Friday, June 12, 2020

ಆಲಯಕ್ಕೆ ಹೋಗದಿರಿ, ನೀವೇ ಆಲಯವಾಗಿರಿ - ಏನಿದು ಅಭಿಯಾನ?

 ಗ್ಲ್ಯಾಡ್ ಸನ್ ಜತ್ತನ್ನ 
 


ಇವತ್ತು ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ಯಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ #don'tgotochurchBEthechurch# ಅಂದ್ರೆ #ಆಲಯಕ್ಕೆ ಹೋಗಬೇಡಿ, ನೀವೇ ಆಲಯವಾಗಿರಿ# ಅನ್ನೋ ಒಂದು ಅಭಿಯಾನ ನಡೀತಾ ಇದೆ. ಇದಕ್ಕೆ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆಗಳು ಬರ್ತಾ ಇವೆ. 

ಏನಿದು ಅಭಿಯಾನ? 'ಯಾರೋ ನಾಲ್ಕು ಮಂದಿ ಚರ್ಚ್-ವಿರೋಧಿಗಳು ನಡೆಸ್ತಾ ಇರೋ ಕಿಡಿಗೇಡಿತನ ಇದು' ಅನ್ನೋರು ಕೆಲವರು. 'ಇಲ್ಲಪ್ಪಾ, ಚರ್ಚು, ಆಲಯ, ಸಭೆ, ಆರಾಧನೆ ಇವೆಲ್ಲಾ ಪುರೋಹಿತಶಾಹಿ ವರ್ಗ ನಮ್ಮ ಕಣ್ಣಿಗೆ ಕಟ್ಟಿರೋ ಕಪ್ಪು ಪಟ್ಟಿ, ಇದನ್ನು ತೆಗೆದು ಎಸೆಯಿರಿ ಅಂತಾ ಹೇಳ್ತಾ ಇರುವ ಚಳುವಳಿ ಇದು' ಅನ್ನೋರು ಮತ್ತೆ ಕೆಲವರು. ಈ ಎರಡು ಅಭಿಪ್ರಾಯಗಳ ಚೌಕಟ್ಟಿನಿಂದ ಹೊರನಿಂತು ಈ ಅಭಿಯಾನವನ್ನು ಅರ್ಥವಿಸುವ ಅಗತ್ಯವಿದೆ.

ಇನ್ನು ಕೆಲವೇ ದಿನಗಳಲ್ಲಿ ನಮ್ಮೂರುಗಳಲ್ಲಿ ಮೂರು ತಿಂಗಳಿನಿಂದ ಮುಚ್ಚಿದ್ದ ಚರ್ಚ್ ಕಟ್ಟಡಗಳು ಆರಾಧನೆಗಾಗಿ ತೆರೆಯಲ್ಪಡ್ತವೆ. ದೈಹಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು, ನೈರ್ಮಲ್ಯೀಕರಣದ ಪಾಲನೆ - ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಆರಾಧನೆ ನಡೆಸಲಾಗುತ್ತೆ ಅನ್ನೋ ಭರವಸೆ ಕೂಡಾ ಕೊಡಲಾಗಿದೆ. ಕೊರೋನಾ ಸೋಂಕು ನಮ್ಮ ಮನೆಗಳಿಗೆ, ಕುಟುಂಬಗಳಿಗೆ,  ಸಭೆಗಳಿಗೆ, ಸಮಾಜಕ್ಕೆ ತಟ್ಟದಿರಲಿ ಅಂತ ಪ್ರಾರ್ಥನೆ ಮಾಡುವ ಮಂದಿ, ತಮ್ಮ ಪ್ರಾರ್ಥನೆ ಈಡೇರುವುದಕ್ಕೆ ದೇವರೊಂದಿಗೆ ಕೈಜೋಡಿಸುವುದು ಕೂಡಾ ಅಗತ್ಯ ಅಲ್ಲವೇ? ಹಾಗೆ ದೇವರೊಂದಿಗೆ ಕೈಜೋಡಿಸುವುದಕ್ಕಾಗಿ ನಾವು ಚರ್ಚುಗಳಲ್ಲಿ ಅಷ್ಟು ತರಾತುರಿಯಲ್ಲಿ ಸೇರಿಬರಲು ಪ್ರಯತ್ನಿಸುತ್ತಾ ಇರೋದು ಅಂತ ಹೇಳಿದರೆ, ನಮ್ಮ ವಾದದಲ್ಲಿ ಎಲ್ಲಿಯೋ ಏನೋ ಲಾಜಿಕ್ ಮಿಸ್ ಆಗ್ತಿದೆ ಅನ್ನಿಸೋದಿಲ್ವಾ? ಈ ಕಾರಣಕ್ಕಾಗಿ ಪ್ರಾಯಶಃ ನಾವು ಈ ಮೇಲಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. 

ಈ ಅಭಿಯಾನದಲ್ಲಿ ಹರಿದಾಡುತ್ತಿರುವ ಒಂದು ಕಾರ್ಟೂನ್ ಚಿತ್ರ ಹೀಗಿದೆ:
ಯೇಸು ತನಗೆ ಚರ್ಚನ್ನು ತೋರಿಸ್ತಾನೆ ಅನ್ನೋ ಬಯಕೆಯಿಂದ ಒಬ್ಬ ವ್ಯಕ್ತಿ ಯೇಸುವನ್ನು ಹಿಂಬಾಲಿಸ್ತಾ ಇದ್ದಾನೆ. ಆದರೆ ಯೇಸು ಸ್ಥಾವರದ ಚರ್ಚನ್ನು ವೇಗವಾಗಿ ದಾಟಿಹೋಗುವಾಗ ಬೇಸರಗೊಂಡ ವ್ಯಕ್ತಿ ಯೇಸುವಿಗೆ ಕೇಳ್ತಾನೆ, "ಯೇಸುವೇ, ನೀನು ನನಗೆ ಚರ್ಚು ತೋರಿಸ್ತೀನಿ ಅಂತ ಹೇಳಿದ್ದೆ. ಆದ್ರೆ ಈಗ ಚರ್ಚ್ ಕಟ್ಟಡದ ಎದುರಿಗೇ ವೇಗವಾಗಿ ಅದನ್ನ ದಾಟಿ ಹೋಗ್ತಾ ಇದ್ದೇವೆ. ಯಾಕದು?" ಅದಕ್ಕೆ ಯೇಸುವಿನ ಉತ್ತರ, "ಚರ್ಚು ಅನ್ನೋದು ಕಟ್ಟಡಕ್ಕೆ ಸಂಬಂಧಿಸಿದ್ದು ಅಂತ ಯಾರು ಹೇಳಿದ್ದು?"

ಈ ಪ್ರಶ್ನೆ ಇವತ್ತು ಹಿಂದೆಂದಿಗಿಂತಲೂ ಅಗತ್ಯ ಮತ್ತು ಅರ್ಥಗರ್ಭಿತ. ಸ್ಥಾವರದ ಚರ್ಚಿನ ಬಾಗಿಲನ್ನು ತೆರೆಯುವ ನಮ್ಮ ತರಾತುರಿ ಬಹುಷಃ ಚರ್ಚಿನ ಕುರಿತಾದ ನಮ್ಮೊಳಗಿರುವ ತಪ್ಪು ಕಲ್ಪನೆಯನ್ನು ಪ್ರಶ್ನಿಸುತ್ತದೆ. 

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ದಿನಗಳ ಹಿಂದೆ 'ಚರ್ಚುಗಳ ಮೇಲಿನ ಎಲ್ಲಾ ವಿಧದ ನಿರ್ಬಂಧಗಳನ್ನು ಸಡಿಲಿಸಬೇಕು, ಯಾಕೆಂದರೆ ಚರ್ಚುಗಳು ಮತ್ತು ಆರಾಧನಾ ಸ್ಥಳಗಳು ನಮ್ಮ ವಿಶ್ವಾಸಕ್ಕೆ ಅತೀ ಅವಶ್ಯಕ (essential)' ಎಂಬ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಈ ಅಭಿಯಾನ ಆರಂಭವಾಗಿದೆ.   

ಯಾವುದು ನಮ್ಮ ವಿಶ್ವಾಸಕ್ಕೆ ಎಸ್ಸೆನ್ಶಿಯಲ್ (ಅತ್ಯವಶ್ಯಕ)? ಕ್ರೈಸ್ತ ವಿಶ್ವಾಸ ಮತ್ತು ಪರಂಪರೆಯ ಬೆಳಕಿನಲ್ಲಿ ನೋಡಿದರೆ, ಚರ್ಚು ಎಂಬ ಕಟ್ಟಡ ಕ್ರೈಸ್ತವಿಶ್ವಾಸದ ಅತೀ ಅಗತ್ಯ ತಳಪಾಯ ಅಲ್ಲವೇ ಅಲ್ಲ. ಸುವಾರ್ತೆ, ಪ್ರೀತಿ, ಸಾಕ್ಷಿಯ ಬದುಕು, ನ್ಯಾಯ-ಧರ್ಮ-ಶಾಂತಿ-ಸಮಾನತೆಯಿಂದ ಕೂಡಿದ ದೇವರ ರಾಜ್ಯದ ಸಾಕಾರ - ಇವೆಲ್ಲವೂ ಆದಿಸಭೆಯಿಂದಲೂ ಕ್ರೈಸ್ತವಿಶ್ವಾಸದ essentials, ಅಂದರೆ ಅತೀ ಅವಶ್ಯಕಗಳು, ಎಂಬುದು ಚರಿತ್ರೆಯಿಂದ ವೇದ್ಯವಾಗುವ ಸತ್ಯ. 

ಹಾಗಂದ ಮಾತ್ರಕ್ಕೆ ಆರಾಧನಾ ಸ್ಥಳಗಳು, ಸಭಾ ಆರಾಧನೆಗಳು, ಸಭಾಪಾಲಕರು, ಸಭಾಕ್ರಮಗಳು ಇವೆಲ್ಲವೂ ಬೇಡವೆಂದಲ್ಲ. ಕ್ರೈಸ್ತ ವಿಶ್ವಾಸದ ಚರಿತ್ರೆಯಲ್ಲಿ ಇವೆಲ್ಲವುಗಳಿಗೂ ಅವುಗಳದೇ ಆದ ವಿಶಿಷ್ಟ ಸ್ಥಾನಗಳಿವೆ ಮತ್ತು ಅರ್ಥಗಳಿವೆ. ಇಂದು ಎಷ್ಟೋ "ಕ್ರೈಸ್ತ" ಎಂದು ಹೇಳಿಕೊಳ್ಳುವ ಗುಂಪುಗಳು, ಪಂಗಡಗಳು ಇವೆಲ್ಲವನ್ನೂ ತುಚ್ಚೀಕರಿಸಿ ವ್ಯಕ್ತಿಗತ (individualistic) ಬದುಕನ್ನು ವಿಶ್ವಾಸದ ತಳಹದಿ ಮಾಡಿಕೊಂಡಿರುವುದು ಅಪಾಯಕರ. ಇನ್ನು ಇದನ್ನೇ ಬಂಡವಾಳವಾಗಿಸಿಕೊಂಡು ತಮ್ಮ ಚೀಲ ತುಂಬಿಸಿಕೊಳ್ಳುತ್ತಿರುವ "ಕ್ರೈಸ್ತ" ಟಿ.ವಿ. ಚಾನಲ್ಲುಗಳು, ಯೂಟ್ಯೂಬ್ ಚಾನಲ್ಲುಗಳೂ ಅಷ್ಟೇ ಅಪಾಯಕಾರಿ. 

ಆದ್ದರಿಂದ ಕೊರೋನಾದ ಸೋಂಕಿನ ಸಂದರ್ಭದಲ್ಲಿ ನಾವು ಚರ್ಚಿನ ಕುರಿತಾದ ನಮ್ಮ ವಿಶ್ವಾಸವನ್ನು ಸಾಂದರ್ಭಿಕವಾಗಿ ಅರ್ಥೈಸುವ ಅನಿವಾರ್ಯತೆ ಇದೆ. ಕೊರೋನಾವನ್ನು ಪಸರಿಸಬಲ್ಲ ಚಿಕ್ಕ ಸಾಧ್ಯತೆಗೂ ಎಣೆಮಾಡಿಕೊಡದಿರುವುದು ಚರ್ಚ್ ಅಥವಾ ಕ್ರೈಸ್ತ ಸಭೆಯಾಗಿ ನಮ್ಮ ಮುಂದಿರುವ ಬಹುದೊಡ್ಡ ಜವಾಬ್ಧಾರಿ. 

ಮಿಸ್ಸೂರಿಯ ಎಪಿಸ್ಕೋಪಲ್  ಡಯಾಸಿಸ್ಸಿನ ಬಿಷಪ್ ಡಿಯೋನ್ ಜಾನ್ಸನ್ ರವರು ಇಂದು ಕ್ರೈಸ್ತ ಸಭೆ ಯಾವ ತನ್ನ ಕಾರ್ಯವನ್ನು ಎಸೆನ್ಷಿಯಲ್ ಅಥವಾ ಅತೀ ಅವಶ್ಯಕ ಅಂತ ಪರಿಗಣಿಸಬೇಕು ಅನ್ನೋದನ್ನ ಬಹಳ ಅರ್ಥಗಭಿತವಾಗಿ ತಿಳಿಸಿದ್ದಾರೆ:

"ಸಭೆಯ ಕಾರ್ಯ ಅತೀ ಅವಶ್ಯಕ." ಆದ್ರೆ ಯಾವುದು ಆ ಕಾರ್ಯ? "ಅಂಚಿನಲ್ಲಿರುವವರ, ತುಳಿತಕ್ಕೊಳಗಾದವರ, ಒಬ್ಬಂಟಿಯಾಗಿರುವವರ ಪರ ಕಾಳಜಿವಹಿಸುವ ಕಾರ್ಯ ಅತೀ ಅವಶ್ಯಕ. ಪ್ರಾಬಲ್ಯಗಳ ಕಡೆಗೆ ಧ್ವನಿಯೆತ್ತಿ ನ್ಯಾಯದ ಪರ ಮಾತನಾಡುವ ಕಾರ್ಯ ಅತೀ ಅವಶ್ಯಕ. ಪ್ರೀತಿಸುವ, ವಿಮೋಚಿಸುವ, ಮತ್ತು ಜೀವವನ್ನು ನೀಡುವ  ಕಾರ್ಯ ಅತೀ ಅವಶ್ಯಕ... ಸಭೆ "ತೆರೆಯುವ" ಅಗತ್ಯವಿಲ್ಲ, ಯಾಕೆಂದರೆ ಅದು ಎಂದೂ "ಮುಚ್ಚಿರಲಿಲ್ಲ". ಕ್ರಿಸ್ತನ ದೇಹವಾದ ನಾವು, ದೇವರನ್ನೂ ನಮ್ಮ ನೆರೆಯವರನ್ನೂ ಪ್ರೀತಿಸುವ ನಾವು, ನಮ್ಮ ಸಭಾ ಕಟ್ಟಡಗಳು ಸುರಕ್ಷಿತವಾಗುವತನಕ ಆ ಕಟ್ಟಡಗಳಿಂದ  ದೂರವಿರುತ್ತೇವೆ."

ಸ್ಥಾವರದ ಸಭೆಯನ್ನು ಪ್ರವೇಶಿಸುವ ತಾರಾತುರಿಯಲ್ಲಿರುವ ನಾವು ಸ್ವಲ್ಪ ಈ ಕುರಿತು ಯೋಚಿಸುವುದು ಅಗತ್ಯವಲ್ಲವೇ? 

ನೆನಪಿರಲಿ : ಅಪೋಸ್ತಲರ ಕ್ರತ್ಯಗಳು ಪುಸ್ತಕದಲ್ಲಿ ಬರುವ ಎಲ್ಲಾ ದೇವದರ್ಶನದ ಅಥವಾ "ದೇವರ ಅನುಭವ"ದ ಘಟನೆಗಳು ನಡೆಯುವುದೂ ಕಟ್ಟಡದ ಸಭೆಯಲ್ಲಿ ಅಲ್ಲ; ಬದಲಾಗಿ, ರಸ್ತೆಗಳಲ್ಲಿ, ಮೇಲುಪ್ಪರಿಗೆಯಲ್ಲಿ, ಮರುಭೂಮಿಯಲ್ಲಿ, ಮತ್ತು ಸೆರೆಮನೆಗಳಲ್ಲಿ. 

ಮತ್ತೆ ನಾವೇಕೆ ಇಂದು ದೇವರನ್ನು ಹುಡುಕಿಕೊಂಡು, ಅಸುರಕ್ಷಿತ ಸ್ಥಾವರ ಚರ್ಚುಗಳನ್ನು ತೆರೆಯುವ ತಾರಾತುರಿಯಲ್ಲಿದ್ದೇವೆ? ನಮ್ಮ ನೆರೆಯವರಿಗೆ ಕೊರೋನಾ ಸೋಂಕು ತಗುಲಿದರೂ ಅಡ್ಡಿಯಿಲ್ಲ, ಆಲಯಗಳು ತೆರೆಯಲೇಬೇಕು ಎಂಬ ಹಠ ಏಕೆ?

  




9 comments:

  1. ಸುಂದರವಾದ ಮತ್ತು ಅವಶ್ಯಕವಾದ ಚಿಂತನೆ, ಅಯ್ಯಾ

    ReplyDelete
  2. ಬಯಲೇ ಅಲಯವಲ್ಲವೆ?...ನಮ್ಮ ಚಿಂತನೆಗಳು ಉದಾತ್ತ ವಾಗುತ್ತ ಹೋದಂತೆ ನಾವು ಕ್ರಿಸ್ತ ನಿಗೆ ಹತ್ತಿರ ಆಗುತ್ತೇವೆ..ಅಲ್ಲವೇ...ಸುಂದರ ಬರಹ...ಮತ್ತು ಆಲೋಚನೆ..

    ReplyDelete
  3. Thank you Cherian Sir. You are absolutely right. That's where Basavanna comes in: "All that is static (Sthaavara) has an end, but the dynamic (jangama) has none"

    ReplyDelete
  4. ನಲ್ಮೆಯ ಅಯ್ಯನವರೇ, ನಿಮ್ಮ ಆಲೋಚನೆ ಹಾಗೂ ಅದನ್ನು ವಿವರಿಸಿರುವ ರೀತಿ ಪ್ರಸಂಶನೀಯ. ಇಂದು ದೇವರಿಗಿಂತ ದೇವಸ್ಥಾನಗಳಿಗೆ ಪ್ರಮುಖ್ಯತೆ ನೀಡುತ್ತೀರುವುದು ಶೋಚನೀಯ. ದೈವಶಾಸ್ತ್ರೀಯ ವಿದ್ಯಾರ್ಥಿಗಳಾಗಿ ಮೌನವಹಿಸಿರುವ ನಮ್ಮ ನಡೆಯನ್ನು ನಾವೇ ಅವಲೋಕಿಸಿಕ್ಕೊಳ್ಳುವ ಸಮಯವಿದು. ಅಂತೆಯೇ ಜನರಿಗೆ ಆದಿಕ್ರೈಸ್ತ ಸಭೆಯ ಆಶಯವನ್ನು ಪರಿಚಯಿಸುವ ದಿನ.ಆ ಮೂಲಕ ದೇವಾಸ್ಥಾನಗಳಿಗಿಂತ ಸುವಾರ್ತೆಗೆ ಆದ್ಯತೆ ಕೊಡುವ ಮತ್ತು ಪ್ರೀತಿ, ಸಾಕ್ಷಿಯ ಬದುಕು, ಅನ್ಯೋನ್ಯತೆ, ಸಮಾನತೆಗಳಿಂದ ಕೂಡಿದ ದೇವರ ರಾಜ್ಯದ ಸಾಕಾರತೆಯೇ ಕ್ರೈಸ್ತವಿಶ್ವಾಸದ essential ಅಥವಾ ಅತೀ ಅವಶ್ಯವೆಂದು ಉದ್ಘರಿಸುವ ಹಾಗೂ ಅರಿವು ಮೂಡಿಸುವ ದಿನವೆಂದು ನನ್ನ ಅಭಿಮತ.

    ReplyDelete
  5. Thought provoking and meaningful article ayya. Atleast even now church has to be educated with this knowledge wherein if the lockdown continues people should not experience that again the doors of the church has been closed. Let this Gospel reach to church leaders which is very essential and need of the time....
    Very appreciative article ayya.

    ReplyDelete
    Replies
    1. Thank you very much, Melvin. You are right. Church doesn't need to be opened as it was never closed. Our perception about Church needs a radical change. Thanks for reflecting along.

      Delete