Monday, December 18, 2017

ಶಕ್ತ್ಯಾರಾಧನೆ ಎಂಬ ಮಹಾನ್ ಪ್ರಲೋಭನೆ!

ಪ್ರಕಟಣೆ 16:8-11

ವಚನ 11 – “ಐದನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೊದಲನೆಯ ಮೃಗದ ಸಿಂಹಾಸನದ ಮೇಲೆ ಹೊಯ್ಯಲು ಅದರ ರಾಜ್ಯವು ಕತ್ತಲಾಯಿತು.” 

ಲೆಬನಾನಿನ ಬಂಡಾಯ ಕವಿ/ಸಾಹಿತಿ ಖಲೀಲ್ ಗಿಬ್ರಾನ್‍ನ ಹಲವು ಅತ್ಯದ್ಭುತ ಕೃತಿಗಳಲ್ಲಿ “ಸೈತಾನ” ಎಂಬ ಕಾದಂಬರಿ ಕೂಡಾ ಒಂದು. ಈ ಕಾದಂಬರಿಯಲ್ಲಿ ಲೇವಿಸ್ ಎಂಬ ಒಬ್ಬ ಕೈಸ್ತ ಪಾದ್ರಿಯ ಪಾತ್ರ ಬರ್ತದೆ. ಲೇವಿಸ್ ಮತ್ತು ಸೈತಾನನ ದೂತನೊಡನೆÉ ಒಂದು ಸಂಭಾಷಣೆ ನಡೆಯುತ್ತೆ. ಬಹಳ ಸ್ವಾರಸ್ಯಕರ ಮತ್ತು ಅರ್ಥಪೂರ್ಣ ಸಂಭಾಷಣೆ. ಸೈತಾನನ ದೂತ ಲೇವೀಸ್‍ನನ್ನು ಕೇಳ್ತಾನೆ: “ನೀನ್ಯಾರು ಅಂತ ಹೇಳಬಲ್ಲೆಯಾ?” ಅದಕ್ಕೆ ಪಾದ್ರಿ ಲೇವೀಸ್ ಕೊಡುವ ಉತ್ತರ: “ನಾನು ಪ್ರಭಾವಯುಕ್ತವಾದ ಎರಡು ಶಕ್ತಿಗಳ ಮಧ್ಯೆ ಸಿಕ್ಕಿಬಿದ್ದಿರುವವನು. ಒಂದರೊಳಗೆ ನಾನು ಆಶ್ರಯ ಪಡೆದುಕೊಳ್ಳಬೇಕು. ಇನ್ನೊಂದು ಶಕ್ತಿಯ ವಿರುದ್ಧ ನಾನು ಹೋರಾಡಬೇಕು. ಒಂದನ್ನು ನಾನು ಪೂಜಿಸಬೇಕು. ಇನ್ನೊಂದು ಶಕ್ತಿಯನ್ನು ನಾನು ಉಚ್ಛಾಟಿಸಬೇಕು. ಯಾವ ಶಕ್ತಿಯನ್ನು ನಾನು ಆರಾಧಿಸುತ್ತೇನೋ ಅದು ನಾನ್ಯಾರು ಎಂಬುದನ್ನು ಹೇಳುತ್ತದೆ.”   

ಶಕ್ತಿಯ/ಗಳ ಆರಾಧನೆ ಅಥವಾ ಶಕ್ತ್ಯಾರಾಧನೆ! ಇದು ಪತ್ಮೋಸ್‍ನ ಯೋಹಾನನ ದರ್ಶನಗಳ ಹಿಂದಿರುವ ಮೂಲವಸ್ತು. ಯಾವ ಶಕ್ತಿಯನ್ನು ಆರಾಧಿಸಬೇಕು? ಕ್ರೂಜೆಯಲ್ಲಿ ಬಲಹೀನನಂತೆ ತೂಗಿದ ಕ್ರಿಸ್ತ ಎಂಬ ಶಕ್ತಿಯನ್ನೋ? ಅಥವಾ ಸಿಂಹಾಸನದಲ್ಲಿ ಕುಳಿತು ಬಲಯುತವಾಗಿ ಬೀಗುತ್ತಿರುವ ರೋಮ್‍ನ ರಾಜಪ್ರಭುತ್ವದ ಶಕ್ತಿಯನ್ನೋ? ಸತ್ಯ, ನ್ಯಾಯ, ನೀತಿ ಎಂದು ಹೋರಾಡಿ ಕಡೆಗೆ ಕ್ರೂಜೆಯಲ್ಲಿ ವಧಿತನಾದವನನ್ನೋ? ಅಥವಾ ಅಸತ್ಯ, ಅನ್ಯಾಯ, ಅನೀತಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಮೆರೆಯುತ್ತಿರುವ ಚಕ್ರವರ್ತಿಯನ್ನೋ? ಇದು ಅಂದಿನ ಕ್ರೈಸ್ತ ಸಮುದಾಯದ ಮುಂದಿದ್ದ ಜ್ವಲಂತ ಪ್ರಶ್ನೆ. ಖಲೀಲ್ ಗಿಬ್ರಾನನ ಲೇವೀಸ್‍ನಂತೆ ಆದಿ ಕ್ರೈಸ್ತರೂ ಕೂಡಾ ಎರಡು ಪ್ರಭಾವಶಾಲೀ ಶಕ್ತಿಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದರು. ಕೆಲವರು ರಾಜಪ್ರಭುತ್ವದ ಶಕ್ತಿಯನ್ನು ಆರಾಧಿಸಿ ತಮ್ಮ ಜೀವವನ್ನೇನೋ ಉಳಿಸಿಕೊಂಡರು, ಆದರೆ ತಮ್ಮ ಕ್ರೈಸ್ತ ಅಸ್ಥಿತ್ವವನ್ನು ಕಳಕೊಂಡರು. ಆದರೆ ಹಲವರು ರಾಜಪ್ರಭುತ್ವದ ಶಕ್ತಿಗೆ ತಲೆಬಾಗದೇ ಕ್ರೂಜೆಯ ಶಕ್ತಿಯಲ್ಲಿಯೇ ಭರವಸವಿಡುವ ಸಾಹಸ ಮಾಡಿದ್ರು. ಅದಕ್ಕೆ ಪ್ರತಿಯಾಗಿ ತಮ್ಮ ಜೀವವನ್ನೇ ಪಣಕ್ಕಿಡಬೇಕಾಯ್ತು. ಅಂಥ ವಿಶ್ವಾಸಿಗಳನ್ನು ಬಲಪಡಿಸಿದ್ದು ಅಂದು ಯೋಹಾನನ ಇಂಥ ದರ್ಶನದ ಮಾತುಗಳು. ರಾಜಪ್ರಭುತ್ವ ಎಷ್ಟೇ ಮೆರೆದರೂ ಅದಕ್ಕೂ ಒಂದು ಅಂತ್ಯವಿದೆ ಎಂಬುದನ್ನು ಯೋಹಾನ ಸಾಂಕೇತಿಕ ಭಾಷೆಯ ಮೂಲಕ ಸಾರಿ ತಿಳಿಸಿದ. “ಮೃಗದ ಸಿಂಹಾಸನದ ಮೇಲೆ ದೇವರ ರೌದ್ರವು ಹೊಯ್ಯಲ್ಪಡಲು ಅದರ ರಾಜ್ಯವು ಕತ್ತಲಾಯಿತು.” ಯೋಹಾನನ ಈ ಮಾತು ರೋಮ್‍ನ ಸಿಂಹಾಸನದ ಅಂತ್ಯದ ಕುರಿತು ಅವರಲ್ಲಿ ಭರವಸೆ ಮೂಡಿಸಿತು. ಯಾವುದೇ ಶಕ್ತಿ, ಅಧಿಕಾರ, ಪ್ರಾಬಲ್ಯ, ಸಾಮ್ರಾಜ್ಯ ಅದು ಎಷ್ಟೇ ಮೆರೆದರೂ ಅದಕ್ಕೊಂದು ಅಂತ್ಯ ಇದ್ದೇ ಇದೆ. The Empire has its end ಈ ಭರವಸೆಯ ಮಾತುಗಳನ್ನು ಯೋಹಾನನ ಸಂಕೇತಗಳು ಮಾತನಾಡುತ್ತವೆ.

ಅಧಿಕಾರ, ಪ್ರಾಭಲ್ಯಗಳು, ಸಿಂಹಾಸನಗಳು ಆರಾಧ್ಯ ವಸ್ತುಗಳಾಗಿರುವುದು ಯೋಹಾನನ ಕಾಲದಲ್ಲಿ ಮಾತ್ರ ಅಲ್ಲ. ನಮ್ಮ ಸಂದರ್ಭದಲ್ಲೂ ಸಾಮ್ರಾಜ್ಯಗಳ ಆರಾಧನೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಪೂಜೆ, ಕುರ್ಚಿಯ ಆರಾಧನೆ ಇವೆಲ್ಲವೂ ಸರ್ವೇ ಸಾಮಾನ್ಯ ಅನ್ನುವಷ್ಟರ ಮಟ್ಟಿಗೆ ನಡೆಯುತ್ತೆ. ಒಂದರ್ಥದಲ್ಲಿ ಕುರ್ಚಿಗಳೇ ಅಥವಾ ಸಿಂಹಾಸನಗಳೇ ದೇವರಾಗಿ ಬಿಟ್ಟಿವೆ ಇಂದು. ಕ್ರೂಜೆಯೋ ಅಥವಾ ಕುರ್ಚಿಯೋ? - ಇವೆರಡು ಕೇವಲ ಆದಿ ಸಭೆಯ ಮುಂದಿದ್ದ ಆಯ್ಕೆ ಮಾತ್ರ ಅಲ್ಲ. ನಾವೂ ಖಲೀಲ್ ಗಿಬ್ರಾನನ ಲೇವೀಸ್‍ನಂತೆ ಈ ಎರಡು ಶಕ್ತಿಗಳ ನಡುವೆ ನಿಂತಿದ್ದೇವೆ. ನಮ್ಮ ಆಯ್ಕೆ ಯಾವುದು? ಕ್ರೂಜೆಯ ಶಕ್ತಿಯನ್ನು ಬಲಹೀನ ಅಂತ ಧಿಕ್ಕರಿಸಿ ಕುರ್ಚಿಯ ಶಕ್ತಿಯನ್ನು ಆರಾಧಿಸುತ್ತೇವೋ? ಒಂದು ನೆನಪಿರಲಿ (ಪತ್ಮೋಸ್‍ನ ಯೋಹಾನ ಕೂಡಾ ಅದನ್ನು ನೆನಪಿಸ್ತಾನೆ): ಸಿಂಹಾಸನದ ರಾಜ್ಯ ಕತ್ತಲಾಯಿತು, ಅಂದರೆ ಕುರ್ಚಿಯ ಶಕ್ತಿಗೆ ಅಂತ್ಯವಿದೆ, ಆದರೆ ಕ್ರಿಸ್ತನ ರಾಜ್ಯ ಸದಾ ಬೆಳಗುತ್ತಿರುತ್ತದೆ. ಕ್ರೂಜಿತನಾದ ಕ್ರಿಸ್ತನ ಶಕ್ತಿಗೆ ಅಂತ್ಯವಿಲ್ಲ. ಮಿತ್ರರೇ, ಪ್ರಾಬಲ್ಯಗಳ, ಅಧಿಕಾರಗಳ ಹಿಂದೆ ಓಡಿ ಜೀವ ಉಳಿಸಿಕೊಳ್ಳುವ ಶಕ್ತ್ಯಾರಾಧಕರು ನಾವಾಗದಿರೋಣ. ಕ್ರೂಜೆಯನ್ನು ಹೊತ್ತು ಜೀವಕಳಕೊಳ್ಳಲೂ ಸಿದ್ಧರಿರುವ ಕ್ರಿಸ್ತಾರಾಧಕರು ನಾವಾಗುವಂತೆ ದೇವರು ನಮಗೆ ಸಹಾಯ ಮಾಡಲಿ, ಆಮೆನ್.