ಗ್ಲ್ಯಾಡ್ ಸನ್ ಜತ್ತನ್ನ
ಇದು ನವಂಬರ್ ತಿಂಗಳು. ಕನ್ನಡಿಗರ ಮನೆಮನಗಳಲ್ಲಿ ಹಳದಿ-ಕೆಂಪು ಬಾವುಟ ಹಾರುವ ತಿಂಗಳು. ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಕಿಟ್ಟೆಲ್ ಪುತ್ಥಳಿಗೆ ಈ ತಿಂಗಳು ಒಂದು ಹೊಸ ಹೂಮಾಲೆ ಬೀಳಲಿದೆ. ಸ್ವಿಟ್ಸರ್ಲ್ಯಾಂಡಿನಿಂದ ಭಾರತಕ್ಕೆ ಕ್ರಿಶ್ಚಿಯನ್ ಮತಪ್ರಚಾರಕ್ಕೆಂದು ಬಂದು ಕನ್ನಡದ ನೆಲದಲ್ಲಿ ಒಂದಾಗಿ ಮತಪ್ರೇಮಕ್ಕಿಂತಲೂ ಕನ್ನಡಪ್ರೇಮವೇ ಮಿಗಿಲೆಂದು ಕಂಡ ಅಪ್ರತಿಮ "ಕನ್ನಡಿಗ" ಡಾ. ಫೆರ್ಡಿನಾಂಡ್ ಕಿಟ್ಟೆಲ್. |
ಡಾ. ಫೆರ್ಡಿನಾಂಡ್ ಕಿಟ್ಟೆಲ್
|
|
|
| |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
ಕಿಟ್ಟೆಲ್ ರವರ ಬದುಕು ಮತ್ತು ಸಾಹಿತ್ಯ ಕೊಡುಗೆ ಈಗಾಗಲೇ ನೂರಾರು ಸೆಮಿನಾರುಗಳು, ಫೋಟೋ ಎಕ್ಸಿಬಿಷನ್ಗಳು, ಲೇಖನಗಳು ಹಾಗೂ ಪುಸ್ತಕಗಳ ಮೂಲಕ ವೈಭವೋಪೇತವಾಗಿ ಆಚರಿಸಲ್ಪಟ್ಟಿದೆ. ಅದು ಸೂಕ್ತ ಮತ್ತು ಮೆಚ್ಚತಕ್ಕದ್ದೇ. ಆದರೆ ಎಲ್ಲೋ ಒಂದೆಡೆ ಈ ಎಲ್ಲಾ ಆಚರಣೆಗಳೂ ಏಕಪಕ್ಷೀಯವಾಗಿವೆಯೇನೋ ಎಂಬ ಆತಂಕ ಸಹೃದಯರನ್ನು ಕಾಡುತ್ತಲೇ ಇದೆ. ಪಾಶ್ಚಾತ್ಯ ಮಿಷನರಿಗಳ ಕೊನೆಯಿಲ್ಲದ ಗುಣಗಾನದ ಗುಂಗಿನಲ್ಲಿ ನಮ್ಮ ದೇಶೀಯ ಸಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಸಾಂಸ್ಥಿಕವಾಗಿ ಮರೆಯಲಾಗುತ್ತಿದೆಯೇನೋ ಎಂಬ ಅಸಮಾಧಾನ ಮತ್ತು ಆತಂಕ ಅನಿವಾರ್ಯವಾಗಿದೆ. ಹೀಗೆ ಚರಿತ್ರಾಕಾರರಿಂದ, ಭಾಷಾಪಂಡಿತರಿಂದ, ಧಾರ್ಮಿಕ ಮುಖಂಡರಿಂದ ಮರೆಯಲ್ಪಟ್ಟರೂ ಮತ್ತೆ ಮತ್ತೆ ಮಾತನಾಡುವ ಕನ್ನಡದ ಮಾಣಿಕ್ಯ ಧರ್ಮಗುರು ಶ್ರೀ ಚನ್ನಪ್ಪ ಉತ್ತಂಗಿಯವರು.
|
ಶ್ರೀ ಚನ್ನಪ್ಪ ಉತ್ತಂಗಿ |
ಬಸವಣ್ಣ, ಅನುಭವ ಮಂಟಪ, ಶೂನ್ಯ ಸಂಪಾದನೆ, ವೀರಶೈವ ಧರ್ಮ ಹಾಗೂ ಸರ್ವಜ್ಞನ ಕುರಿತು ಆಳವಾದ ಅಧ್ಯಯನ ನಡೆಸಿ ವಿಫುಲ ಸಾಹಿತ್ಯ ರಚನೆಯ ಮೂಲಕ ಕನ್ನಡ ಸಾಹಿತ್ಯ ಲೋಕದ ಭೀಷ್ಮಾಚಾರ್ಯರಾದವರು ಸಾಹಿತಿ, ವೇದಾಂತಿ ಮತ್ತು ಪಾದ್ರಿ ಚನ್ನಪ್ಪ ಉತ್ತಂಗಿ. ೧೮೮೧ರ ಅಕ್ಟೋಬರ್ ೨೮ರಂದು ಧಾರವಾಡದ ದಾನಿಯೇಲಪ್ಪ ಮತ್ತು ಸುಭದ್ರವ್ವ ದಂಪತಿಗೆ ಹರಕೆಯ ಫಲವೆಂಬಂತೆ ಜನಿಸಿದ ಶಿಶು ತಾತನ ಹೆಸರನ್ನೇ ಬಳುವಳಿಯಾಗಿ ಪಡೆದ ಚನ್ನಪ್ಪ.
ಕ್ರಿಶ್ಚಿಯನ್ ಧರ್ಮದ ಗುರುದೀಕ್ಷೆ ಪಡೆದು ಹಲವು ವರ್ಷ ಅವಿರತವಾಗಿ ಧಾರವಾಡ, ಗದಗ, ಮುಂಡರಗಿ, ಹಾವೇರಿ ಮತ್ತು ಹುಬ್ಬಳ್ಳಿ ಸುತ್ತಣ ಚರ್ಚುಗಳಲ್ಲಿ ಸೇವೆಗೈದ ಚನ್ನಪ್ಪನವರ ಮೂಲಜರು ಲಿಂಗಾಯಿತರು. ತಾತ ಪಾರುಪತ್ತ್ಯೆಗಾರ ಚನ್ನಪ್ಪ ಪಂಚಮಸಾಲಿ ಲಿಂಗಾಯಿತರು. ಪತ್ನಿಯ ಅಕಾಲಿಕ ಮರಣದಿಂದ ವ್ಯಥೆಗೊಂಡ ತಾತ ಚನ್ನಪ್ಪ ಊರೂರು ಸುತ್ತಿ ಜೀತದಾಳಾಗಿ ದುಡಿದು ಕೊನೆಗೆ ತನ್ನ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉತ್ತಂಗಿಯಲ್ಲಿ ಪಾರುಪತ್ಯೆಗಾರನಾಗಿ ನೆಲೆನಿಂತರು. ಧರ್ಮಗ್ರಂಥಗಳ ಕಡೆಗಿನ ಇವರ ವ್ಯಾಮೋಹ ಮತ್ತು ಆಸಕ್ತಿಯನ್ನರಿತ ಪಾದ್ರಿಯೊಬ್ಬರು ಬೈಬಲಿನ "ಹೊಸ ಒಡಂಬಡಿಕೆ" ಪ್ರತಿಯನ್ನು ಇವರ ಕೈಗಿತ್ತರು. ಅದರ ಓದಿನಲ್ಲೇ ಹಗಲಿರುಳು ಮುಳುಗಿದ ಚನ್ನಪ್ಪನಿಗೆ ಅದರಲ್ಲಿ ನಂಬಿಕೆ ಹುಟ್ಟಿತು. ಕೊನೆಗೊಂದು ದಿನ ಕ್ರಿಶ್ಚಿಯನ್ ಆಗಲು ನಿರ್ಧರಿಸಿಯೇ ಬಿಟ್ಟರು. ಧಾರವಾಡಕ್ಕೆ ಬಂದು ಬಾಸೆಲ್ ಮಿಷನ್ ಪಾದ್ರಿಗಳಲ್ಲಿ ತಮ್ಮ ಇಂಗಿತವನ್ನು ತೋಡಿಕೊಂಡಾಗ ಪಾದ್ರಿಗಳು ಅವರ ಧರ್ಮಶ್ರದ್ಧೆಯನ್ನು ಅನುಮಾನಿಸಿದರು. ತಮ್ಮ ಶ್ರದ್ಧೆಯ ಯತಾರ್ಥತೆಯನ್ನು ಸಾಭೀತುಪಡಿಸಲು ಚನ್ನಪ್ಪ ದಂಪತಿಗಳು ಅಲ್ಲಿಯೇ ನಿಂತುಬಿಟ್ಟರು. ಅವರ ಶ್ರದ್ಧೆಯ ಸ್ಥಿರತೆ ಕಂಡ ಪಾದ್ರಿ ಆ ದಂಪತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಿಕೊಂಡರು. ಹೀಗೆ ಉತ್ತಂಗಿಯ ಚನ್ನಪ್ಪ ಕುಟುಂಬ ಲಿಂಗಾಯಿತ ಮತದಿಂದ ಕ್ರಿಶ್ಚಿಯನ್ ಮತಕ್ಕೆ ತಿರುಗಿತು. ಹೀಗಿದ್ದರೂ ಈ ಕುಟುಂಬದಲ್ಲೇ ಹುಟ್ಟಿಬಂದ ಚನ್ನಪ್ಪ ಉತ್ತಂಗಿಯ ಮನಸ್ಸು ಮಾತ್ರ ವೀರಶೈವ ಧರ್ಮ ಹಾಗೂ ಸಾಹಿತ್ಯಗಳ ಕಡೆಗೆ ಹೊರಳಿದ್ದು ಕನ್ನಡದ ಸೌಭಾಗ್ಯ.
ಬಾಲ್ಯದಿಂದಲೂ ಯಂತ್ರಜ್ಞಾನದಲ್ಲಿ ವಿಶೇಷ ಆಸ್ಥೆಯನ್ನು ಹೊಂದಿದ್ದ ಚನ್ನಪ್ಪನಿಗೆ ಶಾಲೆಯ ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಧಾರವಾಡದ ಸ್ಟೂಡೆಂಟ್ಸ್ ಹೋಂನಲ್ಲಿ ಇಂಗ್ಲಿಷ್ ಕಲಿಕೆಯಲ್ಲಿ ತೊಡಗಿ ಮುಂದೆ ಅಲ್ಲಿಯ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ನಾಲ್ಕನೇ ವರ್ಗಕ್ಕೆ ಪ್ರವೇಶ ಗಿಟ್ಟಿಸಿಕೊಂಡ ಚನ್ನಪ್ಪನಿಗೆ ವಿದೇಶೀ ಮಿಷನರಿಗಳ ಪಾಠಕ್ರಮ ಮತ್ತು ಬೋಧನಾವಿಧಾನಕ್ಕೆ ಒಗ್ಗಿಕೊಳ್ಳುವುದು ತೀರಾ ಕಷ್ಟವೆನಿಸಿತು. ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ಕಿಂಚಿತ್ತೂ ಸ್ಥಳವಿಲ್ಲದ ರೀತಿಯಲ್ಲಿ ಅಲ್ಲಿನ ಪಾಠಕ್ರಮ ರೂಢಿಯಲ್ಲಿತ್ತು. ಚನ್ನಪ್ಪನಾದರೋ ಪ್ರಶ್ನೆಗಳೇ ಜ್ಞಾನದ ಕೇಂದ್ರ ಎಂದು ನಂಬಿದ್ದ ಹುಡುಗ. ತರಗತಿಯಲ್ಲಿ ಶಿಕ್ಷಕರಿಗೆ ಹಲವು ಪ್ರಶ್ನೆಗಳನ್ನು ಹಾಕುವ ಮೂಲಕ ಶಿಕ್ಷಕರ ಉಗ್ರದೃಷ್ಟಿಗೆ ಬಲಿಯಾದ ಮತ್ತು ಹಲವು ಬಾರಿ ಶಿಕ್ಷೆಗೂ ಗುರಿಯಾದ. ಇದು ಅವನಲ್ಲಿ ಶಾಲಾಶಿಕ್ಷಣದ ಪರ ಜಿಗುಪ್ಸೆಯ್ಸನ್ನೇ ಹುಟ್ಟಿಸಿತು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಮುಂದೆ ಯಂತ್ರಜ್ಞಾನದ ಅಧ್ಯಯನಕ್ಕೆ ಸೇರಬೇಕೆಂಬ ಬಯಕೆಯೇನೋ ಚನ್ನಪ್ಪನಲ್ಲಿತ್ತು. ಆದರೆ ಕುಟುಂಬದ ಕಡುಬಡತನದ ವಾಸ್ತವ ಆ ಬಯಕೆಯನ್ನು ಗರ್ಭದಲ್ಲೇ ಹೊಸಕಿಹಾಕುವಂತೆ ಮಾಡಿತು. ಅತ್ತ ಕ್ರಿಸ್ತನ ಪರಮಭಕ್ತೆಯಾದ ತಾಯಿ ಮಗನಿಗೆ ತನ್ನ ಹರಕೆಯ ನೆನಪನ್ನು ಹುಟ್ಟಿಸುತ್ತಲೇ ಇದ್ದಳು. "ನೀನು ಹುಟ್ಟಿದರೆ ಕ್ರಿಸ್ತಸೇವೆಗೆ ನಿನ್ನನ್ನು ಅರ್ಪಿಸುತ್ತೇನೆ ಎಂದು ನಾನು ಹರಕೆ ಹೊತ್ತಿದ್ದೆ. ಈಗಲಾದರೂ ನೀನು ಕ್ರೈಸ್ತ ದೈವಜ್ಞಾನ ಶಾಲೆಗೆ ಸೇರು" ಎಂಬ ತಾಯಿಯ ಕೋರಿಕೆಗೆ ಮಣಿದು ೧೯೦೪ರಲ್ಲಿ ಚನ್ನಪ್ಪ ಮಂಗಳೂರಿನ ದೈವಜ್ಞಾನ ಶಾಲೆಗೆ ಸೇರ್ಪಡೆಯಾದರು. ವಿದೇಶೀ ಮಿಷನರಿಗಳ ಶಾಲಾಶಿಕ್ಷಣ ಪದ್ಧತಿಯ ವಿರುದ್ಧ ಚನ್ನಪ್ಪನಿಗೆ ಇದ್ದ ಅಸಮಾಧಾನ ದೈವಜ್ಞಾನ ಶಿಕ್ಷಣ ಪದ್ಧತಿಯ ವಿರುದ್ಧವೂ ಬೆಳೆಯಿತು. ಸ್ವಾಭಿಮಾನ, ವಿಚಾರಪರತೆ, ಧೀರತೆ, ಮತ್ತು ಸಚ್ಚಾರಿತ್ರ್ಯಗಳನ್ನು ಉಸಿರಾಗಿಸಿಕೊಂಡಿದ್ದ ಇವರಿಗೆ ಅಲ್ಲಿಯ ಶಿಕ್ಷಣ ಪದ್ಧತಿ ಉಸಿರು ಕಟ್ಟಿಸುವಂತಿತ್ತು. ಶಾಲಾ ಆಡಳಿತ ಮತ್ತು ಶಿಕ್ಷಣದಲ್ಲಿ ವಿದೇಶೀ ಮಿಷನರಿಗಳ ಮೇಲುಗೈ ಅಸಹ್ಯ ಹುಟ್ಟಿಸಿತು. ಶಾಲೆಗೆ ಸೇರಿದ ಕೆಲವು ದಿನಗಳಲ್ಲಿಯೇ ಈ ಅಸಂಗತ ಅಂಶಗಳನ್ನು ಗುರುತಿಸಿ ನಿರ್ಭೀತರಾಗಿ ತಮ್ಮ ಆಕ್ಷೇಪಣೆಗಳನ್ನು ಪ್ರಾಧ್ಯಾಪಕರ ಮುಂದೆ ನಿವೇದಿಸಿದರು. ಆದರೆ ಪ್ರಾಧ್ಯಾಪಕರುಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಇದ್ದಾಗ ಬೇಸತ್ತು, ಆದರೆ ವಿಚಲಿತರಾಗದೆ, ಸ್ವಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಾಲ್ಯದಿಂದಲೂ ತನಗೆ ಜ್ಞಾಪಕಶಕ್ತಿ ಕಡಿಮೆ ಎಂದುಕೊಂಡಿದ್ದ ಚನ್ನಪ್ಪನವರು ಏನನ್ನೇ ಓದಿದರೂ ವಿವರವಾಗಿ ಟಿಪ್ಪಣಿಮಾಡಿಕೊಳ್ಳುವುದನ್ನು ರೂಢಿಸಿಕೊಂಡರು. ಹೀಗೆ ಇವರ ಅಧ್ಯಯನ ಅತ್ಯಂತ ಖಚಿತವೂ ಶಾಸ್ತ್ರಬದ್ಧವೂ ಆಗುತ್ತಾ ಹೋಯಿತು.
ಅಂದಿನ ಬೋಧನಾಪದ್ಧತಿಗೆ ಬೇಸತ್ತ ಚನ್ನಪ್ಪ ವಿಶ್ವದ ಶೇಷ್ಠ ತತ್ವಜ್ಞಾನಿಗಳು ಹಾಗೂ ಮಹಾವ್ಯಕ್ತಿಗಳ ಕುರಿತು ಆಳವಾಗಿ ಅಧ್ಯಯನ ಮಾಡಿದರು. ತಮ್ಮ ಓದಿನಲ್ಲಿ ಯಾವುದೇ ಮಡಿವಂತಿಕೆಯನ್ನೂ ಇಟ್ಟುಕೊಳ್ಳದೆ ವಿಶ್ವದ ವಿವಿಧ ಧರ್ಮಗಳ ಬಗ್ಗೆ ಮುಕ್ತಮನಸ್ಸಿನಿಂದ ಅಧ್ಯಯನ ನಡೆಸಿದರು. ನಾಸ್ತಿಕವಾದವನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿ ಇಂಗರ್ಸಾಲ್, ವಾಲ್ಟೇರ್, ಪೇನ್ ಇವರ ಗ್ರಂಥಗಳನ್ನೂ ಆಳವಾಗಿ ಅಧ್ಯಯನ ಮಾಡಿದರು. ಇವರ ಈ ಎಲ್ಲಾ ಅಧ್ಯಯನಗಳೂ ತೌಲನಿಕ ದೃಷ್ಟಿಕೋನದಿಂದ ಕೂಡಿದ್ದು ಅತ್ಯಂತ ಶಾಸ್ತ್ರೀಯವಾಗಿಯೂ ವ್ಯಾಪಕವಾಗಿಯೂ ನಡೆಯುತ್ತಿತ್ತು. ಬೈಬಲಿನಷ್ಟೇ ಕುರಾನನ್ನು, ಕುರಾನಿನಷ್ಟೇ ಶೂನ್ಯಸಂಪಾದನೆಯನ್ನು ಮತ್ತು ಶೂನ್ಯಸಂಪಾದನೆಯಷ್ಟೇ ಸರ್ವಜ್ಞನನ್ನು ಗಂಭೀರವಾಗಿ ಮತ್ತು ಅಭಿಮಾನದಿಂದ ಅಧ್ಯಯನ ಮಾಡಿದ ಚನ್ನಪ್ಪನವರು ಕ್ರೈಸ್ತ ಹಾಗೂ ವೀರಶೈವ ಧರ್ಮಗಳ ಸಾಂಸ್ಕೃತಿಕ ಸಮಾವೇಶವನ್ನು ಗುರುತಿಸಲು ಶಕ್ತರಾದರು.
ವೃತ್ತಿಯಲ್ಲಿ ಧರ್ಮಬೋಧಕರಾಗಿದ್ದರೂ ಉತ್ತಂಗಿಯವರ ಬೋಧನಾವಿಧಾನ ಅವರ ಸಮಕಾಲೀನ ಬೋಧಕರಿಗಿಂತ ತೀರಾ ಭಿನ್ನವಾಗಿತ್ತು. ಕ್ರೈಸ್ತಧರ್ಮದ ವಿಚಾರಗಳನ್ನು ದೇಶೀಕರಣಗೊಳಿಸಿ ಭಾರತೀಯ ಮನಸ್ಸುಗಳಿಗೆ ಉಣಬಡಿಸುವ ಅಪೂರ್ವ ಶೈಲಿ ಅವರ ಬೋಧನೆಯದ್ದಾಗಿತ್ತು. ಕೀರ್ತನೆ, ಹರಿಕಥೆಗಳಂತಹ ಸ್ಥಳೀಯ ಶೈಲಿಗಳನ್ನು ಬಳಸಿಕೊಂಡು ಕ್ರಿಸ್ತನ ಉಪದೇಶಗಳ ಸಾರವನ್ನು ಜನಮನ ತಲುಪುವಂತೆ ಸಾರುತ್ತಿದ್ದರು. ದೇಶೀಯ ಹಬ್ಬಗಳನ್ನು ಆಚರಿಸುತ್ತಾ ಅವುಗಳ ಮೂಲಕವೂ ಕ್ರಿಸ್ತನ ಸಂದೇಶದ ಸಾರೋಣ ಸಾಧ್ಯ ಎಂಬುದನ್ನು ಅವರು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ದೇಶೀಯ ಸಂತರ, ಶರಣರ ಕಥೆಗಳನ್ನು ಅವರು ತಮ್ಮ ಬೋಧನೆಗಳಲ್ಲಿ ಬಳಸುತ್ತಿದ್ದ ರೀತಿ ಅದ್ಭುತ. "ಕ್ರೈಸ್ತ ಧರ್ಮವೂ ನಾಗರಪಂಚಮಿಯೂ" ಎಂಬ ಚರ್ಚಾಗೋಷ್ಠಿಯಲ್ಲಿ ಇವರು ಮಂಡಿಸಿದ ಪ್ರಬಂಧವು ಭಾಷೆ, ಭಾವ, ಶೈಲಿ ಮತ್ತು ವಿವೇಚನಾ ದೃಷ್ಟಿಯಿಂದ ಇಂದಿಗೂ ಅನನ್ಯ.
ಆದರೆ ಉತ್ತಂಗಿಯವರ ದೇಶೀಕರಣ ವಿಧಾನವು ಕ್ರೈಸ್ತವಲಯದಲ್ಲಿ ವಿಪರೀತ ಟೀಕೆಗೆ ಗುರಿಯಾಯಿತು. ಬಸವಣ್ಣನವರನ್ನು ಕುರಿತು ಅವರು ನೀಡುತ್ತಿದ್ದ ಭಾಷಣಗಳು, ಸರ್ವಜ್ಞನನ್ನು ಕುರಿತು ನಡೆಸುತ್ತಿದ್ದ ಅಧ್ಯಯನಗಳು ಕ್ರಿಶ್ಚಿಯನ್ ವಲಯದೊಳಗೆ ಧರ್ಮದ್ರೋಹಿ ಎಂಬ ಖಂಡನೆಗೆ ಓಳಗಾದವು. ಅಲ್ಲದೆ ವಿದೇಶೀ ಪಾದ್ರಿಗಳ ಅನಗತ್ಯ ಯಾಜಮಾನ್ಯವನ್ನು ವಿರೋಧಿಸುವ ದೇಶಪ್ರೇಮಕ್ಕೆ ಕ್ರೈಸ್ತ ಸಂಸ್ಥೆಯಲ್ಲಿ ಎದ್ದ ದಂಗೆಯೆಂದು ಹಣೆಪಟ್ಟಿ ಕಟ್ಟಲಾಯ್ತು.
ಜಗತ್ತಿನ ವಿವಿಧ ಅನುಭಾವಿಗಳಲ್ಲಿ ಚನ್ನಪ್ಪನವರಿಗೆ ವಿಶೇಷ ಆಸಕ್ತಿ. ಕ್ರಿಸ್ತ, ಬಸವ, ಪೈಗಂಬರ್ - ಇವರೆಲ್ಲರನ್ನೂ ಗೌರವಭಾವದಿಂದ ಕಾಣುತ್ತಿದ್ದ ಮನಸ್ಸು ಅವರದ್ದು. ಹೀಗೆ ಅನುಭಾವಿಗಳ ಹುಡುಕಾಟದಲ್ಲಿದ್ದ ಅವರ ಮನಸ್ಸು ಪೂರ್ಣವಾಗಿ ಸೆರೆಗೊಂಡದ್ದು ಸರ್ವಜ್ಞನಲ್ಲಿ. ಸರ್ವಜ್ಞನ ವಚನಗಳನ್ನು ಒಂದೆಡೆ ಸಂಗ್ರಹಿಸುವ, ಅನಂತರ ಅವುಗಳ ಪಾಠಗಳನ್ನು ಅಧ್ಯಯನ ಮಾಡಿ ಶುದ್ಧ ಮಾಡುವ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡ ಚನ್ನಪ್ಪ ಸುಮಾರು ೨೦ ಪ್ರತಿಗಳ ಅಧ್ಯಯನ ನಡೆಸಿ ೨೦೦ಕ್ಕೂ ಹೆಚ್ಚು ವಚನಗಳ ಪಾಠ ಸಂಶೋಧನೆ ಹಾಗೂ ನಿರ್ಣಯಕ್ಕೆ ಮನಸ್ಸು ಕೊಟ್ಟರು. ಸರ್ವಜ್ಞನ ಈ ಅಧ್ಯಯನವನ್ನು ಅವರು ಒಂದು ತಪಸ್ಸೆಂದೇ ಕೈಗೊಂಡರು. ಅನಾರೋಗ್ಯ, ಕೌಟುಂಬಿಕ ಸಮಸ್ಯೆಗಳ ನಡುವೆಯೂ ದೀರ್ಘಕಾಲದ ಅಧ್ಯಯನದ ನಂತರ ಸರ್ವಜ್ಞನ ೨೦೦ ವಚನಗಳನ್ನು ಶೋಧಿಸಿ ತೆಗೆದರು. ಬಡತನ, ಮಡದಿಯ ಅನಾರೋಗ್ಯ, ವಿದೇಶೀ ಮಿಷನರಿಗಳ ಕಿರುಕುಳ - ಇವುಗಳನ್ನೆಲ್ಲ ಸಹಿಸಿದ ಚನ್ನಪ್ಪನವರು ೩೦೦ ಪುಟಗಳ ವಿಸ್ತೃತ ಉಪೋದ್ಘಾತ ಟಿಪ್ಪಣಿಗಳೊಡನೆ ಸರ್ವಜ್ಞನ ವಚನಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿದರು.
ಉತ್ತಂಗಿಯವರು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಮತ್ತು ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ವಿವಿಧ ಲೇಖನಗಳೂ ಬರಹಗಳೂ ಅವರ ವಿದ್ವತ್ತಿನ ಹರಹನ್ನೂ ವಿಚಾರಪಕ್ವತೆಯನ್ನೂ ನಮ್ಮ ಮುಂದೆ ಬಿಚ್ಚಿಡುತ್ತವೆ. ಬನಾರಸಕ್ಕೆ ಬೇತ್ಲೆಹೇಮಿನ ವಿನಂತಿ, ಹಿಂದೂ ಸಮಾಜದ ಹಿತಚಿಂತಕ, ಮಕ್ಕಳ ಶಿಕ್ಷಣ ಪಟ, ನಾರಾಯಣ ವಾಮನ ತಿಲಕರ ಜೀವನ ಚರಿತ್ರೆ, ಸರ್ವಜ್ಞನ ವಚನಗಳು, ಬಸವೇಶ್ವರನೂ ಅಸ್ಪೃಶ್ಯರ ಉದ್ಧಾರವೂ, ಸಾದುಸುಂದರ ಸಿಂಗರ ದೃಷ್ಟಾಂತ ದರ್ಪಣ, ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ಅನುಭವ ಮಂಟಪದ ಐತಿಹಾಸಿಕತೆ, ಸಿದ್ದಾರಾಮ ಸಾಹಿತ್ಯಸಂಗ್ರಹ, ಆದಯ್ಯನ ವಚನಗಳು, ಮೃತ್ಯುಂಜಯ - ಇವು ಅವರ ಕನ್ನಡದ ಕೃತಿಗಳು. ಇಷ್ಟೇ ಅಲ್ಲದೆ ವಿವಿಧ ಪತ್ರಿಕೆಗಳಲ್ಲಿ ಹಲವು ಲೇಖನಗಳನ್ನೂ ಪ್ರಕಟಿಸಿದ್ದಾರೆ: ಸರ್ವಜ್ಞನ ವಚನಗಳ ಸಂಶೋಧನೆ, ವಚನಾಂಕಿತದಲ್ಲಿರುವ ಐತಿಹಾಸಿಕಾಂಶಗಳು, ಜಾನಪದ ಸಾಹಿತ್ಯ, Contribution of Christian
Missionaries for the Development of Karnataka, Synopsis for the Studies in
Lingayatism. ಇದರೊಂದಿಗೆ ಹಲವು ಗ್ರಂಥಗಳು ಮುದ್ರಣಕ್ಕೆ ಸಿದ್ಧವಾಗಿದ್ದವು: A Faith, Philosophy and
Religion; Complete Concordance to Bhagavadgeetha; Yellamma, a Goddess of
South India; Creation; A Wonderful Child of God; From Cross to Crown
through Crosswords, a Comedy. ಈ ಕೃತಿಗಳಲ್ಲದೆ ಚನ್ನಪ್ಪನವರು ಕವಿತೆಗಳನ್ನೂ ರಚಿಸುವ ಮೂಲಕ ಕವಿಹೃದಯವನ್ನು ಮೆರೆದಿದ್ದಾರೆ.
ಹೀಗೆ ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ ಚನ್ನಪ್ಪ ಉತ್ತಂಗಿ ತನ್ನನ್ನು "ತಿರುಳುಗನ್ನಡದ ತಿರುಕ" ಎಂದೇ ಕರೆದುಕೊಂಡರು. ತನ್ನ ಬರಹ, ಬೋಧನೆ ಮತ್ತು ಬದುಕಿನ ಮೂಲಕ ಅಪಾರ ವಿದ್ವತ್ತನ್ನು ಮೆರೆದ ಇವರು ಕನ್ನಡದ ಪಾಲಿಗೆ ಒಂದು ಅಪ್ರತಿಮ ಆಸ್ತಿಯೇ ಸರಿ. ೧೯೪೯ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಅಲಂಕರಿಸುವ ಮೂಲಕ ಕನ್ನಡದ ಮೆರುಗನ್ನು ಹೆಚ್ಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ೧೯೭೧ರಲ್ಲಿ ಉತ್ತಂಗಿಯವರ ಸಮಗ್ರ ಜೀವನ ಚರಿತ್ರೆಯನ್ನು ಮತ್ತು ೧೯೮೨ರಲ್ಲಿ "ಉತ್ತಂಗಿ ಚನ್ನಪ್ಪನವರು" ಎಂಬ ಗ್ರಂಥವನ್ನು ಪ್ರಕಟಿಸಿ ಈ ಅಭೂತಪೂರ್ವ ಸಾಹಿತಿಗೆ ಗೌರವ ಸಮರ್ಪಿಸಿತು.
ಹುಟ್ಟು ಹೋರಾಟಗಾರರಾದ ಚನ್ನಪ್ಪನವರ ಬದುಕೇ ಒಂದು ಹೋರಾಟವಾಗಿತ್ತು. ೨೫ ವರ್ಷಗಳಷ್ಟು ದೀರ್ಘಕಾಲ ರುಗ್ಣಶಯ್ಯೆಯಲ್ಲಿದ್ದ ಪತ್ನಿ ಸುಭಕ್ತವ್ವ, ಹುಟ್ಟಿದ ಹತ್ತು ಮಕ್ಕಳಲ್ಲಿ ನಾಲ್ಕು ಮಕ್ಕಳನ್ನು ಉಳಿಸಿಕೊಳ್ಳಲಾಗದ ವಿಪ್ಲವ ಮತ್ತು ಆಗಾಗ ಕಾಡುತ್ತಿದ್ದ ಅನಾರೋಗ್ಯ, ಬಡತನ, ದೇಶೀ ವಿದೇಶೀ ಕ್ರೈಸ್ತ ನಾಯಕರುಗಳ ವಿರೋಧ - ಇಂಥ ಹೋರಾಟದ ನಡುವೆಯೂ ಬದುಕನ್ನು ಅತಿಯಾಗಿ ಪ್ರೀತಿಸಿ, ಆ ಪ್ರೀತಿಯ ಸವಿಯನ್ನು ಇತರರಿಗೆ ಉಣಿಸಿದ ಜನಾನುರಾಗಿ ಚನ್ನಪ್ಪ ೧೯೬೨ರ ಆಗಸ್ಟ್ ೨೮ರಂದು ವಿಧಿವಶರಾದರೂ ಇಂದಿಗೂ ಕನ್ನಡಿಗರ ಮನೆ-ಮನಗಳಲ್ಲಿ ವಾಸವಾಗಿದ್ದಾರೆ. ಅತ್ಯಂತ ಸ್ವಾಭಿಮಾನಿ ಮತ್ತು ನಿರ್ಭೀತ ವರ್ಚಸ್ಸಿನಿಂದ ಜನಜನಿತರಾದ ಇವರು ತಮ್ಮ ಸಾಧನೆಯ ಕುರಿತು ಎಂದಿಗೂ ಬೀಗಿದವರಲ್ಲ. ಕ್ರಿಸ್ತ, ಬಸವ, ಸರ್ವಜ್ಞರ ಪ್ರಭಾವದಿಂದಲೋ ಏನೋ ಅವರಲ್ಲಿ ದೈನ್ಯಭಾವವಲ್ಲದೆ ಒಂದಿಷ್ಟೂ ಅಹಮಿಕೆಯ ಕುರುಹಿರಲಿಲ್ಲ. "ನಾನೊಬ್ಬ ತಿಳಿತಿಳಿವಿನ ತಿರುಕ; ತಿರುಳುಗನ್ನಡದ ತಿರುಕ; ಹಾಡಿ ಬೇಡಿದವನಲ್ಲ; ಬೇಡಿ ಬಾಳಿದವನಲ್ಲ" - ತನ್ನ ಕುರಿತು ಆಡುವ ಈ ಸ್ವ-ಆವಿಷ್ಕಾರದ ನುಡಿ ಕವಿಯ ಧೈನ್ಯತೆಗೆ ಹಿಡಿದ ಕನ್ನಡಿ. ಈ ಅರಿವೇ ಪ್ರಾಯಶಃ ಚನ್ನಪ್ಪನವರನ್ನು ಜಗತ್ತಿನ ಅನುಭಾವಿಗಳ ಪಟ್ಟಿಯಲ್ಲಿ ಸೇರಿಸಿದ್ದು ಎಂದರೆ ತಪ್ಪಾಗಲಾರದು.
ತುಂಬ ಉತ್ತಮವಾದ ಮಾತುಗಳು ಕನ್ನಡದ ಬಗ್ಗೆ.
ReplyDelete