆಂಟಿಟಿ ಪಡೆವ ಮಹಿಳೆ ದೆಬೋರಳಲ್ಲ; ಬದಲು ಬಾರಾಕ್ ಎಂಬ ಪುರುಷನ ಐಡೆಂಟಿಟಿಯಾಗಿ ನಿಲ್ಲುವ ಕಾಡ್ಗಿಚ್ಚು ದೆಬೋರಾ.

ದೆಬೋರಳ ಬದುಕನ್ನು ಈ ಕಥನದ ಹಿನ್ನೆಲೆಯಲ್ಲಿ ಹೀಗೆ ಮರು ದೃಷ್ಟಿಸಿದರೆ ಇಲ್ಲಿ ಒಂದು ಪರ್ಯಾಯ ಭಾಷಾಂತರದ ಅನಿವಾರ್ಯತೆ ಎದ್ದುಕಾಣುತ್ತದೆ. “ಆ ಕಾಲದಲ್ಲಿ ಲಪ್ಪಿದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯತೀರಿಸುತ್ತಿದ್ದಳು” ಎಂಬ ಭಾಷಾಂತರಕ್ಕೆ “ಆ ಕಾಲದಲ್ಲಿ ಉರಿಯುವ ಬೆಂಕಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯ ತೀರಿಸುತ್ತಿದ್ದಳು” ಎಂಬ ಪರ್ಯಾಯ ಭಾಷಾಂತರದ ಸಾಧ್ಯತೆಯನ್ನು ಮನಗಾಣುವುದು ಅಗತ್ಯ. ಇಂಥ ಪರ್ಯಾಯ ಓದು ನಮಗೆ ನಮ್ಮ ಸಂದರ್ಭದ ಸ್ತ್ರೀಯರ ಸ್ವತಂತ್ರ ಸಾಮಥ್ರ್ಯವನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಗೌರವಿಸುವ ವಿಶಾಲ ಮನಸ್ಸನ್ನು ನೀಡಬಲ್ಲದು. ನಮ್ಮ ಸಮಾಜದಲ್ಲಿ ಇಂದಿಗೂ ಸ್ವತಂತ್ರವಾಗಿ ಸಾಧನೆಗೈದ ಮಹಿಳೆಯನ್ನು ಪುರುಷಸಂಬಂಧದಲ್ಲಿ ಅಳೆದು ನೋಡುವ ಬಲಹೀನತೆ ಎದ್ದು ಕಾಣುತ್ತದೆ. ಮತ್ತು ಅದೇ ಸಂದರ್ಭ ಪುರುಷತ್ವದ ವಿಕೃತತೆಗೆ ಬಲಿಯಾದ ಮಹಿಳೆಯರನ್ನು “ನಿರ್ಭಯ”ರು ಎಂದು ಹೊಗಳಿ ನುಣುಚಿಕೊಳ್ಳುವ ಹತಾಶ ಯತ್ನಗಳು ನಮ್ಮ ಸಮಾಜದಲ್ಲಿ ಇಂದಿಗೂ ನಡೆಯುತ್ತಿದೆ. ಜ್ಯೋತಿ ಸಿಂಗ್‍ಳ ತಾಯಿ ಆಶಾದೇವಿಯ ನಿರ್ಭೀತ ಮಾತನ್ನು ಇಲ್ಲಿ ನೆನೆಯುವುದು ಉಚಿತ: “ನನ್ನ ಮಗಳ ಹೆಸರು ಜ್ಯೋತಿ ಸಿಂಗ್. ಅವಳ ಹೆಸರು ಹೇಳಲು ನಾನು ನಾಚಿಕೊಳ್ಳುವುದಿಲ್ಲ; ಇಂಥ ಹೊಲಸುಕೃತ್ಯವನ್ನು ಮಾಡಿದ ಅತ್ಯಾಚಾರಿಗಳು ನಾಚಿ ತಲೆತಗ್ಗಿಸಬೇಕೇ ವಿನಃ ಅವರ ಕಾಮತೃಷೆಗೆ ಬಲಿಪಶುವಾದ ನನ್ನ ಮಗಳಾಗಲೀ, ಆಕೆಯ ಹೆತ್ತವರಾದ ನಾವಾಗಲೀ ತಲೆತಗ್ಗಿಸುವ ಅಗತ್ಯವಿಲ್ಲ. ನನ್ನ ಮಗಳಿಗೆ ಇನ್ನಾವುದೋ ಹೆಸರಿಟ್ಟು ಮತ್ತೊಮ್ಮೆ ಅವಳ ವ್ಯಕ್ತಿತ್ವಹರಣ ಮಾಡದಿರಿ.” ಮನುಕುಲದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಮಾತುಗಳಲ್ಲವೇ!

ಹೆಣ್ಣನ್ನು ಪತ್ನಿ, ತಾಯಿ, ಪ್ರೇಮಿ (ಮತ್ತು ಪ್ರೇಮಕ್ಕೆ ಒಪ್ಪದಿದ್ದರೆ ಕಾಮಿ) ಎಂಬ ಕನ್‍ಸ್ಟ್ರಕ್ಟೆಡ್ ಐಡೆಂಟಿಟಿಗಳ ಪರಿದಿಯಲ್ಲಿ ಹಿಡಿದಿಡುವ ನಮ್ಮ ಸಮಾಜದ ಸಂದರ್ಭದಲ್ಲಿ ಆಕೆಯನ್ನು ಇಂಥ ಪರಿದಿಗಳ ಹೊರಗೂ ಇರುವ ಆಕೆಯ ಅಸಾಮಾನ್ಯ ಐಡೆಂಟಿಟಿಯಲ್ಲಿ ಗುರುತಿಸುವ ಅಗತ್ಯ ನಮ್ಮ ಮುಂದಿದೆ. ಹೆಣ್ಣು ದೆಬೋರಳಂತೆ ಉರಿಯುವ ಬೆಂಕಿಯೆಂಬುದು ಎಷ್ಟು ನಿಜವೋ, ಜ್ಯೋತಿ ಸಿಂಗಳಂತೆ ಮಾಂಸದಾಹಿಗಳಿಂದಾಗಿ ಉರಿಯುವ ಬೆಂಕಿಯಲ್ಲಿ ಹಾಕಲ್ಪಟ್ಟ ಮಾಂಸದ ಮುದ್ದೆಯಾಗಿರುವುದೂ ಅಷ್ಟೇ ವಾಸ್ತವ. ಇಂಥ ವಾಸ್ತವನ್ನು ಹೆಂಡತಿ ಎಂಬ ಪಟ್ಟದಿಂದ, ನಿರ್ಭಯ ಎಂಬ ಟೋಕನ್‍ನಿಂದ ಮುಚ್ಚಿಹಾಕುವ ಯತ್ನ ಒಂದು ಹತಾಶ ಯತ್ನ ಎಂಬುದನ್ನು ಸಮಾಜ ಮತ್ತು ಸಭೆ ಅರಿತುಕೊಳ್ಳುವ ಅಗತ್ಯವಿದೆ. ಆ ಅರಿವು ಮಾತ್ರ ನಮ್ಮನ್ನು ಕ್ರಿಸ್ತನ ದೇವರರಾಜ್ಯದ ಪರಿದಿಯೊಳಗೆ ಸೇರಿಸಲು ಶಕ್ತ. ಅಲ್ಲಿ ಸ್ತ್ರೀಗೆ ತಾಯಿ, ಪತ್ನಿ, ಪ್ರೇಮಿ ಎಂಬ ಅವಲಂಬಿತ ಐಡೆಂಟಿಟಿಗಿಂತ ಮಿಗಿಲಾದ ಸ್ವತಂತ್ರ ಐಡೆಂಟಿಟಿ ಇದೆ. ಇಂಥ ಅರಿವಿಗೆ ಕ್ರಿಸ್ತ ನಮ್ಮನ್ನು ನಡೆಸಲಿ, ಆಮೆನ್.