Wednesday, January 24, 2018

ನ್ಯಾಯ ಮತ್ತು ಶಾಂತಿಗಾಗಿ ಏಕತೆ

ಮತ್ತಾಯ 5: 21-24

ಕ್ರೈಸ್ತ ಸಭೆ ಎಕ್ಯುಮೆನಿಸಂ/ಸಭೈಕ್ಯವಾದ/ಸೌಹಾರ್ದವಾದ ಎಂಬ ಪರಿಕಲ್ಪನೆಯನ್ನು ಬಹು ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದರೂ ಏಕತೆ ಎಂಬ ವಿಚಾರದ ಸೂಕ್ಷ್ಮಾತಿಸೂಕ್ಷ್ಮತೆಯನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡು ಬಂದಿದೆ ಎಂಬುದು ಇಂದಿಗೂ ಪ್ರಶ್ನಾರ್ಹ. ಹಲವು ಸಂಪ್ರದಾಯಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಕ್ರೈಸ್ತಸಭೆಗಳು ಒಂದಾಗಿ ತಮ್ಮ ಕ್ರೈಸ್ತ ಸಾಕ್ಷಿಯನ್ನು ಆಚರಿಸಬೇಕು ಎಂಬ ಮೂಲ ಆಶಯ ಸಭೈಕ್ಯವಾದ ಪರಿಕಲ್ಪನೆಯ ಹಿಂದೆ ಇದ್ದರೂ “ಒಂದಾಗುವುದು” ಎಂಬುದನ್ನು ಚೈತನ್ಯಪೂರ್ಣವಾಗಿ ಅರ್ಥವಿಸಿದೆಯೇ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾದುದು ಕ್ರೈಸ್ತ ಸಭೆಯ ಮುಂದಿರುವ ಬಹುದೊಡ್ಡ ಸವಾಲು. ಒಂದು ಸಭಾ ಸಂಪ್ರದಾಯವನ್ನು ಸಂಪೂರ್ಣ ನೆಲಸಮಗೊಳಿಸಿ ಅದರ ಸಮಾಧಿಯ ಮೇಲೆ ಇನ್ನೊಂದು ಸಂಪ್ರದಾಯ ಏಕತೆಯ ಹೆಸರಿನಲ್ಲಿ ತನ್ನ ಮೊಹಲ್ಲಾವನ್ನು ಕಟ್ಟಿಕೊಳ್ಳುವುದು ಏಕತೆಯಲ್ಲ. ಸಭೈಕ್ಯವಾದದ ಬಹು ಪ್ರಾಮುಖ್ಯ ಮೈಲಿಗಲ್ಲು ಎಂದು ಬೀಗುವ ಸಿ.ಎಸ್.ಐ. ಒಕ್ಕೂಟವನ್ನೇ ಉದಾಹರಣೆಯಾಗಿಟ್ಟು ಪ್ರಶ್ನಿಸುವುದಾದರೆ ಈ ಸಮಸ್ಯೆಯ ಆಳ ಅನಾವರಣಗಳ್ಳುತ್ತದೆ. ಮೂಲಭೂತವಾಗಿ ಆ್ಯಂಗ್ಲಿಕನ್, ಕಾಂಗ್ರಿಗೇಶನಲ್, ಪ್ರೆಸ್ಬಿಟೇರಿಯನ್ ಮತ್ತು ಮೆಥೋಡಿಸ್ಟ್ ಸಭೆಗಳ ಸಂಯೋಗವಾಗಿ ಸ್ಥಾಪಿತವಾದ ಸಿ.ಎಸ್.ಐ. ನಂತರದ ದಿನಗಳಲ್ಲಿ ರಿಫಾಮ್ರ್ಡ್ ಸಂಪ್ರದಾಯಗಳಂಥ ಇತರೆ ಸಂಪ್ರದಾಯಗಳ ಕ್ರೈಸ್ತ ಪಂಗಡಗಳನ್ನು ಒಳಗೊಂಡದ್ದು ಚಾರಿತ್ರಿಕ. ಆದರೆ ಪ್ರಸ್ತುತದ ಸಿ.ಎಸ್.ಐ. ಇಂಥ ಹಲವು ಕ್ರೈಸ್ತ ಸಂಪ್ರದಾಯಗಳ ಸಮತುಲಿತ ಸಮ್ಮಿಳಿತವಾಗಿದೆಯೇ? ಎಂಬುದು ಪ್ರಶ್ನಾರ್ಹ. ಆ್ಯಂಗ್ಲಿಕನ್ ಸಂಪ್ರದಾಯವು ಉಳಿದೆಲ್ಲಾ ಸಂಪ್ರದಾಯಗಳ ಮೇಲೆ ಸವಾರಿ ಮಾಡುತ್ತಾ ಸಿ.ಎಸ್.ಐ.ನ ಸಾಮ್ರಾಜ್ಯಶಾಹೀ ಸಾಧನವಾಗಿರುವುದು ವಿಪರ್ಯಾಸ. “ಧಕ್ಷಿಣ ಭಾರತ ಸಭೆಯು ಇಂಗ್ಲೆಂಡಿನ ಆ್ಯಂಗ್ಲಿಕನ್ ಸಭೆಯ ಭಾರತೀಯ ರೂಪ” ಎಂಬ ಟೀಕೆಯನ್ನು ಈ ಚರ್ಚೆಯ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಆ್ಯಂಗ್ಲಿಕನ್ ಸಭೆಯ ಎಪಿಸ್ಕೋಪಲ್ ಮಾದರಿಯ ಆಡಳಿತವ್ಯವಸ್ಥೆ ಮತ್ತು ಆಚರಣಾ ಪದ್ಧತಿಗಳು ಮೆಥೋಡಿಸ್ಟ್ ಮತ್ತಿತ್ಯಾದಿ ಸಭೆಗಳನ್ನು ಅತಿಕ್ರಮಿಸಿರುವುದು ಇಂದಿನ ವಾಸ್ತವ. ಇದು ಎಕ್ಯುಮೆನಿಸಂನ ಚೈತನ್ಯವೋ? ಇದು ನಮ್ಮ ಹಿರಿಯರು ಕನವರಿಸಿದ ಏಕತೆಯೋ? ಎಂಬುದು ನಮ್ಮ ಜಿಜ್ಞಾಸೆಯಾಗಬೇಕಿದೆ. ಇಂದಿನ ಪರಿಚ್ಛೇದದ ಮೂಲಕ ಈ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡೋಣ.

ಮತ್ತಾಯನ ಸುವಾರ್ತೆ 5ನೇ ಅಧ್ಯಾಯವು ಯೇಸುವಿನ ಪರ್ವತ ಪ್ರಸಂಗ ಎಂದು ಜನಜನಿತವಾದ ಭಾಗದ ಆರಂಭದ ಭಾಗ. ಯೇಸುವಿನ ಒಟ್ಟು ಬೋಧನೆಯ ಸಾರ ಈ ಪರ್ವತ ಪ್ರಸಂಗದಲ್ಲಿದೆ. ಮೋಶೆಯ ಧರ್ಮಶಾಸ್ತ್ರವನ್ನು ಯೇಸು ಸಾಂದರ್ಭಿಕವಾಗಿ ವ್ಯಾಖ್ಯಾನಿಸುತ್ತಾ ಅದರ ತೀಕ್ಷತೆಯನ್ನು ಇಲ್ಲಿ ಎತ್ತಿ ಹಿಡಿಯುತ್ತಾನೆ ಮತ್ತು ತಾನು ಧರ್ಮಶಾಸ್ತ್ರದ ನೆರವೇರಿಕೆಯತ್ತ ಬೆರಳು ಮಾಡಲು ಬಂದವನು ಎಂಬುದನ್ನು ಜಗಜ್ಜಾಹಿರಗೊಳಿಸುತ್ತಾನೆ. ದಶಾಜ್ಞೆಗಳಿಗೆ ಸಾಂದರ್ಭಿಕ ಅರ್ಥವಿವರಣೆ ನೀಡುತ್ತಾ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋದಿಸುವವನು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು (ವ.19) ಎಂದು ಹೇಳುತ್ತಾ ಮೊದಲಿಗೆ ಪ್ರಸ್ತಾಪಿಸುವ ಆಜ್ಞೆ ದಶಾಜ್ಞೆಗಳಲ್ಲಿ ಒಂದಾದ ನರಹತ್ಯ ಮಾಡಬಾರದು ಎಂಬ ಆಜ್ಞೆ. ನರಹತ್ಯೆ ಎಂದರೆ ಕೇವಲ ಪ್ರಾಣಹಾನಿ ಎಂಬ ಯೆಹೂದ್ಯ ತಿಳುವಳಿಕೆಯನ್ನು ಪ್ರಶ್ನಿಸುತ್ತಾ ಸಹೋದರನ ಮೇಲೆ ಸಿಟ್ಟಾಗುವುದೂ ನರಹತ್ಯೆಗೆ ಸಮಾನ ಎಂದು ಪ್ರಬೋಧಿಸುತ್ತಾನೆ. ಆ ಮೂಲಕ ಯೆಹೂದ್ಯರಲ್ಲಿದ್ದ ವಿಭಜನೆಯನ್ನು ಪ್ರಶ್ನಿಸುತ್ತಾ ಏಕತೆಗೆ ಕರೆ ನೀಡುತ್ತಾನೆ. ಯೇಸುವಿನ ಈ ಬೋಧನೆಯಲ್ಲಿ ಯೇಸು ಏಕತೆಯನ್ನು ಪುನರ್‍ವ್ಯಾಖ್ಯಾನಿಸುವ ಪರಿ ಬಹು ಗಮನಾರ್ಹ. ಈ ಹಿನ್ನೆಲೆಯಲ್ಲಿ ಎರಡು ಮುಖ್ಯ ಸಂಗತಿಗಳತ್ತ ಬೆಳಕು ಚೆಲ್ಲುವುದು ಉಚಿತ.

1.    ಏಕತೆ ಎಂದರೆ ಭಿನ್ನಮತದ/ವಿಭಿನ್ನತೆಯ ಆಚರಣೆ

“ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬುದು ನಿನ್ನ ನೆನಪಿಗೆ ಬಂದರೆ...” (ವ.23) – ಇಲ್ಲಿ “ನಿನ್ನ ಮೇಲೆ ಏನೋ ವಿರೋಧವದೆ” ಎಂಬ ಪದಪುಂಜಕ್ಕೆ ಗ್ರೀಕ್ ಭಾಷೆಯಲ್ಲಿ ti kata sou ಎಂಬ ಮೂಲಬಳಕೆ ಇದೆ. ಇದನ್ನು “ನಿನ್ನೊಂದಿಗೆ ಏನೋ ಭಿನ್ನಾಭಿಪ್ರಾಯವದೆ” ಎಂದೂ ಭಾಷಾಂತರಿಸಬಹುದು. ಈ ಭಾಷಾಂತರ ಈ ವಾಕ್ಯಕ್ಕೆ ಹೊಸ ಅರ್ಥವನ್ನೇ ಕೊಡಬಲ್ಲದು. ಇಲ್ಲಿ ಯೇಸು ಭಿನ್ನ ಅಭಿಮತಗಳ ಕುರಿತು ಮಾತನಾಡುತ್ತಾನೆ. ಇದು ಯಾವುದೇ ಪ್ರಾಯೋಗಿಕ ಕಾರಣಗಳಿಂದ ಉದ್ಭವವಾದ ಕಲಹವನ್ನು ಸೂಚಿಸದೆ ಸೈದ್ಧಾಂತಿಕ ಅಭಿಪ್ರಾಯಗಳ ವ್ಯತ್ಯಾಸವನ್ನು ಸೂಚಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ. ನೀನು “ಮೊದಲು ನಿನ್ನ ಸಹೋದರನ ಸಂಗಡ ಒಂದಾಗು” (ವ.24) ಎಂಬ ಯೇಸುವಿನ ಮಾತು “ನಿನ್ನ ಸಹೋದರನ ಭಿನ್ನ ಅಭಿಮತವನ್ನು ಗೌರವಿಸು” ಎಂಬ ಅರ್ಥವನ್ನು ಧ್ವನಿಸುತ್ತದೆ. ಹಾಗೆ ಭಿನ್ನ ಅಭಿಪ್ರಾಯಗಳು ಗೌರವಿಸಲ್ಪಟ್ಟಾಗ ಮಾತ್ರ ‘ಒಂದಾಗುವಿಕೆ’ ಅಥವಾ ಏಕತೆ ಸಾಧ್ಯ ಎಂಬುದು ಯೇಸುವಿನ ಮಾತಿನ ಆಶಯ.  

ಎಕ್ಯುಮೆನಿಸಮ್ ಎಂದರೆ ಭಿನ್ನ ಅಭಿಪ್ರಾಯಗಳು ಸಮಾನವಾಗಿ ಗೌರವಿಸಲ್ಪಟ್ಟು ಆಚರಿಸಲ್ಪಡುವುದು. ವಿಭಿನ್ನತೆಯ ಆಚರಣೆಯೇ ಏಕತೆಯ ಬುನಾದಿ. ಏಕತೆ ಎಂದರೆ ಏಕರೂಪತೆಯಲ್ಲ, ಬದಲು ಬಹುರೂಪತೆ ಮತ್ತು ವಿಭಿನ್ನತೆ. ಕ್ರೈಸ್ತ ಸಭೆ ಏಕತೆಯನ್ನು mono’ ಅಥವಾ ಏಕರೂಪತೆ ಎಂದು ಅರ್ಥವಿಸುವ ಅಪಾಯವನ್ನು ಚರಿತ್ರೆಯುದ್ದಕ್ಕೂ ಎದುರಿಸದ್ದು ಚಾರಿತ್ರಿಕ ಸತ್ಯ. ಆದ್ದರಿಂದಲೇ ಒಂದು ಸಂಪ್ರದಾಯವು ಇನ್ನೊಂದು ಸಂಪ್ರದಾಯದ ಮೇಲೆ ಸವಾರಿ ಮಾಡುತ್ತಾ ಒಂದರ ಸಮಾಧಿಯ ಮೇಲೆ ಇನ್ನೊಂದರ ಸೌಧ ನಿರ್ಮಾಣವಾದದ್ದು. “ನಿನ್ನ ಸಹೋದರನ ಸಂಗಡ ಒಂದಾಗು” ಎಂಬ ಯೇಸುವಿನ ಮಾತು ಏಕತೆಯ ಯಾವುದೇ ಕಲ್ಪನಾ ಜಗತ್ತನ್ನು/ಆದರ್ಶಲೋಕವನ್ನು ಸೃಷ್ಟಿಸುವ ಆಶಯವನ್ನು ಹೊತ್ತಿಲ್ಲ. ಬದಲಾಗಿ ‘ನಿನ್ನ ಸಹೋದರನ ವಿಭಿನ್ನತೆಯನ್ನು ಗೌರವಿಸದೇ ಪ್ರತಿರೋಧಿಸಿದ್ದು ಆತನ ಆಹುತಿಗೆ ಸಮಾನ, ಆದ್ದರಿಂದ ಆತನ ವಿಭಿನ್ನತೆಯನ್ನು ಗೌರವಿಸಿ ಒಂದಾಗುವುದು ರಕ್ಷಣೆಯ ಸಾಧನ’ ಎಂಬ ಶ್ರೇಷ್ಠ ಪ್ರಾಯೋಗಿಕ ಸತ್ಯವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ. ವಿಭಿನ್ನತೆಯ ಆಚರಣೆಯಾಗದೇ ನ್ಯಾಯ ಮತ್ತು ಶಾಂತಿಯ ಸಾಕಾರ ದುಸ್ಥರ. ಇಂದು ಎಕ್ಯುಮೆನಿಸಂ ಹೆಸರಿನಲ್ಲಿ ಸಭೆ ಒಂದುವೇಳೆ ಒಂದು ಸಭಾಸಂಪ್ರದಾಯದ ವಿಭಿನ್ನತೆಯನ್ನು ಹೊಸಕಿಹಾಕುವ ಯತ್ನ ಮಾಡಿರುವುದೇ ಆದರೆ ಅದು ಅನ್ಯಾಯ ಮತ್ತದು ನರಹತ್ಯೆಗೆ ಸಮಾನ. ಬೈಬಲ್ನ ಶಾಲೋಮ್ ಪರಿಕಲ್ಪನೆಗೇ ಅದೊಂದು ಚ್ಯುತಿ. ಆದ್ದರಿಂದ ಸಭೆ ಇದಕ್ಕಾಗಿ ಮಾನಸಾಂತರ ಪಟ್ಟು ಹಿಂದಿರುಗುವ ಅನಿವಾರ್ಯವಿದೆ. 

2.    ಏಕತೆ ಎಂಬುದು ಸಾಮ್ರಾಜ್ಯಶಾಹೀ ವಿರೋಧೀ ಚಳುವಳಿ

ಎಕ್ಯುಮೆನಿಸಂ ಎಂಬ ಪದವು “ಓಯ್ಕುಮೆನೇ” ಎಂಬ ಮೂಲ ಧಾತುವಿನಿಂದ ಬಂದ ಪದ. ಈ ಪದವು ಒಂದನೇ ಶತಮಾನದ ರೋಮ್ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿದ್ದ ಸಾಮ್ರಾಜ್ಯಶಾಹೀ ಯೋಚನೆಯನ್ನು ಪ್ರತಿಬಿಂಬಿಸುತ್ತದೆ. ರೋಮ್‍ನ ರಾಜಮನೆತನವನ್ನು ಸೂಚಿಸಲು ಈ ಪದ ಬಳಕೆಯಾಗಿತ್ತು. ರೋಮ್ ತನ್ನ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ವ್ಯಾಪಿಸುವ ಮಹಾನ್ ಕನಸನ್ನು ಹೊತ್ತು ಇಡೀ ಜಗತ್ತನ್ನು ‘ಓಯ್ಕುಮೆನೇ’ಯಾಗಿಸುವ ಹರಸಾಹಸಕ್ಕೆ ಕೈ ಹಾಕಿದ್ದ ಕಾಲವದು. ಕಾನ್‍ಸ್ಟಂಟೈನ್ ಚಕ್ರವರ್ತಿಯು ಕ್ರೈಸ್ತಧರ್ಮವನ್ನು ರಾಜ್ಯಧರ್ಮವನ್ನಾಗಿ ಘೋಷಿಸಿದ ಕಾಲದ ತರುವಾಯ ಕ್ರಿ.ಶ. 325ರ ನಿಖೆಯ ಪರಿಷತ್ತಿನಲ್ಲಿ ಮೊದಲ ಬಾರಿಗೆ ‘ಓಯ್ಕುಮೆನೇ’ ಎಂಬ ಪದವನ್ನು ಕ್ರೈಸ್ತವರ್ತುಲದಲ್ಲಿ ಬಳಸಲಾಯಿತು. ಇಲ್ಲಿಯೂ ಸಾಮ್ರಾಜ್ಯಶಾಹೀ ಆಲೋಚನೆಗಳಿರುವುದನ್ನು ಮರೆಯುವಂತಿಲ್ಲ. ರೋಮನ್ kingdomನ ವಿಸ್ತರಣೆಯೂ Christendomನ ವಿಸ್ತರಣೆಯೂ ಒಂದೇ ನಾಣ್ಯದ ಎರಡು ಮುಖಗಳಂತೆ ಜೊತೆಯಾಗಿ ಸಾಗುವ ಆಶಯವಿದ್ದ ಕಾಲವದು. ಈ ಹಿನ್ನೆಲೆಯಲ್ಲಿ ಸಾಮ್ರಾಜ್ಯಶಾಹೀ ಅತಿಕ್ರಮಣವೆಂಬುದು ‘ಓಯ್ಕುಮೆನೆ’ ಪರಿಕಲ್ಪನೆಯ ಅವಿಭಾಜ್ಯ ಅಂಗವಾಗಿತ್ತು ಎಂಬುದು ಗಮನಾರ್ಹ.

ಯೇಸುವಿನ ಬೋಧನೆಯಲ್ಲಿ ಇದಕ್ಕೆ ತದ್ವಿರುದ್ಧವಾದ ಆಶಯವಿದೆ. “ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು” ಎಂಬ ಯೇಸುವಿನ ಮಾತು ಸಹೋದರನನ್ನು ಅತಿಕ್ರಮಿಸುವುದಕ್ಕೆ ಯೇಸು ನೀಡುವ ಕರೆಯಲ್ಲ, ಬದಲು ಸಂದಾನಕ್ಕೆ ನೀಡುವ ಕರೆ. ಇದೊಂದು ರಾಜಕೀಯ ಸಂದಾನವಲ್ಲ, ಬದಲು ಸಂಬಂಧಗಳ ಸಂದಾನ. ಇಲ್ಲಿ ಬಳಕೆಯಾದ ‘ಸಹೋದರ’ ಎಂಬ ಪದಕ್ಕೆ ಗ್ರೀಕ್ ಭಾಷೆಯಲ್ಲಿ ‘ಅಡೆಲ್ಫೋಸ್’ ಎಂಬ ಪದ ಬಳಕೆಯಾಗಿದೆ. ಇದು ‘ಡೆಲ್ಫುಸ್’ ಎಂಬ ಮೂಲಧಾತುವಿನಿಂದ ಬಂದ ಪದವಾಗಿದ್ದು ‘ಡೆಲ್ಫುಸ್’ ಎಂದರೆ ಮಾತೃಗರ್ಭ ಎಂದರ್ಥ. ಅಂದರೆ ಒಂದೇ ಗರ್ಭದಿಂದ ಹುಟ್ಟಿಬಂದ ಮಾನವತೆಯನ್ನು ಇದು ಸೂಚಿಸುತ್ತದೆ. ಇಲ್ಲಿ ‘ಓಯ್ಕುಮೆನೆ’ ಎಂಬ ಪದವೂ ಹೊಸ ಅರ್ಥವನ್ನು ಕಂಡುಕೊಳ್ಳುತ್ತದೆ. ಅಂದರೆ ಒಂದು ಮಾನವ-ಕುಟುಂಬವನ್ನು ಕಟ್ಟುವುದಕ್ಕಾಗಿ ಸಂಧಾನವಾಗುವುದು ಮತ್ತು ಒಂದಾಗುವುದು ಎಂಬುದು ಇದರ ಅರ್ಥ. ಇಂಥ ಕುಟುಂಬ ನ್ಯಾಯ ಮತ್ತು ಶಾಂತಿಯ ತಳಹದಿಯಲ್ಲಿ ಸ್ಥಾಪಿತವಾಗುವ ಕುಟುಂಬವೇ ಹೊರತು ಅನ್ಯಾಯ, ಅಧಿಕಾರ, ಯುದ್ಧಗಳಿಂದ ಸ್ಥಾಪಿತವಾಗುವ ರಾಜಮನೆತನದ ಸಾಮ್ರಾಜ್ಯವಲ್ಲ. ಆದ್ದರಿಂದಲೇ ಈ ಕುಟುಂಬದಲ್ಲಿ ಸಂಬಂಧ, ಬಾಂಧವ್ಯ, ಪರಸ್ಪರ ಗೌರವ ಇವು ಆಚರಿಸಲ್ಪಟ್ಟು ನ್ಯಾಯ ಮತ್ತು ಶಾಂತಿಯ ಸಾಕಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸಭೈಕ್ಯವಾದವನ್ನು ಮರುಅವಲೋಕಿಸಿ ಕಾರ್ಯೋನ್ಮುಖರಾಗುವುದು ಅಗತ್ಯ.