Saturday, October 31, 2020

ಧಾರ್ಮಿಕ ಸಾಮರಸ್ಯಕ್ಕೆ ಕನ್ನಡದ ಸೇತುವೆ: ಧರ್ಮಗುರು ಚನ್ನಪ್ಪ ಉತ್ತಂಗಿ - ಒಂದು ನೆನಪು

ಗ್ಲ್ಯಾಡ್ ಸನ್ ಜತ್ತನ್ನ

 

ಇದು ನವಂಬರ್ ತಿಂಗಳು. ಕನ್ನಡಿಗರ ಮನೆಮನಗಳಲ್ಲಿ ಹಳದಿ-ಕೆಂಪು ಬಾವುಟ ಹಾರುವ ತಿಂಗಳು. ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಕಿಟ್ಟೆಲ್ ಪುತ್ಥಳಿಗೆ ಈ ತಿಂಗಳು ಒಂದು ಹೊಸ ಹೂಮಾಲೆ ಬೀಳಲಿದೆ. ಸ್ವಿಟ್ಸರ್ಲ್ಯಾಂಡಿನಿಂದ ಭಾರತಕ್ಕೆ ಕ್ರಿಶ್ಚಿಯನ್ ಮತಪ್ರಚಾರಕ್ಕೆಂದು ಬಂದು ಕನ್ನಡದ ನೆಲದಲ್ಲಿ ಒಂದಾಗಿ ಮತಪ್ರೇಮಕ್ಕಿಂತಲೂ ಕನ್ನಡಪ್ರೇಮವೇ ಮಿಗಿಲೆಂದು ಕಂಡ ಅಪ್ರತಿಮ "ಕನ್ನಡಿಗ" ಡಾ. ಫೆರ್ಡಿನಾಂಡ್ ಕಿಟ್ಟೆಲ್.
ಡಾ. ಫೆರ್ಡಿನಾಂಡ್ ಕಿಟ್ಟೆಲ್


 
 






















































































ಕಿಟ್ಟೆಲ್ ರವರ ಬದುಕು ಮತ್ತು ಸಾಹಿತ್ಯ ಕೊಡುಗೆ ಈಗಾಗಲೇ ನೂರಾರು ಸೆಮಿನಾರುಗಳು, ಫೋಟೋ ಎಕ್ಸಿಬಿಷನ್ಗಳು, ಲೇಖನಗಳು ಹಾಗೂ ಪುಸ್ತಕಗಳ ಮೂಲಕ ವೈಭವೋಪೇತವಾಗಿ ಆಚರಿಸಲ್ಪಟ್ಟಿದೆ. ಅದು ಸೂಕ್ತ ಮತ್ತು ಮೆಚ್ಚತಕ್ಕದ್ದೇ. ಆದರೆ ಎಲ್ಲೋ ಒಂದೆಡೆ ಈ ಎಲ್ಲಾ ಆಚರಣೆಗಳೂ ಏಕಪಕ್ಷೀಯವಾಗಿವೆಯೇನೋ ಎಂಬ ಆತಂಕ ಸಹೃದಯರನ್ನು ಕಾಡುತ್ತಲೇ ಇದೆ. ಪಾಶ್ಚಾತ್ಯ ಮಿಷನರಿಗಳ ಕೊನೆಯಿಲ್ಲದ ಗುಣಗಾನದ ಗುಂಗಿನಲ್ಲಿ ನಮ್ಮ ದೇಶೀಯ ಸಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಸಾಂಸ್ಥಿಕವಾಗಿ ಮರೆಯಲಾಗುತ್ತಿದೆಯೇನೋ ಎಂಬ ಅಸಮಾಧಾನ ಮತ್ತು ಆತಂಕ ಅನಿವಾರ್ಯವಾಗಿದೆ. ಹೀಗೆ ಚರಿತ್ರಾಕಾರರಿಂದ, ಭಾಷಾಪಂಡಿತರಿಂದ, ಧಾರ್ಮಿಕ ಮುಖಂಡರಿಂದ ಮರೆಯಲ್ಪಟ್ಟರೂ ಮತ್ತೆ ಮತ್ತೆ ಮಾತನಾಡುವ ಕನ್ನಡದ ಮಾಣಿಕ್ಯ ಧರ್ಮಗುರು ಶ್ರೀ ಚನ್ನಪ್ಪ ಉತ್ತಂಗಿಯವರು. 

ಶ್ರೀ ಚನ್ನಪ್ಪ ಉತ್ತಂಗಿ
ಶ್ರೀ ಚನ್ನಪ್ಪ ಉತ್ತಂಗಿ
ಬಸವಣ್ಣ, ಅನುಭವ ಮಂಟಪ, ಶೂನ್ಯ ಸಂಪಾದನೆ, ವೀರಶೈವ ಧರ್ಮ ಹಾಗೂ ಸರ್ವಜ್ಞನ ಕುರಿತು ಆಳವಾದ ಅಧ್ಯಯನ ನಡೆಸಿ ವಿಫುಲ ಸಾಹಿತ್ಯ ರಚನೆಯ ಮೂಲಕ ಕನ್ನಡ ಸಾಹಿತ್ಯ ಲೋಕದ ಭೀಷ್ಮಾಚಾರ್ಯರಾದವರು ಸಾಹಿತಿ, ವೇದಾಂತಿ ಮತ್ತು ಪಾದ್ರಿ ಚನ್ನಪ್ಪ ಉತ್ತಂಗಿ. ೧೮೮೧ರ ಅಕ್ಟೋಬರ್ ೨೮ರಂದು ಧಾರವಾಡದ ದಾನಿಯೇಲಪ್ಪ ಮತ್ತು ಸುಭದ್ರವ್ವ ದಂಪತಿಗೆ ಹರಕೆಯ ಫಲವೆಂಬಂತೆ ಜನಿಸಿದ ಶಿಶು ತಾತನ ಹೆಸರನ್ನೇ ಬಳುವಳಿಯಾಗಿ ಪಡೆದ ಚನ್ನಪ್ಪ. 

ಕ್ರಿಶ್ಚಿಯನ್ ಧರ್ಮದ ಗುರುದೀಕ್ಷೆ ಪಡೆದು ಹಲವು ವರ್ಷ ಅವಿರತವಾಗಿ ಧಾರವಾಡ, ಗದಗ, ಮುಂಡರಗಿ, ಹಾವೇರಿ ಮತ್ತು ಹುಬ್ಬಳ್ಳಿ ಸುತ್ತಣ ಚರ್ಚುಗಳಲ್ಲಿ ಸೇವೆಗೈದ ಚನ್ನಪ್ಪನವರ ಮೂಲಜರು ಲಿಂಗಾಯಿತರು. ತಾತ ಪಾರುಪತ್ತ್ಯೆಗಾರ ಚನ್ನಪ್ಪ ಪಂಚಮಸಾಲಿ ಲಿಂಗಾಯಿತರು. ಪತ್ನಿಯ ಅಕಾಲಿಕ ಮರಣದಿಂದ ವ್ಯಥೆಗೊಂಡ ತಾತ ಚನ್ನಪ್ಪ ಊರೂರು ಸುತ್ತಿ ಜೀತದಾಳಾಗಿ ದುಡಿದು ಕೊನೆಗೆ ತನ್ನ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉತ್ತಂಗಿಯಲ್ಲಿ ಪಾರುಪತ್ಯೆಗಾರನಾಗಿ ನೆಲೆನಿಂತರು. ಧರ್ಮಗ್ರಂಥಗಳ ಕಡೆಗಿನ ಇವರ ವ್ಯಾಮೋಹ ಮತ್ತು ಆಸಕ್ತಿಯನ್ನರಿತ ಪಾದ್ರಿಯೊಬ್ಬರು ಬೈಬಲಿನ "ಹೊಸ ಒಡಂಬಡಿಕೆ" ಪ್ರತಿಯನ್ನು ಇವರ ಕೈಗಿತ್ತರು. ಅದರ ಓದಿನಲ್ಲೇ ಹಗಲಿರುಳು ಮುಳುಗಿದ ಚನ್ನಪ್ಪನಿಗೆ ಅದರಲ್ಲಿ ನಂಬಿಕೆ ಹುಟ್ಟಿತು. ಕೊನೆಗೊಂದು ದಿನ ಕ್ರಿಶ್ಚಿಯನ್ ಆಗಲು ನಿರ್ಧರಿಸಿಯೇ ಬಿಟ್ಟರು. ಧಾರವಾಡಕ್ಕೆ ಬಂದು ಬಾಸೆಲ್ ಮಿಷನ್ ಪಾದ್ರಿಗಳಲ್ಲಿ ತಮ್ಮ ಇಂಗಿತವನ್ನು ತೋಡಿಕೊಂಡಾಗ ಪಾದ್ರಿಗಳು ಅವರ ಧರ್ಮಶ್ರದ್ಧೆಯನ್ನು ಅನುಮಾನಿಸಿದರು. ತಮ್ಮ ಶ್ರದ್ಧೆಯ ಯತಾರ್ಥತೆಯನ್ನು ಸಾಭೀತುಪಡಿಸಲು ಚನ್ನಪ್ಪ ದಂಪತಿಗಳು ಅಲ್ಲಿಯೇ ನಿಂತುಬಿಟ್ಟರು. ಅವರ ಶ್ರದ್ಧೆಯ ಸ್ಥಿರತೆ ಕಂಡ ಪಾದ್ರಿ ಆ ದಂಪತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಿಕೊಂಡರು. ಹೀಗೆ ಉತ್ತಂಗಿಯ ಚನ್ನಪ್ಪ ಕುಟುಂಬ ಲಿಂಗಾಯಿತ ಮತದಿಂದ ಕ್ರಿಶ್ಚಿಯನ್ ಮತಕ್ಕೆ ತಿರುಗಿತು. ಹೀಗಿದ್ದರೂ ಈ ಕುಟುಂಬದಲ್ಲೇ ಹುಟ್ಟಿಬಂದ ಚನ್ನಪ್ಪ ಉತ್ತಂಗಿಯ ಮನಸ್ಸು ಮಾತ್ರ ವೀರಶೈವ ಧರ್ಮ ಹಾಗೂ ಸಾಹಿತ್ಯಗಳ ಕಡೆಗೆ ಹೊರಳಿದ್ದು ಕನ್ನಡದ ಸೌಭಾಗ್ಯ.  
 
ಬಾಲ್ಯದಿಂದಲೂ ಯಂತ್ರಜ್ಞಾನದಲ್ಲಿ ವಿಶೇಷ ಆಸ್ಥೆಯನ್ನು ಹೊಂದಿದ್ದ ಚನ್ನಪ್ಪನಿಗೆ ಶಾಲೆಯ ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಧಾರವಾಡದ ಸ್ಟೂಡೆಂಟ್ಸ್ ಹೋಂನಲ್ಲಿ ಇಂಗ್ಲಿಷ್ ಕಲಿಕೆಯಲ್ಲಿ ತೊಡಗಿ ಮುಂದೆ ಅಲ್ಲಿಯ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ನಾಲ್ಕನೇ ವರ್ಗಕ್ಕೆ ಪ್ರವೇಶ ಗಿಟ್ಟಿಸಿಕೊಂಡ ಚನ್ನಪ್ಪನಿಗೆ ವಿದೇಶೀ ಮಿಷನರಿಗಳ ಪಾಠಕ್ರಮ ಮತ್ತು ಬೋಧನಾವಿಧಾನಕ್ಕೆ ಒಗ್ಗಿಕೊಳ್ಳುವುದು ತೀರಾ ಕಷ್ಟವೆನಿಸಿತು. ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ಕಿಂಚಿತ್ತೂ ಸ್ಥಳವಿಲ್ಲದ ರೀತಿಯಲ್ಲಿ ಅಲ್ಲಿನ ಪಾಠಕ್ರಮ ರೂಢಿಯಲ್ಲಿತ್ತು. ಚನ್ನಪ್ಪನಾದರೋ ಪ್ರಶ್ನೆಗಳೇ ಜ್ಞಾನದ ಕೇಂದ್ರ ಎಂದು ನಂಬಿದ್ದ ಹುಡುಗ.  ತರಗತಿಯಲ್ಲಿ ಶಿಕ್ಷಕರಿಗೆ ಹಲವು ಪ್ರಶ್ನೆಗಳನ್ನು ಹಾಕುವ ಮೂಲಕ ಶಿಕ್ಷಕರ ಉಗ್ರದೃಷ್ಟಿಗೆ ಬಲಿಯಾದ ಮತ್ತು ಹಲವು ಬಾರಿ ಶಿಕ್ಷೆಗೂ ಗುರಿಯಾದ. ಇದು ಅವನಲ್ಲಿ ಶಾಲಾಶಿಕ್ಷಣದ ಪರ ಜಿಗುಪ್ಸೆಯ್ಸನ್ನೇ ಹುಟ್ಟಿಸಿತು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಮುಂದೆ ಯಂತ್ರಜ್ಞಾನದ ಅಧ್ಯಯನಕ್ಕೆ ಸೇರಬೇಕೆಂಬ ಬಯಕೆಯೇನೋ ಚನ್ನಪ್ಪನಲ್ಲಿತ್ತು. ಆದರೆ ಕುಟುಂಬದ ಕಡುಬಡತನದ ವಾಸ್ತವ ಆ ಬಯಕೆಯನ್ನು ಗರ್ಭದಲ್ಲೇ ಹೊಸಕಿಹಾಕುವಂತೆ ಮಾಡಿತು. ಅತ್ತ ಕ್ರಿಸ್ತನ ಪರಮಭಕ್ತೆಯಾದ ತಾಯಿ ಮಗನಿಗೆ ತನ್ನ ಹರಕೆಯ ನೆನಪನ್ನು ಹುಟ್ಟಿಸುತ್ತಲೇ ಇದ್ದಳು. "ನೀನು ಹುಟ್ಟಿದರೆ ಕ್ರಿಸ್ತಸೇವೆಗೆ ನಿನ್ನನ್ನು ಅರ್ಪಿಸುತ್ತೇನೆ ಎಂದು ನಾನು ಹರಕೆ ಹೊತ್ತಿದ್ದೆ. ಈಗಲಾದರೂ ನೀನು ಕ್ರೈಸ್ತ ದೈವಜ್ಞಾನ ಶಾಲೆಗೆ ಸೇರು" ಎಂಬ ತಾಯಿಯ ಕೋರಿಕೆಗೆ ಮಣಿದು ೧೯೦೪ರಲ್ಲಿ ಚನ್ನಪ್ಪ ಮಂಗಳೂರಿನ ದೈವಜ್ಞಾನ ಶಾಲೆಗೆ ಸೇರ್ಪಡೆಯಾದರು. 

ವಿದೇಶೀ ಮಿಷನರಿಗಳ ಶಾಲಾಶಿಕ್ಷಣ ಪದ್ಧತಿಯ ವಿರುದ್ಧ ಚನ್ನಪ್ಪನಿಗೆ ಇದ್ದ ಅಸಮಾಧಾನ ದೈವಜ್ಞಾನ ಶಿಕ್ಷಣ ಪದ್ಧತಿಯ ವಿರುದ್ಧವೂ ಬೆಳೆಯಿತು. ಸ್ವಾಭಿಮಾನ, ವಿಚಾರಪರತೆ, ಧೀರತೆ, ಮತ್ತು ಸಚ್ಚಾರಿತ್ರ್ಯಗಳನ್ನು ಉಸಿರಾಗಿಸಿಕೊಂಡಿದ್ದ ಇವರಿಗೆ ಅಲ್ಲಿಯ ಶಿಕ್ಷಣ ಪದ್ಧತಿ ಉಸಿರು ಕಟ್ಟಿಸುವಂತಿತ್ತು. ಶಾಲಾ ಆಡಳಿತ ಮತ್ತು ಶಿಕ್ಷಣದಲ್ಲಿ ವಿದೇಶೀ ಮಿಷನರಿಗಳ ಮೇಲುಗೈ ಅಸಹ್ಯ ಹುಟ್ಟಿಸಿತು. ಶಾಲೆಗೆ ಸೇರಿದ ಕೆಲವು ದಿನಗಳಲ್ಲಿಯೇ ಈ ಅಸಂಗತ ಅಂಶಗಳನ್ನು ಗುರುತಿಸಿ ನಿರ್ಭೀತರಾಗಿ ತಮ್ಮ ಆಕ್ಷೇಪಣೆಗಳನ್ನು ಪ್ರಾಧ್ಯಾಪಕರ ಮುಂದೆ ನಿವೇದಿಸಿದರು. ಆದರೆ ಪ್ರಾಧ್ಯಾಪಕರುಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಇದ್ದಾಗ ಬೇಸತ್ತು, ಆದರೆ ವಿಚಲಿತರಾಗದೆ, ಸ್ವಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಾಲ್ಯದಿಂದಲೂ ತನಗೆ ಜ್ಞಾಪಕಶಕ್ತಿ ಕಡಿಮೆ ಎಂದುಕೊಂಡಿದ್ದ ಚನ್ನಪ್ಪನವರು ಏನನ್ನೇ ಓದಿದರೂ ವಿವರವಾಗಿ ಟಿಪ್ಪಣಿಮಾಡಿಕೊಳ್ಳುವುದನ್ನು ರೂಢಿಸಿಕೊಂಡರು. ಹೀಗೆ ಇವರ ಅಧ್ಯಯನ ಅತ್ಯಂತ ಖಚಿತವೂ ಶಾಸ್ತ್ರಬದ್ಧವೂ ಆಗುತ್ತಾ ಹೋಯಿತು.

ಅಂದಿನ ಬೋಧನಾಪದ್ಧತಿಗೆ ಬೇಸತ್ತ ಚನ್ನಪ್ಪ ವಿಶ್ವದ ಶೇಷ್ಠ ತತ್ವಜ್ಞಾನಿಗಳು ಹಾಗೂ ಮಹಾವ್ಯಕ್ತಿಗಳ ಕುರಿತು ಆಳವಾಗಿ ಅಧ್ಯಯನ ಮಾಡಿದರು. ತಮ್ಮ ಓದಿನಲ್ಲಿ ಯಾವುದೇ ಮಡಿವಂತಿಕೆಯನ್ನೂ ಇಟ್ಟುಕೊಳ್ಳದೆ ವಿಶ್ವದ ವಿವಿಧ ಧರ್ಮಗಳ ಬಗ್ಗೆ ಮುಕ್ತಮನಸ್ಸಿನಿಂದ ಅಧ್ಯಯನ ನಡೆಸಿದರು. ನಾಸ್ತಿಕವಾದವನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿ ಇಂಗರ್ಸಾಲ್, ವಾಲ್ಟೇರ್, ಪೇನ್ ಇವರ ಗ್ರಂಥಗಳನ್ನೂ ಆಳವಾಗಿ ಅಧ್ಯಯನ ಮಾಡಿದರು. ಇವರ ಈ ಎಲ್ಲಾ ಅಧ್ಯಯನಗಳೂ ತೌಲನಿಕ ದೃಷ್ಟಿಕೋನದಿಂದ ಕೂಡಿದ್ದು ಅತ್ಯಂತ ಶಾಸ್ತ್ರೀಯವಾಗಿಯೂ ವ್ಯಾಪಕವಾಗಿಯೂ ನಡೆಯುತ್ತಿತ್ತು. ಬೈಬಲಿನಷ್ಟೇ ಕುರಾನನ್ನು, ಕುರಾನಿನಷ್ಟೇ ಶೂನ್ಯಸಂಪಾದನೆಯನ್ನು ಮತ್ತು ಶೂನ್ಯಸಂಪಾದನೆಯಷ್ಟೇ ಸರ್ವಜ್ಞನನ್ನು ಗಂಭೀರವಾಗಿ ಮತ್ತು ಅಭಿಮಾನದಿಂದ ಅಧ್ಯಯನ ಮಾಡಿದ ಚನ್ನಪ್ಪನವರು ಕ್ರೈಸ್ತ ಹಾಗೂ ವೀರಶೈವ ಧರ್ಮಗಳ ಸಾಂಸ್ಕೃತಿಕ ಸಮಾವೇಶವನ್ನು ಗುರುತಿಸಲು ಶಕ್ತರಾದರು.

ವೃತ್ತಿಯಲ್ಲಿ ಧರ್ಮಬೋಧಕರಾಗಿದ್ದರೂ ಉತ್ತಂಗಿಯವರ ಬೋಧನಾವಿಧಾನ ಅವರ ಸಮಕಾಲೀನ ಬೋಧಕರಿಗಿಂತ ತೀರಾ ಭಿನ್ನವಾಗಿತ್ತು. ಕ್ರೈಸ್ತಧರ್ಮದ ವಿಚಾರಗಳನ್ನು ದೇಶೀಕರಣಗೊಳಿಸಿ ಭಾರತೀಯ ಮನಸ್ಸುಗಳಿಗೆ ಉಣಬಡಿಸುವ ಅಪೂರ್ವ ಶೈಲಿ ಅವರ ಬೋಧನೆಯದ್ದಾಗಿತ್ತು. ಕೀರ್ತನೆ, ಹರಿಕಥೆಗಳಂತಹ ಸ್ಥಳೀಯ ಶೈಲಿಗಳನ್ನು ಬಳಸಿಕೊಂಡು ಕ್ರಿಸ್ತನ ಉಪದೇಶಗಳ ಸಾರವನ್ನು ಜನಮನ ತಲುಪುವಂತೆ ಸಾರುತ್ತಿದ್ದರು. ದೇಶೀಯ ಹಬ್ಬಗಳನ್ನು ಆಚರಿಸುತ್ತಾ ಅವುಗಳ ಮೂಲಕವೂ ಕ್ರಿಸ್ತನ ಸಂದೇಶದ ಸಾರೋಣ ಸಾಧ್ಯ ಎಂಬುದನ್ನು ಅವರು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ದೇಶೀಯ ಸಂತರ, ಶರಣರ ಕಥೆಗಳನ್ನು ಅವರು ತಮ್ಮ ಬೋಧನೆಗಳಲ್ಲಿ ಬಳಸುತ್ತಿದ್ದ ರೀತಿ ಅದ್ಭುತ. "ಕ್ರೈಸ್ತ ಧರ್ಮವೂ ನಾಗರಪಂಚಮಿಯೂ" ಎಂಬ ಚರ್ಚಾಗೋಷ್ಠಿಯಲ್ಲಿ ಇವರು ಮಂಡಿಸಿದ ಪ್ರಬಂಧವು ಭಾಷೆ, ಭಾವ, ಶೈಲಿ ಮತ್ತು ವಿವೇಚನಾ ದೃಷ್ಟಿಯಿಂದ ಇಂದಿಗೂ ಅನನ್ಯ. 

ಆದರೆ ಉತ್ತಂಗಿಯವರ ದೇಶೀಕರಣ ವಿಧಾನವು ಕ್ರೈಸ್ತವಲಯದಲ್ಲಿ ವಿಪರೀತ ಟೀಕೆಗೆ ಗುರಿಯಾಯಿತು. ಬಸವಣ್ಣನವರನ್ನು ಕುರಿತು ಅವರು ನೀಡುತ್ತಿದ್ದ ಭಾಷಣಗಳು, ಸರ್ವಜ್ಞನನ್ನು ಕುರಿತು ನಡೆಸುತ್ತಿದ್ದ ಅಧ್ಯಯನಗಳು ಕ್ರಿಶ್ಚಿಯನ್ ವಲಯದೊಳಗೆ ಧರ್ಮದ್ರೋಹಿ ಎಂಬ ಖಂಡನೆಗೆ ಓಳಗಾದವು. ಅಲ್ಲದೆ ವಿದೇಶೀ ಪಾದ್ರಿಗಳ ಅನಗತ್ಯ ಯಾಜಮಾನ್ಯವನ್ನು ವಿರೋಧಿಸುವ ದೇಶಪ್ರೇಮಕ್ಕೆ ಕ್ರೈಸ್ತ ಸಂಸ್ಥೆಯಲ್ಲಿ ಎದ್ದ ದಂಗೆಯೆಂದು ಹಣೆಪಟ್ಟಿ ಕಟ್ಟಲಾಯ್ತು. 

ಜಗತ್ತಿನ ವಿವಿಧ ಅನುಭಾವಿಗಳಲ್ಲಿ ಚನ್ನಪ್ಪನವರಿಗೆ ವಿಶೇಷ ಆಸಕ್ತಿ. ಕ್ರಿಸ್ತ, ಬಸವ, ಪೈಗಂಬರ್ - ಇವರೆಲ್ಲರನ್ನೂ ಗೌರವಭಾವದಿಂದ ಕಾಣುತ್ತಿದ್ದ ಮನಸ್ಸು ಅವರದ್ದು. ಹೀಗೆ ಅನುಭಾವಿಗಳ ಹುಡುಕಾಟದಲ್ಲಿದ್ದ ಅವರ ಮನಸ್ಸು ಪೂರ್ಣವಾಗಿ ಸೆರೆಗೊಂಡದ್ದು ಸರ್ವಜ್ಞನಲ್ಲಿ. ಸರ್ವಜ್ಞನ ವಚನಗಳನ್ನು ಒಂದೆಡೆ ಸಂಗ್ರಹಿಸುವ, ಅನಂತರ ಅವುಗಳ ಪಾಠಗಳನ್ನು ಅಧ್ಯಯನ ಮಾಡಿ ಶುದ್ಧ ಮಾಡುವ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡ ಚನ್ನಪ್ಪ ಸುಮಾರು ೨೦ ಪ್ರತಿಗಳ ಅಧ್ಯಯನ ನಡೆಸಿ ೨೦೦ಕ್ಕೂ ಹೆಚ್ಚು ವಚನಗಳ ಪಾಠ ಸಂಶೋಧನೆ ಹಾಗೂ ನಿರ್ಣಯಕ್ಕೆ ಮನಸ್ಸು ಕೊಟ್ಟರು. ಸರ್ವಜ್ಞನ ಈ ಅಧ್ಯಯನವನ್ನು ಅವರು ಒಂದು ತಪಸ್ಸೆಂದೇ ಕೈಗೊಂಡರು. ಅನಾರೋಗ್ಯ, ಕೌಟುಂಬಿಕ ಸಮಸ್ಯೆಗಳ ನಡುವೆಯೂ ದೀರ್ಘಕಾಲದ ಅಧ್ಯಯನದ ನಂತರ ಸರ್ವಜ್ಞನ ೨೦೦ ವಚನಗಳನ್ನು ಶೋಧಿಸಿ ತೆಗೆದರು. ಬಡತನ, ಮಡದಿಯ ಅನಾರೋಗ್ಯ, ವಿದೇಶೀ ಮಿಷನರಿಗಳ ಕಿರುಕುಳ - ಇವುಗಳನ್ನೆಲ್ಲ ಸಹಿಸಿದ ಚನ್ನಪ್ಪನವರು ೩೦೦ ಪುಟಗಳ ವಿಸ್ತೃತ ಉಪೋದ್ಘಾತ ಟಿಪ್ಪಣಿಗಳೊಡನೆ ಸರ್ವಜ್ಞನ ವಚನಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿದರು.  

ಉತ್ತಂಗಿಯವರು  ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಮತ್ತು ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ವಿವಿಧ ಲೇಖನಗಳೂ ಬರಹಗಳೂ ಅವರ ವಿದ್ವತ್ತಿನ ಹರಹನ್ನೂ ವಿಚಾರಪಕ್ವತೆಯನ್ನೂ ನಮ್ಮ ಮುಂದೆ ಬಿಚ್ಚಿಡುತ್ತವೆ. ಬನಾರಸಕ್ಕೆ ಬೇತ್ಲೆಹೇಮಿನ ವಿನಂತಿ, ಹಿಂದೂ ಸಮಾಜದ ಹಿತಚಿಂತಕ, ಮಕ್ಕಳ ಶಿಕ್ಷಣ ಪಟ, ನಾರಾಯಣ ವಾಮನ ತಿಲಕರ ಜೀವನ ಚರಿತ್ರೆ, ಸರ್ವಜ್ಞನ ವಚನಗಳು, ಬಸವೇಶ್ವರನೂ ಅಸ್ಪೃಶ್ಯರ ಉದ್ಧಾರವೂ, ಸಾದುಸುಂದರ ಸಿಂಗರ ದೃಷ್ಟಾಂತ ದರ್ಪಣ, ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ಅನುಭವ ಮಂಟಪದ ಐತಿಹಾಸಿಕತೆ, ಸಿದ್ದಾರಾಮ ಸಾಹಿತ್ಯಸಂಗ್ರಹ, ಆದಯ್ಯನ ವಚನಗಳು, ಮೃತ್ಯುಂಜಯ - ಇವು ಅವರ ಕನ್ನಡದ ಕೃತಿಗಳು. ಇಷ್ಟೇ ಅಲ್ಲದೆ ವಿವಿಧ ಪತ್ರಿಕೆಗಳಲ್ಲಿ ಹಲವು ಲೇಖನಗಳನ್ನೂ ಪ್ರಕಟಿಸಿದ್ದಾರೆ: ಸರ್ವಜ್ಞನ ವಚನಗಳ ಸಂಶೋಧನೆ, ವಚನಾಂಕಿತದಲ್ಲಿರುವ ಐತಿಹಾಸಿಕಾಂಶಗಳು, ಜಾನಪದ ಸಾಹಿತ್ಯ,  Contribution of Christian Missionaries for the Development of Karnataka, Synopsis for the Studies in Lingayatism. ಇದರೊಂದಿಗೆ ಹಲವು ಗ್ರಂಥಗಳು ಮುದ್ರಣಕ್ಕೆ ಸಿದ್ಧವಾಗಿದ್ದವು: A Faith, Philosophy and Religion; Complete Concordance to Bhagavadgeetha; Yellamma, a Goddess of South India; Creation; A Wonderful Child of God; From Cross to Crown through Crosswords, a Comedy. ಈ ಕೃತಿಗಳಲ್ಲದೆ ಚನ್ನಪ್ಪನವರು ಕವಿತೆಗಳನ್ನೂ ರಚಿಸುವ ಮೂಲಕ ಕವಿಹೃದಯವನ್ನು ಮೆರೆದಿದ್ದಾರೆ.

ಹೀಗೆ ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ ಚನ್ನಪ್ಪ ಉತ್ತಂಗಿ ತನ್ನನ್ನು "ತಿರುಳುಗನ್ನಡದ ತಿರುಕ" ಎಂದೇ ಕರೆದುಕೊಂಡರು. ತನ್ನ ಬರಹ, ಬೋಧನೆ ಮತ್ತು ಬದುಕಿನ ಮೂಲಕ ಅಪಾರ ವಿದ್ವತ್ತನ್ನು ಮೆರೆದ ಇವರು ಕನ್ನಡದ ಪಾಲಿಗೆ ಒಂದು ಅಪ್ರತಿಮ ಆಸ್ತಿಯೇ ಸರಿ. ೧೯೪೯ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಅಲಂಕರಿಸುವ ಮೂಲಕ ಕನ್ನಡದ ಮೆರುಗನ್ನು ಹೆಚ್ಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ೧೯೭೧ರಲ್ಲಿ ಉತ್ತಂಗಿಯವರ ಸಮಗ್ರ ಜೀವನ ಚರಿತ್ರೆಯನ್ನು ಮತ್ತು ೧೯೮೨ರಲ್ಲಿ "ಉತ್ತಂಗಿ ಚನ್ನಪ್ಪನವರು" ಎಂಬ ಗ್ರಂಥವನ್ನು ಪ್ರಕಟಿಸಿ ಈ ಅಭೂತಪೂರ್ವ ಸಾಹಿತಿಗೆ ಗೌರವ ಸಮರ್ಪಿಸಿತು.  

ಹುಟ್ಟು ಹೋರಾಟಗಾರರಾದ ಚನ್ನಪ್ಪನವರ ಬದುಕೇ ಒಂದು ಹೋರಾಟವಾಗಿತ್ತು. ೨೫ ವರ್ಷಗಳಷ್ಟು ದೀರ್ಘಕಾಲ ರುಗ್ಣಶಯ್ಯೆಯಲ್ಲಿದ್ದ ಪತ್ನಿ ಸುಭಕ್ತವ್ವ, ಹುಟ್ಟಿದ ಹತ್ತು ಮಕ್ಕಳಲ್ಲಿ ನಾಲ್ಕು ಮಕ್ಕಳನ್ನು ಉಳಿಸಿಕೊಳ್ಳಲಾಗದ ವಿಪ್ಲವ ಮತ್ತು ಆಗಾಗ ಕಾಡುತ್ತಿದ್ದ ಅನಾರೋಗ್ಯ, ಬಡತನ, ದೇಶೀ ವಿದೇಶೀ ಕ್ರೈಸ್ತ ನಾಯಕರುಗಳ ವಿರೋಧ - ಇಂಥ ಹೋರಾಟದ ನಡುವೆಯೂ ಬದುಕನ್ನು ಅತಿಯಾಗಿ ಪ್ರೀತಿಸಿ, ಆ ಪ್ರೀತಿಯ ಸವಿಯನ್ನು ಇತರರಿಗೆ ಉಣಿಸಿದ ಜನಾನುರಾಗಿ ಚನ್ನಪ್ಪ ೧೯೬೨ರ ಆಗಸ್ಟ್ ೨೮ರಂದು ವಿಧಿವಶರಾದರೂ ಇಂದಿಗೂ ಕನ್ನಡಿಗರ ಮನೆ-ಮನಗಳಲ್ಲಿ ವಾಸವಾಗಿದ್ದಾರೆ. ಅತ್ಯಂತ ಸ್ವಾಭಿಮಾನಿ ಮತ್ತು ನಿರ್ಭೀತ ವರ್ಚಸ್ಸಿನಿಂದ ಜನಜನಿತರಾದ ಇವರು ತಮ್ಮ ಸಾಧನೆಯ ಕುರಿತು ಎಂದಿಗೂ ಬೀಗಿದವರಲ್ಲ. ಕ್ರಿಸ್ತ, ಬಸವ, ಸರ್ವಜ್ಞರ ಪ್ರಭಾವದಿಂದಲೋ ಏನೋ ಅವರಲ್ಲಿ ದೈನ್ಯಭಾವವಲ್ಲದೆ ಒಂದಿಷ್ಟೂ ಅಹಮಿಕೆಯ ಕುರುಹಿರಲಿಲ್ಲ. "ನಾನೊಬ್ಬ ತಿಳಿತಿಳಿವಿನ ತಿರುಕ; ತಿರುಳುಗನ್ನಡದ ತಿರುಕ; ಹಾಡಿ ಬೇಡಿದವನಲ್ಲ; ಬೇಡಿ ಬಾಳಿದವನಲ್ಲ" - ತನ್ನ ಕುರಿತು ಆಡುವ ಈ ಸ್ವ-ಆವಿಷ್ಕಾರದ ನುಡಿ ಕವಿಯ ಧೈನ್ಯತೆಗೆ ಹಿಡಿದ ಕನ್ನಡಿ. ಈ ಅರಿವೇ ಪ್ರಾಯಶಃ ಚನ್ನಪ್ಪನವರನ್ನು ಜಗತ್ತಿನ ಅನುಭಾವಿಗಳ ಪಟ್ಟಿಯಲ್ಲಿ ಸೇರಿಸಿದ್ದು ಎಂದರೆ ತಪ್ಪಾಗಲಾರದು. 
 

Friday, June 12, 2020

ಆಲಯಕ್ಕೆ ಹೋಗದಿರಿ, ನೀವೇ ಆಲಯವಾಗಿರಿ - ಏನಿದು ಅಭಿಯಾನ?

 ಗ್ಲ್ಯಾಡ್ ಸನ್ ಜತ್ತನ್ನ 
 


ಇವತ್ತು ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ಯಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ #don'tgotochurchBEthechurch# ಅಂದ್ರೆ #ಆಲಯಕ್ಕೆ ಹೋಗಬೇಡಿ, ನೀವೇ ಆಲಯವಾಗಿರಿ# ಅನ್ನೋ ಒಂದು ಅಭಿಯಾನ ನಡೀತಾ ಇದೆ. ಇದಕ್ಕೆ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆಗಳು ಬರ್ತಾ ಇವೆ. 

ಏನಿದು ಅಭಿಯಾನ? 'ಯಾರೋ ನಾಲ್ಕು ಮಂದಿ ಚರ್ಚ್-ವಿರೋಧಿಗಳು ನಡೆಸ್ತಾ ಇರೋ ಕಿಡಿಗೇಡಿತನ ಇದು' ಅನ್ನೋರು ಕೆಲವರು. 'ಇಲ್ಲಪ್ಪಾ, ಚರ್ಚು, ಆಲಯ, ಸಭೆ, ಆರಾಧನೆ ಇವೆಲ್ಲಾ ಪುರೋಹಿತಶಾಹಿ ವರ್ಗ ನಮ್ಮ ಕಣ್ಣಿಗೆ ಕಟ್ಟಿರೋ ಕಪ್ಪು ಪಟ್ಟಿ, ಇದನ್ನು ತೆಗೆದು ಎಸೆಯಿರಿ ಅಂತಾ ಹೇಳ್ತಾ ಇರುವ ಚಳುವಳಿ ಇದು' ಅನ್ನೋರು ಮತ್ತೆ ಕೆಲವರು. ಈ ಎರಡು ಅಭಿಪ್ರಾಯಗಳ ಚೌಕಟ್ಟಿನಿಂದ ಹೊರನಿಂತು ಈ ಅಭಿಯಾನವನ್ನು ಅರ್ಥವಿಸುವ ಅಗತ್ಯವಿದೆ.

ಇನ್ನು ಕೆಲವೇ ದಿನಗಳಲ್ಲಿ ನಮ್ಮೂರುಗಳಲ್ಲಿ ಮೂರು ತಿಂಗಳಿನಿಂದ ಮುಚ್ಚಿದ್ದ ಚರ್ಚ್ ಕಟ್ಟಡಗಳು ಆರಾಧನೆಗಾಗಿ ತೆರೆಯಲ್ಪಡ್ತವೆ. ದೈಹಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು, ನೈರ್ಮಲ್ಯೀಕರಣದ ಪಾಲನೆ - ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಆರಾಧನೆ ನಡೆಸಲಾಗುತ್ತೆ ಅನ್ನೋ ಭರವಸೆ ಕೂಡಾ ಕೊಡಲಾಗಿದೆ. ಕೊರೋನಾ ಸೋಂಕು ನಮ್ಮ ಮನೆಗಳಿಗೆ, ಕುಟುಂಬಗಳಿಗೆ,  ಸಭೆಗಳಿಗೆ, ಸಮಾಜಕ್ಕೆ ತಟ್ಟದಿರಲಿ ಅಂತ ಪ್ರಾರ್ಥನೆ ಮಾಡುವ ಮಂದಿ, ತಮ್ಮ ಪ್ರಾರ್ಥನೆ ಈಡೇರುವುದಕ್ಕೆ ದೇವರೊಂದಿಗೆ ಕೈಜೋಡಿಸುವುದು ಕೂಡಾ ಅಗತ್ಯ ಅಲ್ಲವೇ? ಹಾಗೆ ದೇವರೊಂದಿಗೆ ಕೈಜೋಡಿಸುವುದಕ್ಕಾಗಿ ನಾವು ಚರ್ಚುಗಳಲ್ಲಿ ಅಷ್ಟು ತರಾತುರಿಯಲ್ಲಿ ಸೇರಿಬರಲು ಪ್ರಯತ್ನಿಸುತ್ತಾ ಇರೋದು ಅಂತ ಹೇಳಿದರೆ, ನಮ್ಮ ವಾದದಲ್ಲಿ ಎಲ್ಲಿಯೋ ಏನೋ ಲಾಜಿಕ್ ಮಿಸ್ ಆಗ್ತಿದೆ ಅನ್ನಿಸೋದಿಲ್ವಾ? ಈ ಕಾರಣಕ್ಕಾಗಿ ಪ್ರಾಯಶಃ ನಾವು ಈ ಮೇಲಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. 

ಈ ಅಭಿಯಾನದಲ್ಲಿ ಹರಿದಾಡುತ್ತಿರುವ ಒಂದು ಕಾರ್ಟೂನ್ ಚಿತ್ರ ಹೀಗಿದೆ:
ಯೇಸು ತನಗೆ ಚರ್ಚನ್ನು ತೋರಿಸ್ತಾನೆ ಅನ್ನೋ ಬಯಕೆಯಿಂದ ಒಬ್ಬ ವ್ಯಕ್ತಿ ಯೇಸುವನ್ನು ಹಿಂಬಾಲಿಸ್ತಾ ಇದ್ದಾನೆ. ಆದರೆ ಯೇಸು ಸ್ಥಾವರದ ಚರ್ಚನ್ನು ವೇಗವಾಗಿ ದಾಟಿಹೋಗುವಾಗ ಬೇಸರಗೊಂಡ ವ್ಯಕ್ತಿ ಯೇಸುವಿಗೆ ಕೇಳ್ತಾನೆ, "ಯೇಸುವೇ, ನೀನು ನನಗೆ ಚರ್ಚು ತೋರಿಸ್ತೀನಿ ಅಂತ ಹೇಳಿದ್ದೆ. ಆದ್ರೆ ಈಗ ಚರ್ಚ್ ಕಟ್ಟಡದ ಎದುರಿಗೇ ವೇಗವಾಗಿ ಅದನ್ನ ದಾಟಿ ಹೋಗ್ತಾ ಇದ್ದೇವೆ. ಯಾಕದು?" ಅದಕ್ಕೆ ಯೇಸುವಿನ ಉತ್ತರ, "ಚರ್ಚು ಅನ್ನೋದು ಕಟ್ಟಡಕ್ಕೆ ಸಂಬಂಧಿಸಿದ್ದು ಅಂತ ಯಾರು ಹೇಳಿದ್ದು?"

ಈ ಪ್ರಶ್ನೆ ಇವತ್ತು ಹಿಂದೆಂದಿಗಿಂತಲೂ ಅಗತ್ಯ ಮತ್ತು ಅರ್ಥಗರ್ಭಿತ. ಸ್ಥಾವರದ ಚರ್ಚಿನ ಬಾಗಿಲನ್ನು ತೆರೆಯುವ ನಮ್ಮ ತರಾತುರಿ ಬಹುಷಃ ಚರ್ಚಿನ ಕುರಿತಾದ ನಮ್ಮೊಳಗಿರುವ ತಪ್ಪು ಕಲ್ಪನೆಯನ್ನು ಪ್ರಶ್ನಿಸುತ್ತದೆ. 

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ದಿನಗಳ ಹಿಂದೆ 'ಚರ್ಚುಗಳ ಮೇಲಿನ ಎಲ್ಲಾ ವಿಧದ ನಿರ್ಬಂಧಗಳನ್ನು ಸಡಿಲಿಸಬೇಕು, ಯಾಕೆಂದರೆ ಚರ್ಚುಗಳು ಮತ್ತು ಆರಾಧನಾ ಸ್ಥಳಗಳು ನಮ್ಮ ವಿಶ್ವಾಸಕ್ಕೆ ಅತೀ ಅವಶ್ಯಕ (essential)' ಎಂಬ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಈ ಅಭಿಯಾನ ಆರಂಭವಾಗಿದೆ.   

ಯಾವುದು ನಮ್ಮ ವಿಶ್ವಾಸಕ್ಕೆ ಎಸ್ಸೆನ್ಶಿಯಲ್ (ಅತ್ಯವಶ್ಯಕ)? ಕ್ರೈಸ್ತ ವಿಶ್ವಾಸ ಮತ್ತು ಪರಂಪರೆಯ ಬೆಳಕಿನಲ್ಲಿ ನೋಡಿದರೆ, ಚರ್ಚು ಎಂಬ ಕಟ್ಟಡ ಕ್ರೈಸ್ತವಿಶ್ವಾಸದ ಅತೀ ಅಗತ್ಯ ತಳಪಾಯ ಅಲ್ಲವೇ ಅಲ್ಲ. ಸುವಾರ್ತೆ, ಪ್ರೀತಿ, ಸಾಕ್ಷಿಯ ಬದುಕು, ನ್ಯಾಯ-ಧರ್ಮ-ಶಾಂತಿ-ಸಮಾನತೆಯಿಂದ ಕೂಡಿದ ದೇವರ ರಾಜ್ಯದ ಸಾಕಾರ - ಇವೆಲ್ಲವೂ ಆದಿಸಭೆಯಿಂದಲೂ ಕ್ರೈಸ್ತವಿಶ್ವಾಸದ essentials, ಅಂದರೆ ಅತೀ ಅವಶ್ಯಕಗಳು, ಎಂಬುದು ಚರಿತ್ರೆಯಿಂದ ವೇದ್ಯವಾಗುವ ಸತ್ಯ. 

ಹಾಗಂದ ಮಾತ್ರಕ್ಕೆ ಆರಾಧನಾ ಸ್ಥಳಗಳು, ಸಭಾ ಆರಾಧನೆಗಳು, ಸಭಾಪಾಲಕರು, ಸಭಾಕ್ರಮಗಳು ಇವೆಲ್ಲವೂ ಬೇಡವೆಂದಲ್ಲ. ಕ್ರೈಸ್ತ ವಿಶ್ವಾಸದ ಚರಿತ್ರೆಯಲ್ಲಿ ಇವೆಲ್ಲವುಗಳಿಗೂ ಅವುಗಳದೇ ಆದ ವಿಶಿಷ್ಟ ಸ್ಥಾನಗಳಿವೆ ಮತ್ತು ಅರ್ಥಗಳಿವೆ. ಇಂದು ಎಷ್ಟೋ "ಕ್ರೈಸ್ತ" ಎಂದು ಹೇಳಿಕೊಳ್ಳುವ ಗುಂಪುಗಳು, ಪಂಗಡಗಳು ಇವೆಲ್ಲವನ್ನೂ ತುಚ್ಚೀಕರಿಸಿ ವ್ಯಕ್ತಿಗತ (individualistic) ಬದುಕನ್ನು ವಿಶ್ವಾಸದ ತಳಹದಿ ಮಾಡಿಕೊಂಡಿರುವುದು ಅಪಾಯಕರ. ಇನ್ನು ಇದನ್ನೇ ಬಂಡವಾಳವಾಗಿಸಿಕೊಂಡು ತಮ್ಮ ಚೀಲ ತುಂಬಿಸಿಕೊಳ್ಳುತ್ತಿರುವ "ಕ್ರೈಸ್ತ" ಟಿ.ವಿ. ಚಾನಲ್ಲುಗಳು, ಯೂಟ್ಯೂಬ್ ಚಾನಲ್ಲುಗಳೂ ಅಷ್ಟೇ ಅಪಾಯಕಾರಿ. 

ಆದ್ದರಿಂದ ಕೊರೋನಾದ ಸೋಂಕಿನ ಸಂದರ್ಭದಲ್ಲಿ ನಾವು ಚರ್ಚಿನ ಕುರಿತಾದ ನಮ್ಮ ವಿಶ್ವಾಸವನ್ನು ಸಾಂದರ್ಭಿಕವಾಗಿ ಅರ್ಥೈಸುವ ಅನಿವಾರ್ಯತೆ ಇದೆ. ಕೊರೋನಾವನ್ನು ಪಸರಿಸಬಲ್ಲ ಚಿಕ್ಕ ಸಾಧ್ಯತೆಗೂ ಎಣೆಮಾಡಿಕೊಡದಿರುವುದು ಚರ್ಚ್ ಅಥವಾ ಕ್ರೈಸ್ತ ಸಭೆಯಾಗಿ ನಮ್ಮ ಮುಂದಿರುವ ಬಹುದೊಡ್ಡ ಜವಾಬ್ಧಾರಿ. 

ಮಿಸ್ಸೂರಿಯ ಎಪಿಸ್ಕೋಪಲ್  ಡಯಾಸಿಸ್ಸಿನ ಬಿಷಪ್ ಡಿಯೋನ್ ಜಾನ್ಸನ್ ರವರು ಇಂದು ಕ್ರೈಸ್ತ ಸಭೆ ಯಾವ ತನ್ನ ಕಾರ್ಯವನ್ನು ಎಸೆನ್ಷಿಯಲ್ ಅಥವಾ ಅತೀ ಅವಶ್ಯಕ ಅಂತ ಪರಿಗಣಿಸಬೇಕು ಅನ್ನೋದನ್ನ ಬಹಳ ಅರ್ಥಗಭಿತವಾಗಿ ತಿಳಿಸಿದ್ದಾರೆ:

"ಸಭೆಯ ಕಾರ್ಯ ಅತೀ ಅವಶ್ಯಕ." ಆದ್ರೆ ಯಾವುದು ಆ ಕಾರ್ಯ? "ಅಂಚಿನಲ್ಲಿರುವವರ, ತುಳಿತಕ್ಕೊಳಗಾದವರ, ಒಬ್ಬಂಟಿಯಾಗಿರುವವರ ಪರ ಕಾಳಜಿವಹಿಸುವ ಕಾರ್ಯ ಅತೀ ಅವಶ್ಯಕ. ಪ್ರಾಬಲ್ಯಗಳ ಕಡೆಗೆ ಧ್ವನಿಯೆತ್ತಿ ನ್ಯಾಯದ ಪರ ಮಾತನಾಡುವ ಕಾರ್ಯ ಅತೀ ಅವಶ್ಯಕ. ಪ್ರೀತಿಸುವ, ವಿಮೋಚಿಸುವ, ಮತ್ತು ಜೀವವನ್ನು ನೀಡುವ  ಕಾರ್ಯ ಅತೀ ಅವಶ್ಯಕ... ಸಭೆ "ತೆರೆಯುವ" ಅಗತ್ಯವಿಲ್ಲ, ಯಾಕೆಂದರೆ ಅದು ಎಂದೂ "ಮುಚ್ಚಿರಲಿಲ್ಲ". ಕ್ರಿಸ್ತನ ದೇಹವಾದ ನಾವು, ದೇವರನ್ನೂ ನಮ್ಮ ನೆರೆಯವರನ್ನೂ ಪ್ರೀತಿಸುವ ನಾವು, ನಮ್ಮ ಸಭಾ ಕಟ್ಟಡಗಳು ಸುರಕ್ಷಿತವಾಗುವತನಕ ಆ ಕಟ್ಟಡಗಳಿಂದ  ದೂರವಿರುತ್ತೇವೆ."

ಸ್ಥಾವರದ ಸಭೆಯನ್ನು ಪ್ರವೇಶಿಸುವ ತಾರಾತುರಿಯಲ್ಲಿರುವ ನಾವು ಸ್ವಲ್ಪ ಈ ಕುರಿತು ಯೋಚಿಸುವುದು ಅಗತ್ಯವಲ್ಲವೇ? 

ನೆನಪಿರಲಿ : ಅಪೋಸ್ತಲರ ಕ್ರತ್ಯಗಳು ಪುಸ್ತಕದಲ್ಲಿ ಬರುವ ಎಲ್ಲಾ ದೇವದರ್ಶನದ ಅಥವಾ "ದೇವರ ಅನುಭವ"ದ ಘಟನೆಗಳು ನಡೆಯುವುದೂ ಕಟ್ಟಡದ ಸಭೆಯಲ್ಲಿ ಅಲ್ಲ; ಬದಲಾಗಿ, ರಸ್ತೆಗಳಲ್ಲಿ, ಮೇಲುಪ್ಪರಿಗೆಯಲ್ಲಿ, ಮರುಭೂಮಿಯಲ್ಲಿ, ಮತ್ತು ಸೆರೆಮನೆಗಳಲ್ಲಿ. 

ಮತ್ತೆ ನಾವೇಕೆ ಇಂದು ದೇವರನ್ನು ಹುಡುಕಿಕೊಂಡು, ಅಸುರಕ್ಷಿತ ಸ್ಥಾವರ ಚರ್ಚುಗಳನ್ನು ತೆರೆಯುವ ತಾರಾತುರಿಯಲ್ಲಿದ್ದೇವೆ? ನಮ್ಮ ನೆರೆಯವರಿಗೆ ಕೊರೋನಾ ಸೋಂಕು ತಗುಲಿದರೂ ಅಡ್ಡಿಯಿಲ್ಲ, ಆಲಯಗಳು ತೆರೆಯಲೇಬೇಕು ಎಂಬ ಹಠ ಏಕೆ?

  




Wednesday, May 20, 2020

Re-visiting Mahatma for Redeeming the Distorted Truths


Review Article by Gladson Jathanna

GANDHI IN SOUTH AFRICA: A RACIST OR A LIBERATOR? by Siby K. Joseph. Wardha: Institute of Gandhian Studies, 2019. 111 pages. Inclusive of Appendix. No index.

Dr. Siby K. Joseph
Dean of Studies and Research
Institute of Gandhian Studies, Wardha
Noam Chomsky once said, “It is the responsibility of intellectuals to speak the truth and to expose lies.”[1] An intellectual, who is committed for the cause of a peaceful co-existence, can never sit peacefully at the face of lies dancing on the tenanted truth/s and threatening the peace of all. He/She would spend sleepless nights and days struggling to expose those celebrated lies and to speak out the distorted truth. And finally, when the truth is told, s/he would find solace in the deepest shrine of his/her being, witnessing to the enlightenment among the multitudes who embrace truth and discard the bundles of lies. This must be the experience of Dr. Siby K. Joseph, the Dean of Studies and Research, Institute of Gandhian Studies, Wardha, after the completion of his momentous book, Gandhi in South Africa: A Racist or A Liberator?, a work that redeems Mahatma Gandhi from the distorted images by unraveling the truths and exposing the lies about Mahatma. 

This book is a result of a committedly engaged study reflecting on Gandhi’s approach to caste and race in South Africa. The book introduces the readers the conviction of the author, which emerges out of an immersed study into the life and works of Gandhi, that ‘Gadhi was neither a casteist nor a racist’ (p.17). The hope by which the book is written is to help the readers in dispelling their doubts about Gandhi being a racist and to promote further research on this area of study.

Ela Gandhi, the granddaughter of Mahatma Gandhi and a former Member of Parliament in South Africa, writes a very fitting, profound, and thought-provoking Foreword to this book. She holds that ‘truth can be distorted by the way in which it is presented or by giving a one-sided version, or by being simply untruthful.’ With this, she expresses her concern on the distorted truths in relation to the life and works of Gandhi. She firmly believes that ‘a person who advocated love of all life cannot be racist.’

This Review has been first published on 
Gandhi Marg Quarterly
41(4), 2019: 473-477.
In the introductory chapter, the author carefully problematizes and critically disenfranchises a few influential voices that vehemently strive to prove that Gandhi was a casteist and a racist. Three of those major voices and contexts are: 1. Booker prize-winning author and a very influential liberal activist of our time Arundati Roy who violently argues that Gandhi was a racist and even demands the renaming of all the institutions named after Gandhi. 2. Ashwin Desai and Goolam Vahed, professors at the University of Johannesburg and the University of KwaZulu Natal, who argue that Gandhi was an ardent racist who thought Africans were “Kaffirs”. 3. The controversies and misconceptions about Gandhi’s approach to race and racial discrimination that further fueled the unveiling of a statue of Gandhi in the University of Ghana’s Legon campus and the construction of a Gandhi bust in Malawi. This chapter briefly puts forward the larger debate surrounded by all these three intertwined events and opinions highlighting both pro and contra opinions on Gandhi. On the one hand, there were activists like Kambewa Mpambira of Malawi and researchers like Obadele Kambon of Ghana who vehemently argued supporting the notion that Gandhi was a racist. On the other hand, there were also worldwide responses to such a grave allegation against Gandhi mainly from Robert Mkwezalamba, Bright Kampaundi Chodzi, Gopalkrishna Gandhi, Ramachandra Guha, Rajmohan Gandhi, and others. By introducing such a wide range of debates, the chapter displays how all these developments created unease about Gandhi’s approach to these issues among general readers who have not studied Gandhi systematically and in detail. Therefore, the author strongly feels that “[i]n this context, it is necessary to revisit Gandhi’s approach to race and racial discrimination and his fight for the dignity of people of Indian origin in South Africa” (p. 28).

The following chapters attempt to study the above-mentioned opinions and contexts in detail, particularly in the light of the major writings as well as the actions of Gandhi in South Africa. The author shows how the opinions against Gandhi were cropped up either by misquoting Gandhi or by taking his writings out of the context. Talking about Arundati Roy’s allegations against Gandhi, the second chapter shows that how Roy speaks either without evidence or skillfully culling out passages from Gandhi’s writings taking them out of their contexts in order to prove her opinions that Gandhi was a racist, that he was against indentured labourers and that he distanced himself from the coolies. Placing such misquoted passages from Gandhi’s writings in their right historical context, the author displays very clearly the follies of the most popular ‘liberal’ writer and activist of our time and shows how Gandhi broke caste, religious and racial borders and boundaries and went much beyond such barriers. This chapter also revisits Gandhi’s actions in South Africa and argues that any evaluation of Gandhi must consider not only his writings but also his actions in order to get a holistic picture of Gandhi’s attitude towards any sort of discrimination. It shows how Gandhi questioned the British policy of discriminating people on the basis of the colour of their skin. “He even went to the extent of discussing the idea of commingling of all races [already] in 1908 which was revolutionary at that time” (p. 49).

Revisiting Ashwin Desai and Goolam Vahed’s allegations against Gandhi as an upholder of Aryan race superiority and thus dehumanizer of the African race, the author goes back in the third chapter to the writings and statements of Gandhi that they were referring to. Placing Gandhi’s analogy of Aryan race theory in its socio-political historical context, the book argues that Gandhi was not in favor of claiming any sort of benefit on racial grounds or Aryan lineage. He, in no way, glorifies Aryan bloodline; on the contrary, he describes Aryans as colonizers (p. 55). Gandhi used this theory to remind the British that ‘Indians were in no way inferior to Anglo Saxon brethren’ (p. 56) and not to place the Brown over the Black. The author also revisits Gandhi’s use of the term kaffir for the black Africans (for which he was criticized fervently) and shows clearly that Gandhi was just using the language of his time and that he did not mean any ill will to the Africans by using the term. Moreover, the book shows how Gandhi derived inspiration from the sufferings of the Africans, especially of Zulus, for his Satyagraha movement. After his return from South Africa, even while fighting for the freedom of India, Gandhi was concerned about the problems of Blacks in Africa and America. “Thus his fight in the ultimate analysis was not merely for the freedom of India but also of Africa, and America” (p. 64).

The third context is addressed in the fourth chapter: the opposition to the installation of the Gandhi statue in Ghana and to the installation of Gandhi bust in Malawi. In the first case, six citations were made from the works of Gandhi whereas in the second case, three arguments were made against Gandhi again citing some statements of Gandhi in order to show that he had contempt for the black African race. The author once again very committedly argues and shows how these citations were taken out of context and ascribed unintended meanings to them. He passionately relocates the cited statements in their right historical contexts and shows the readers how distorted judgments were drawn against Gandhi by adopting a reductionist approach.

The fifth chapter brings the quotations of Gandhi which Obadele Kambon used to show that Gandhi was a thorough going racist. Those quotations are juxtaposed with the relevant texts from “The Collected Works of Mahatma Gandhi” in order to help the readers to understand the context of Gandhi’s statements and to know better the meaning of citations which appear offensive at the first sight. Along with that, the author brings in the statements of L. W. Ritch and Mahomed Khan which were presented by the petitioners as Gandhi’s own. As the author clearly mentions, “The primary aim of giving the relevant text of his citations is not to tell that Gandhi was perfect, error-free or a Mahatma… [The] author would like to suggest that a historical person should be evaluated from the viewpoints and practices of his time, not those of our time. In addition, an ever-evolving person like Gandhi should be assessed on the basis of the totality of his positions on race, caste, equality, and liberty when they took firm shape” (p. 99).

The book ends with the full text of Gandhi’s written Statement in the Great Trial of 1922 as a fitting appendix. This, along with all the other citations to Gandhi’s works in the book, enables the readers to see on their own, without being influenced by any secondary readings and perspectives, that how Gandhi went far beyond his time in his approach to issues related to race, caste, colour, and creed in comparison to his contemporaries. As Ela Gandhi rightly asserts, ‘this book helps to clarify one point very clearly and that is that one cannot make conclusions based on quotes, stated out of context.’ However, it is quite evident that in our much polarized contemporary context, prejudiced conclusions are easily drawn to establish and celebrate bundles of lies. It is doubly disturbing when the so-called champions of liberalism become the rigorous proponents of such untruths. That is why, perhaps, the Latin American proverb says, “liberals are fascists on vacation.” This book reminds the need to qualify the contextual criticism of history and historical personalities which does not come from a deep sense of commitment to the wellbeing of all but from a prejudiced egoistic opinion. Dr. Siby K. Joseph needs to be congratulated and appreciated for this enthusiastically engaged and decisively daring tribute to Mahatma and hence unveiling a number of distorted and disfigured truths in the history. Hence, the present book is a must-read for both the admirers and the critics of Gandhi. And above all, it is a must-read for those who really care for the past, present, and future of a borderless society for which Gandhi stood, strived, and even surrendered his life.

____________________
[1] Noam Chomsky, “The Responsibility of Intellectuals,” in The Essential Chomsky, edited by Anthony Arnove, New York, London: The New Press, 2008, 40.

Monday, April 6, 2020

ಕೊರೋನಾ ಮತ್ತು ಕಮ್ಯೂನಿಯನ್ : ಒಂದು ಜಿಜ್ಞಾಸೆ

ಗ್ಲ್ಯಾಡ್ ಸನ್  ಜತ್ತನ್ನ


ಕೋವಿಡ್-೧೯ ಎಂಬ ನಮ್ಮ ತಲೆಮಾರಿನ ಬಹುದೊಡ್ಡ ಸಾಂಕ್ರಾಮಿಕ ಪಿಡುಗು ಒಂದು ಕಠೋರ ದುಃಸ್ವಪ್ನವಾಗಿ ಇಡೀ ಜಗತ್ತನ್ನೇ ಕಾಡುತ್ತಿರುವ ಸಂದರ್ಭದಲ್ಲಿ ಕ್ರೈಸ್ತವಿಶ್ವಾಸವು ಕೂಡಾ ತನ್ನ ತಳಪಾಯವನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದೆ. ಕೊರೋನಾವನ್ನು ಮನುಕುಲದ ಪಾಪದ ವಿರುದ್ಧ ದೇವರ ಶಾಪ ಮತ್ತು ಇದು ಲೋಕದ ಅಂತ್ಯದ ಆರಂಭ ಎಂದು ವ್ಯಾಖ್ಯಾನಿಸಿ ದೇವರ ಗ್ರಹಿಸಲಾಗದ ಅಪರಿಮಿತ ಮತ್ತು ಅಗಾಧ ಪ್ರೀತಿ ಹಾಗೂ ಅನನ್ಯ ಕೃಪೆಗೆ ಅವಮಾನವೆಸಗುತ್ತಿರುವ ವರ್ಗ ಒಂದೆಡೆಯಾದರೆ, ಕೊರೋನಾವು ಚೀನೀಯರು ತಮ್ಮ ರಾಜಕೀಯ ಮತ್ತು ಆರ್ಥಿಕ ಉದ್ದೇಶಗಳಿಗಾಗಿ ಹುಟ್ಟುಹಾಕಿದ ಬಯೋ-ಅಸ್ತ್ರವೆಂಬ ಅಮೇರಿಕಾದ ವ್ಯಾಖ್ಯಾನವನ್ನು ಪ್ರಶ್ನಾತೀತವಾಗಿ ಸ್ವೀಕರಿಸಿ ಅದಕ್ಕೆ ಇನ್ನಷ್ಟು ಪ್ರಚಾರ ನೀಡುತ್ತಿರುವ ವರ್ಗ ಮತ್ತೊಂದೆಡೆ. ಇನ್ನು ನಮ್ಮ ದೇಶದಲ್ಲಿ ಈ ಸೋಂಕನ್ನು ಪಸರಿಸಿದ್ದು ಮುಸಲ್ಮಾನರು ಮತ್ತು ಅವರಿಗೆ ಇದೊಂದು ಭಯೋತ್ಪಾದನಾ ಅಸ್ತ್ರ ಎಂದು ಕೊರೋನಾವನ್ನು ಕೋಮುವಾದದ ರಾಜಕಾರಣಕ್ಕೆ ಎಳೆದು ಮುಸಲ್ಮಾನ ಬಾಂಧವರನ್ನು ಸೈತಾನೀಕರಿಸುತ್ತಿರುವ ವರ್ಗವೂ ಇಂದು ಬೆಳೆಯುತ್ತಿರುವುದು ದುರದೃಷ್ಟಕರ ಮತ್ತು ಅಷ್ಟೇ ಅಪಾಯಕಾರಿ. ಕ್ರೈಸ್ತ ಸಮುದಾಯವು ಇಂಥ ಯಾವ ವರ್ಗದ ಭಾಗವಾಗದೇ ತನ್ನ ವಿಶ್ವಾಸದ ಸಂಕುಚಿತ ಪರಿಧಿಗಳನ್ನು ಒಡೆದು ವಿಶಾಲವಾದ ಮತ್ತು ಅಷ್ಟೇ ಘಟ್ಟಿಯಾದ ಬುನಾದಿಯನ್ನು ಪುನರ್-ಕಟ್ಟುವ  ಸಮಯವಿದು ಎಂದು ಪರಿಗಣಿಸಿದರೆ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಒಳಿತಾಗಬಲ್ಲದು. 

ಸಂತೋಷದ ಸಂಗತಿಯೇನೆಂದರೆ, ಸಾಮಾಜಿಕ ಅಂತರವನ್ನು (ಸೋಷಿಯಲ್ ಡಿಸ್ಟನ್ಸ್) ಪಾಲಿಸಬೇಕಾದ ಇಂದಿನ ಅನಿವಾರ್ಯ ಸಂದರ್ಭದಲ್ಲಿ, ಜಾಗತಿಕ ಕ್ರೈಸ್ತ ಸಮುದಾಯವು ಕ್ರೈಸ್ತ ಅನ್ಯೋನ್ಯಕ್ಕೆ ಒಂದು ಅನನ್ಯ ಸಂಕೇತವಾದ ಕರ್ತನ ಪವಿತ್ರಭೋಜನ ಅಥವಾ ಯೂಖರಿಸ್ಟನ್ನು ಆಚರಿಸುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿದೆ. ಈ ಕುರಿತು ವಿವಿಧ ಸಭಾಸಂಪ್ರದಾಯಗಳು ಹುಡುಕಾಡುತ್ತಿರುವ ವಿಭಿನ್ನ ಪರ್ಯಾಯ ವಿಧಾನಗಳನ್ನು ಗಮನಿಸಿ ಕ್ರೈಸ್ತ ಸಭೆ ಒಂದು ಸ್ಥಿತ-ರಚನೆಯಲ್ಲ, ಬದಲಾಗಿ ಅದೊಂದು ಚಲನಾತ್ಮಕ/ಘಟಿಸುತ್ತಿರುವ/ಸಂಭವಿಸುವ ಸಮುದಾಯ (ಚರ್ಚ್ ಈಸ್ ಎ ಹ್ಯಾಪನಿಂಗ್)ವೆಂದು ಅರ್ಥವಿಸುವ ಅಗತ್ಯವಿದೆ. 

ಈ ಬೆಳಕಿನಲ್ಲಿ ವಿವಿಧ ಕ್ರೈಸ್ತ ಸಭಾಸಂಪ್ರದಾಯಗಳಲ್ಲಿ ನಡೆಯುತ್ತಿರುವ ಸಕ್ರಿಯ ಜಿಜ್ಞಾಸೆಯ ಕಡೆಗೆ ಒಂದಿಷ್ಟು ಗಮನ ಹರಿಸೋಣ: 

ಆರ್ಥಡಾಕ್ಸ್ ಸಂಪ್ರದಾಯದ ಸಭೆಗಳು ಯೂಖರಿಸ್ಟ್ ಆಚರಣೆಯನ್ನು ಕ್ರೈಸ್ತ ಆರಾಧನೆ ಮತ್ತು ಸಾಕ್ಷಿಯ ಕೇಂದ್ರವಾಗಿರಿಸಿಕೊಂಡಿರುವ ಸಭೆಗಳು. ಆದರೆ ಯೂಖರಿಸ್ಟ್ ನ ಆಚರಣೆಯನ್ನೇ ರದ್ಧುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವ ಈ ಸಂದರ್ಭದಲ್ಲಿ ಆರ್ಥಡಾಕ್ಸ್ ದೈವಶಾಸ್ತ್ರಜ್ಞರು ಒಂದು ಆರೋಗ್ಯಕರ ಚರ್ಚೆಯಲ್ಲಿ ತೊಡಗಿರುವುದು ಗಮನಾರ್ಹ. ಹೆಸರಾಂತ ಆರ್ಥಡಾಕ್ಸ್ ದೈವಶಾಸ್ತ್ರಜ್ಞ ಮತ್ತು ಪೆರ್ಗಮಾನ್ ನ ಮೆಟ್ರೊಪಾಲಿಟನ್ ಜಾನ್ ಜಿಜಿಯುಲಾಸ್ ರ ಪ್ರಕಾರ ಪವಿತ್ರ ಯೂಖರಿಸ್ಟ್ ಇಲ್ಲದ ಸಭೆಯು ಸಭೆಯೇ ಅಲ್ಲ. ಆದರೆ ಈ ವೈರಾಣುವನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಅಪಾಯವಿರುವ ಇಂದಿನ ಸಂದರ್ಭದಲ್ಲಿ ನಾವು ಯಾವುದೇ ಅಗತ್ಯ ಮತ್ತು ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳುವ ಅನಿವಾರ್ಯತೆಗೆ ಅದು ನಮ್ಮನ್ನು ತಂದು ನಿಲ್ಲಿಸಿದೆ. ಆ ಅನಿವಾರ್ಯತೆ ಆಲಯದಲ್ಲಿ ನಡೆಯುವ ಆರಾಧನೆಯನ್ನು ರದ್ಧುಗೊಳಿಸುವ ನಿರ್ಧಾರವೂ ಆಗಿರಬಹುದು. ಹೀಗಿದ್ದರೂ ಸಣ್ಣ ಸಂಖ್ಯೆಯಲ್ಲಿ, ಅಂದರೆ ಐದು ಜನರು ಮೀರದಂತೆ, ಜನರು ಸಭೆಯಾಗಿ ಸೇರಿಬಂದು ಪಾದ್ರಿಗಳಿಂದ ಆಚರಿಸಲ್ಪಡುವ ಪವಿತ್ರ ಯೂಖರಿಸ್ಟ್ ನಲ್ಲಿ ಬಾಗವಹಿಸುವುದು ಸಾಧ್ಯ ಮತ್ತು ಅಗತ್ಯ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮತ್ತದು ಕೊರೋನಾ ವೈರಾಣುವನ್ನು ವರ್ಗಾಯಿಸುವ ಶೂನ್ಯ ಸಾಧ್ಯತೆಗೆ ನಡೆಸಬಲ್ಲದು ಎಂಬದೂ ಅವರ ಅಭಿಮತ. 

ಅಮೇರಿಕಾದ ಗ್ರೀಕ್ ಆರ್ಥಡಾಕ್ಸ್ ಆರ್ಚ್ ಡಯಾಸಿಸಿಸಿನ ಪಾದ್ರಿಯಾದ ಡಾ. ನಿಕೋಲಾಸ್ ಕಜರಿಯಾನ್ ಶ್ರಮಾದಿನಗಳನ್ನು ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮರುವ್ಯಾಖ್ಯಾನಿಸುತ್ತಾ, ಈಬಾರಿಯ ಶ್ರಮಾದಿನಗಳು ಹಲವು ವಿಧಗಳಲ್ಲಿ ವಿಚಿತ್ರ, ಯಾಕೆಂದರೆ ಇದು ಉಪವಾಸದ, ಪ್ರಾರ್ಥನೆಯ ಮತ್ತು ಪಶ್ಚಾತ್ತಾಪದ ನಮ್ಮ ಹಳೆಯ ವಿಧಾನಗಳನ್ನು ತ್ಯಜಿಸಲು ಕರೆನೀಡುತ್ತವೆ. ಉಪವಾಸವು ಕೂಡಾ ಒಂದು ಪರಿತ್ಯಾಗವಂತಾದರೆ, ಪ್ರಸ್ತುತ ಬಂದೊದಗಿರುವ ಬಿಕ್ಕಟ್ಟು ನಮ್ಮ ಜೀವಮಾನ ಕಾಲದಲ್ಲೇ ನಾವು ಆಚರಿಸದ ಅತ್ಯುತ್ತಮ ಶ್ರಮಾದಿನಗಳನ್ನು ಆಚರಿಸಲು ನಮ್ಮನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಯಾಕೆಂದರೆ, ನಾವು ಈ ಹಿಂದೆ ಸಭೆಗಳಲ್ಲಿ ಆರಾಧಿಸುತ್ತಿದ್ದ, ಕರ್ತನ ಭೋಜನವನ್ನು ಸ್ವೀಕರಿಸುತ್ತಿದ್ದ ಮತ್ತು ಪವಿತ್ರವಾರವನ್ನು ಆಚರಿಸುತ್ತಿದ್ದ ನಮ್ಮ ಹಳೆಯ ವಿಧಾನಗಳನ್ನು ತ್ಯಜಿಸಲು ಈ ಬಿಕ್ಕಟ್ಟು ನಮ್ಮನ್ನು ನಡೆಸಿದೆ ಎನ್ನುತ್ತಾರೆ. ಕ್ರೈಸ್ತಸಭೆಯ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಯ ಕುರಿತು ಅವರು ಮಾತನಾಡುತ್ತಾ, ನಾವಿಂದು ಕ್ರೈಸ್ತಸಭೆ ಮತ್ತು ಕ್ರೈಸ್ತತ್ವದಲ್ಲಿ ನಮ್ಮ ರಕ್ಷಣೆಯನ್ನು ಹುಡುಕುವ ಬದಲಿಗೆ ಸಭೆ ಮತ್ತು ಕ್ರೈಸ್ತತ್ವವನ್ನೇ ರಕ್ಷಿಸಲು ಹೊರಟಂತೆ ಕಾಣುತ್ತದೆ. ಚರ್ಚು, ಸಂಪ್ರದಾಯಗಳಿಗಿಂತಲೂ ನಮ್ಮ ನೆರೆಯವರು ಇಂದು ನಮ್ಮ ನೈಜ ಆಧ್ಯತೆಯಾಗಬೇಕಾಗಿದೆ ಎಂಬ ಬಹು ಅರ್ಥಗರ್ಭಿತ ಚಿಂತನೆಯನ್ನು ಅವರು ನಮ್ಮ ಮುಂದಿಡುತ್ತಾರೆ. ಇದೇ ಅಭಿಪ್ರಾಯವನ್ನು ಪ್ರತಿಪಾದಿಸುತ್ತಾ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಬಾರ್ತಲೋಮಿಯೊರವರು, "ಈಗ ಸಮಸ್ಯೆಯಲ್ಲಿರುವುದು ನಮ್ಮ ನಂಬಿಕೆಯಲ್ಲ, ಬದಲು ನಂಬಿಕೆಯ ಸಮುದಾಯ; ಕ್ರಿಸ್ತನಲ್ಲ, ಕ್ರೈಸ್ತರು; ದೈವಮಾನವನಲ್ಲ, ಬದಲು ಮಾನವರು" ಎನ್ನುತ್ತಾರೆ. ಈ ಎರಡು ವಾದಗಳೂ ನಮ್ಮ ಸಂದರ್ಭದಲ್ಲಿ ಅತ್ಯಂತ ಆಳವಾದ ದೈವಶಾಸ್ತ್ರೀಯ ಸತ್ಯವನ್ನು ಸಾರುತ್ತವೆ. ಸಭೆಯ ಪ್ರಧಾನ ಆಧ್ಯತೆ ಸಮಸ್ಯೆಯಲ್ಲಿರುವ ಜನರೇ ಹೊರತು, ನಮ್ಮ ಸಂಪ್ರದಾಯಗಳಲ್ಲ ಎಂಬ ಮಾತು ಇವತ್ತು ಸಾಂಪ್ರದಾಯಿಕ ರೀತಿಯಲ್ಲಿ ಕಮ್ಯೂನಿಯನ್ ತೆಗೆದುಕೊಳ್ಳಲಾಗದಿದ್ದರೆ ಕ್ರೈಸ್ತತ್ವವೇ ಸತ್ತು ಹೋಗುತ್ತದೆಯೇನೋ ಎಂದು ಆತಂಕಪಡುವ ಮನಸ್ಸುಗಳಿಗೆ ಉತ್ತಮ ಮಾರ್ಗಸೂಚಿಯಾಗಬಲ್ಲದು. 

ಆರ್ಥಡಾಕ್ಸ್ ಸಭೆಯ ಯುವ ದೈವಸಾಸ್ತ್ರಜ್ಞ ಡಾ. ಮಾರ್ಕ್ ರೂಸಿಯೆನ್ ಈ ಕುರಿತು ಗಂಭೀರ ದೈವಶಾಸ್ತ್ರೀಯ ಚಿಂತನೆಯೊಂದನ್ನು ಹಂಚಿಕೊಂಡಿದ್ದಾರೆ. 'ಫಾಸ್ಟಿಂಗ್ ಫ್ರಮ್ ಕಮ್ಯೂನಿಯನ್ ಇನ್ ಎ ಪೆಂಡೆಮಿಕ್' (ಒಂದು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕರ್ತನಭೋಜನವನ್ನು ಪರಿತ್ಯಜಿಸುವುದು) ಎಂಬ ತಮ್ಮ ಲೇಖನದಲ್ಲಿ ಹೀಗೆ ಬರೆಯುತ್ತಾರೆ: ಇಂಥ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕರ್ತನ ದೇಹ ರಕ್ತಗಳಿಂದ ವಂಚಿತರಾಗುವ ಸ್ಥಿತಿಯು ದೇವರು ನಮ್ಮ ಮಾನವ ಬಲಹೀನ ಸ್ಥಿತಿಯಲ್ಲಿ ನಮ್ಮೊಂದಿಗೆ ಹೇಗೆ ಒಂದಾದನು ಎಂಬುದನ್ನು ನೆನಪಿಸಿಕೊಳ್ಳುವುದಕ್ಕೆ ನಮಗೆ ಸಹಾಯ ಮಾಡುತ್ತದೆ. ಯೇಸುವಿಗೆ ದೈವೀಕ ಅನುಪಸ್ಥಿತಿಯ ಅರಿವಿತ್ತು. ಕ್ರೂಜೆಯಲ್ಲಿ ಆತ "ನನ್ನ ದೇವರೇ, ನನ್ನ ದೇವೆರೇ, ಯಾಕೆ ನನ್ನ ಕೈಬಿಟ್ಟಿದ್ದೀ" ಎಂದು ಕೂಗಿಟ್ಟ. ಅದು ಯೇಸುಕ್ರಿಸ್ತ ನಮಗೋಸ್ಕರ ಮಾಡಿದ ಬಲಿದಾನ/ತ್ಯಾಗ. ಚರ್ಚಿಗೆ ಹೋಗಲಾಗದೆ ಕರ್ತನ ಪವಿತ್ರಭೋಜನದಲ್ಲಿ ಪಾಲ್ತೆಗೆದುಕೊಳ್ಳದೆ ಇರುವುದು ನಾವು ಇತರರ ಒಳಿತಿಗಾಗಿ ಮಾಡಬೇಕಾದ ಅನಿವಾರ್ಯ ಮತ್ತು ಅಗತ್ಯ ಬಲಿದಾನ/ತ್ಯಾಗ ಎನ್ನುತ್ತಾರೆ ಫಾದರ್ ರೂಸಿಯೆನ್. 

ರೋಮನ್ ಕಥೋಲಿಕ ಸಭೆಗಳಲ್ಲಿಯೂ ಕೊರೋನಾದ ಸಂದರ್ಭದಲ್ಲಿ ಯೂಖರಿಸ್ಟ್ ಆಚರಣೆಯ ಪರ್ಯಾಯ ವಿಧಾನಗಳ ಕುರಿತು ಜಿಜ್ಞಾಸೆಗಳು ನಡೆಯುತ್ತಿವೆ. ವರ್ಚುವಲ್ ಯೂಖರಿಸ್ಟ್ ಆಚರಣೆಯ ಸಾಧ್ಯಾಸಾಧ್ಯತೆಗಳ ಕುರಿತು ಸಭೆ ಗಂಭೀರವಾಗಿ ಚರ್ಚಿಸುತ್ತಿದೆ. ಮಾಸ್ಸಿಮೋ ಫಗ್ಗಿಯೊಲಿ ಎಂಬ ಕಥೋಲಿಕ ದೈವಶಾಸ್ತ್ರಜ್ಞ ಕೊರೋನಾ ಸೋಂಕಿನ ಸಂದರ್ಭದಲ್ಲಿ ತಂತ್ರಜ್ಞಾನಗಳ ಮೂಲಕ ಕ್ರೈಸ್ತ ಆರಾಧನೆ ನಡೆಸುವುದರ ಕುರಿತು ಮಾತನಾಡುತ್ತಾ ಅವುಗಳ ಹಿಂದಿರುವ ಸಭಾಶಾಸ್ತ್ರ (ಎಕ್ಲೇಸಿಯಾಲಜಿ)ವನ್ನು ಗಂಭೀರವಾಗಿ ಪರಿಗಣಿಸಲು ಕರೆನೀಡುತ್ತಾರೆ. ಈ ರೀತಿಯ ಅನಿವಾರ್ಯ ಆರಾಧನಾ ವಿಧಾನಗಳು ಮತ್ತು ಪರ್ಯಾಯಗಳು ಸಭೆಯ ರಚನೆ ಮತ್ತು ಅಧಿಕಾರದ ಮೇಲೆಯೂ ಪ್ರಭಾವ ಬೀರುತ್ತವೆ ಎಂಬುದು ಅವರ ಒತ್ತು.

ಪ್ರೊತಸ್ತಾಂತ ಸಭೆಗಳಲ್ಲಿಯೂ ಈ ಕುರಿತು ಸಕ್ರಿಯ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಸಾಂಪ್ರದಾಯಿಕ ರೀತಿಯಲ್ಲಿ ಕರ್ತನ ಪವಿತ್ರ ಭೋಜನ ಸಂಸ್ಕಾರದಲ್ಲಿ ಭಾಗವಹಿಸುವುದು ಅಸಾಧ್ಯವಾಗಿರುವ ಈ ವಿಷಮ ಪರಿಸ್ಥಿತಿ ನಮ್ಮ ವಿಶ್ವಾಸಕ್ಕೆ ಬಂದಿರುವ ಅಪಾಯವಲ್ಲ ಎಂಬುದು ಹಲವು ಪ್ರೊತಸ್ತಾಂತ ದೈವಶಾಸ್ತ್ರಜ್ಞರ ಅಭಿಪ್ರಾಯ. ಲೂಥರನ್ ದೈವಶಾಸ್ತ್ರಜ್ಞೆ ಮತ್ತು ಕ್ಯಾನ್ಸರ್ ರೋಗದಿಂದ ಬದುಕುಳಿದ ಡಾ. ಡೆಯಾನ್ನಾ ಥಾಂಪ್ಸನ್ ರವರು ವರ್ಚುವಲ್ ಯೂಖರಿಸ್ಟನ್ನು ಬಹುವಾಗಿ ಪ್ರತಿಪಾದಿಸುತ್ತಾರೆ. ತನ್ನ ಕ್ಯಾನ್ಸರ್ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಗೆ ತನ್ನ ದಿಗ್ಭಂಧನದ (ಕ್ವಾರಂಟೈನ್) ದಿನಗಳಲ್ಲಿ ವರ್ಚುವಲ್ ಮಾಧ್ಯಮಗಳ ಮೂಲಕ ಕ್ರಿಸ್ತನ ದೇಹದೊಂದಿಗೆ ಪಾಲ್ತೆಗೆದುಕೊಳ್ಳಲು ಸಾಧ್ಯವಾಯಿತು ಎಂಬುದರ ಬಗ್ಗೆ ಅವರು ಮನಮುಟ್ಟುವಂತೆ ಮಾತನಾಡುತ್ತಾರೆ. ಇಂದಿನ ಸಮೂಹ ದಿಗ್ಬಂಧನದ ಸಂದರ್ಭಗಳು ನಾವು ಆತ್ಮದಲ್ಲಿಯೂ ದೇಹದಲ್ಲಿಯೂ ಒಂದಾಗಿ ಸೇರಿಬಂದು ದೇವರನ್ನು ಆರಾಧಿಸುವ ವಿವಿಧ ಪರ್ಯಾಯ ಮತ್ತು ಕ್ರಿಯಾತ್ಮಕ ಚಿಂತನೆಗಳಿಗೆ ನಮ್ಮನ್ನು ನಡೆಸುತ್ತವೆ. ಟಿವಿ/ಕಂಪ್ಯೂಟರ್ ಪರದೆಯ ಮೇಲೆ ನಮ್ಮ ಪಾದ್ರಿಗಳು ಕರ್ತನ ಪವಿತ್ರ ಭೋಜನದ ಪ್ರಾರ್ಥನಾ ವಿಧಿಗಳನ್ನು ನಡೆಸುವಾಗಲೂ ನಾವು ತೆಗೆದುಕೊಳ್ಳುವ ರೊಟ್ಟಿ ಮತ್ತು ದ್ರಾಕ್ಷಾರಸಗಳೆಂಬ ಉಡುಗೊರೆಗಳ ಮೂಲಕ ಕ್ರಿಸ್ತನು ನಮ್ಮಲ್ಲಿಗೆ ಆಗಮಿಸುತ್ತಾನೆ ಎಂಬುದು ಅವರ ಅಭಿಮತ. ಡೆಯಾನ್ನಾರವರು ವರ್ಚುವಲ್ ಮಾಧ್ಯಮವನ್ನು ಇಂದಿನ ವಿಷಮ ಪರಿಸ್ಥಿತಿಯಲ್ಲಿ ಒಂದು ಸೂಕ್ತ ಪರ್ಯಾಯ ಮಾಧ್ಯಮ ಎಂದು ಗುರುತಿಸಿದರೂ ಪಾದ್ರಿಕೇಂದ್ರಿತ ಯೂಖರಿಸ್ಟ್ ಆಚರಣೆಯನ್ನೇ ಪ್ರತಿಪಾದಿಸುತ್ತಾರೆ. 


ಈ ಅಭಿಮತಕ್ಕೆ ತುಸು ಭಿನ್ನವಾಗಿ ನಮ್ಮ ನೆಲದ ಹೆಸರಾಂತ ದೈವಶಾಸ್ತ್ರಜ್ಞ ಡಾ. ಓ. ವಿ. ಜತ್ತನ್ನರವರ ಬಹು ಅರ್ಥಗರ್ಭಿತ ದೈವಶಾಸ್ತ್ರೀಯ ಹೇಳಿಕೆಯನ್ನು ಇಲ್ಲಿ ಅವಧರಿಸುವುದು ಉಚಿತ. ಕ್ರೈಸ್ತ ಸಭಾಚರಿತ್ರಕಾರರೂ ವಿಶ್ರಾಂತ ಬಿಷಪರೂ ಆದ ಡಾ. ಸಿ. ಎಲ್. ಫುರ್ಟಾಡೋರವರೊಂದಿಗಿನ ತಮ್ಮ ಈ-ಮೇಲ್ ಸಂಭಾಷಣೆಯಲ್ಲಿ ಜತ್ತನ್ನರವರು ಹೀಗೆ ಅಭಿಪ್ರಾಯ ಪಡುತ್ತಾರೆ: "ಒಬ್ಬ "ದೀಕ್ಷಿತ" ಸಭಾಪಾಲಕರಿಲ್ಲದ ಪರಿಸ್ಥಿತಿಯಲ್ಲಿ ವಿಶ್ವಾಸಿಗಳು ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ಯೋಗ್ಯವಾಗಿ ಕೂಡಿಬಂದು ಸುವಾರ್ತೆಗಳಲ್ಲಿ ಕಂಡುಬರುವ ಕರ್ತನ ಪವಿತ್ರಭೋಜನದ ವಾಕ್ಯಗಳನ್ನು ಬಳಸಿ ಪವಿತ್ರ ಯೂಖರಿಸ್ಟನ್ನು ಆಚರಿಸುವುದರಲ್ಲಿ ಯಾವುದೇ ಗಂಭೀರ ಅಡ್ಡಿಯಿಲ್ಲ ಎಂದು ನಾನು ಬಾವಿಸುತ್ತೇನೆ." ತಮ್ಮ ಈ ಅಭಿಪ್ರಾಯವನ್ನು ಸವಿಸ್ತಾರವಾಗಿ ಆಳವಾದ ದೈವಶಾಸ್ತ್ರೀಯ ತಳಹದಿಯಲ್ಲಿ ಅವರು ಪ್ರತಿಪಾದಿಸುತ್ತಾರೆ.

ಈ ಮೇಲ್ಕಾಣಿಸಿದ ವಿವಿಧ ದೈವಶಾಸ್ತ್ರೀಯ ಚಿಂತನೆಗಳು ಮತ್ತು ಅಭಿಪ್ರಾಯಗಳು ಕೊರೋನಾದಂತಹ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕ್ರೈಸ್ತಸಭೆಗಳು ತಮ್ಮ ವಿಶ್ವಾಸವನ್ನು ಮತ್ತು ದೈವಶಾಸ್ತ್ರವನ್ನು ಮರುವ್ಯಾಖ್ಯಾನಿಸುವ ಸಕ್ರಿಯ ಮತ್ತು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಕ್ರೈಸ್ತವಿಶ್ವಾಸವು ಎಂದೋ ಯಾರೋ ಕಟ್ಟಿಟ್ಟ ಸ್ಥಾವರವಲ್ಲ; ಅದೊಂದು ನಿರಂತರ ಚಲನಾತ್ಮಕ ಪ್ರಕ್ರಿಯೆಯಲ್ಲಿರುವ ಜಂಗಮ ಎಂಬುದು ಸಭೆಯ ಅರಿವಿಗೆ ಬಂದಿರುವುದು ನಿಜಕ್ಕೂ ಶ್ಲಾಘನೀಯ.

ಇಂತಹ ಸಕ್ರಿಯ ಜಿಜ್ಞಾಸೆಗಳ ಮೂಲಕ ವಿಶ್ವಾಸದ ಚಲನಾತ್ಮಕ ಸ್ವರೂಪವನ್ನು ಕ್ರೈಸ್ತಸಭೆ ಮತ್ತೊಮ್ಮೆ ಜೀವಂತಗೊಳಿಸಿರುವುದು ಕ್ರೈಸ್ತತ್ವದ ನಿರಂತರತೆಗೆ ಒಂದು ಸಾಕ್ಷಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಜಿಜ್ಞಾಸೆಯಲ್ಲಿ ಕೆಲವು ಗಮನಾರ್ಹ ವಿಚಾರಗಳು  ಚರ್ಚಿಸಲ್ಪಡದೇ ಇರುವುದು ಆತಂಕಕಾರಿ. ಅದು ಕ್ರೈಸ್ತತ್ವದ ನಿರಂತರತೆಗೆ ಧಕ್ಕೆ ತರುವ ಅಪಾಯವನ್ನು ಹೊಂದಿದೆ. ಈ ದಿಶೆಯಲ್ಲಿ ಕೆಲವು ಗಮನಾರ್ಹ ವಿಚಾರಗಳನ್ನು ಇಲ್ಲಿ ಗಂಭೀರವಾಗಿ ಪರಿಗಣಿಸುವುದು ಅಗತ್ಯ:

೧. ಬಹುತೇಕ ಸಭಾಸಂಪ್ರದಾಯಗಳು  ವರ್ಚುವಲ್ ಮಾಧ್ಯಮವನ್ನು ಆಲಯದಲ್ಲಿ ನಡೆಯುವ "ಸಾರ್ವಜನಿಕ" ಆರಾಧನೆಗೆ ಒಂದು ಪರ್ಯಾಯ ಮಾಧ್ಯಮವಾಗಿ ಸೂಚಿಸಿರುವುದು ಸ್ಪಷ್ಟ. ವರ್ಚುವಲ್ ಮಾಧ್ಯಮ, ಅಂದರೆ ಟಿ.ವಿ., ಯೂಟ್ಯೂಬ್, ಜೂಮ್, ಸ್ಕೈಪ್ ಇತ್ಯಾದಿ ಮಾಧ್ಯಮಗಳ ಮೂಲಕ ಆರಾಧನೆ, ಮತ್ತು ಅದರಲ್ಲೂ ವಿಶೇಷವಾಗಿ, ಕರ್ತನ ಭೋಜನ ಸಂಸ್ಕಾರದ ಆಚರಣೆಯನ್ನು ನಡೆಸುವುದು ಇಂದಿನ ಪ್ರಸ್ತುತ ಕೊರೋನಾ ಸೋಂಕಿನ ಸಂದರ್ಭದಲ್ಲಿ ಒಂದು ಸಾಧ್ಯದ ಮಾಧ್ಯಮವೇನೋ ನಿಜ. ಆದರೆ ಈ ವರ್ಚುವಲ್ ಮಾಧ್ಯಮಗಳು ಇಂದು ದುರಾದೃಷ್ಟವಶಾತ್ ವ್ಯಾಪಾರೀಕರಣಗೊಂಡಿರುವುದನ್ನೂ ನಾವು ಅಲ್ಲಗಳೆಯುವಂತಿಲ್ಲ. "ಕ್ರೈಸ್ತ" ಎಂದು ಹೇಳಿಕೊಳ್ಳುವ ಎಷ್ಟೋ ಟಿ.ವಿ. ಚಾನಲ್ ಗಳು, ಯೂಟ್ಯೂಬ್ ಚಾನಲ್ ಗಳು ಇಂದು ಯಾವ ಕ್ರೈಸ್ತ ನೈತಿಕ ಮೌಲ್ಯಗಳನ್ನೂ ಪಾಲಿಸದೇ ಕೇವಲ ಲಾಭವೆಸಗುವ ವ್ಯಾಪಾರದ ಉದ್ದೇಶವೊಂದನ್ನೇ ಹೊಂದಿರುವುದು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ನಮ್ಮ ಈ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಇಂತಹ ವರ್ಚುವಲ್ ವ್ಯಾಪಾರೀಕರಣವನ್ನು ಪ್ರೋತ್ಸಾಹಿಸುವ ವ್ಯವಸ್ಥೆಯಾಗದಂತೆ ಎಚ್ಚರವಹಿಸುವುದು ಕ್ರೈಸ್ತರ ಮುಂದಿರುವ ದೊಡ್ಡ ಸವಾಲು. ಅಂತೆಯೇ ಕ್ರೈಸ್ತ ಪಂಗಡಗಳ ನಡುವೆ ಮತ್ತು ಬೋಧಕರ ನಡುವೆ ಒಂದು ಅನಾರೋಗ್ಯಕರ ಪೈಪೋಟಿಯನ್ನು ಕೂಡಾ ಈ ಪರ್ಯಾಯ ಮಾಧ್ಯಮ ಹುಟ್ಟುಹಾಕಿದಂತಿದೆ. ಇದು ಕ್ರೈಸ್ತ ಚೈತನ್ಯಕ್ಕೆ ಮಸಿ ಎರಚುವ ಬೆಳವಣಿಗೆ ಎಂಬುದನ್ನು ಗಮನಿಸಿ ಕ್ರೈಸ್ತ ಸಭೆ ಇದನ್ನು ಎಚ್ಚರದಿಂದ ಎದುರಿಸುವುದು ತೀರಾ ಅಗತ್ಯ.

೨. ಹಲವು ಕ್ರೈಸ್ತ ಪಂಗಡಗಳು ವರ್ಚುವಲ್ ಮಾಧ್ಯಮವನ್ನು ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಒಂದು ಪರ್ಯಾಯ ಸಾಧ್ಯತೆ ಎಂದು ಪರಿಗಣಿಸಿದರೂ ಇದು ಕ್ರೈಸ್ತ ಆರಾಧನೆ ಮತ್ತು ಕರ್ತನ ಪವಿತ್ರಭೋಜನ ಸಂಸ್ಕಾರವನ್ನು ಪುರೋಹಿತಶಾಹಿತ್ವದ ಬಂಧನದಿಂದ ಹೊರತರುವ ಒಂದು ಉತ್ತಮ ಅವಕಾಶ ಎಂದು ಪರಿಗಣಿಸಿದಂತೆ ಕಾಣುವುದಿಲ್ಲ. ವರ್ಚುವಲ್ ಸಭೆಯ ಪರಿಕಲ್ಪನೆ (ವರ್ಚುವಲ್ ಚರ್ಚ್/ಸೈಬರ್ ಚರ್ಚ್) ಪ್ರಜಾಪ್ರಭುತ್ವ ಮತ್ತು ಕ್ರಿಯಾಶೀಲತೆಯ ಬುನಾಧಿಯ ಮೇಲೆ ನಿಂತಿದೆ. ಆದರೆ ಇಂದು ದುರಾದೃಷ್ಟವಶಾತ್ ಇಂತಹ ವಲಯವನ್ನೂ ಪುರೋಹಿತಶಾಹಿತ್ವ/ಪಾದ್ರಿಶಾಹಿತ್ವ/ಬೋಧಕಶಾಹಿತ್ವದ ವರ್ತುಲದೊಳಗೆ ತರುವ ಯತ್ನಗಳು ನಡೆಯುತ್ತಿವೆ. ಟಿ.ವಿ. ಪರದೆಯಲ್ಲಿ ಕೂಡಾ ರೊಟ್ಟಿ-ದ್ರಾಕ್ಷಾರಸಗಳು ಪಾದ್ರಿಯಿಂದ ಆಶೀರ್ವದಿಸಲ್ಪಟ್ಟರೆ ಮಾತ್ರ ನಮ್ಮ ಮನೆಯೊಳಗೆ ನಾವು ಸೇವಿಸುವ ರೊಟ್ಟಿ-ದ್ರಾಕ್ಷಾರಸಗಳಲ್ಲಿ ಕ್ರಿಸ್ತನ ಪ್ರವೇಶವಾಗುವುದು ಎಂಬ ಅಭಿಪ್ರಾಯಗಳಿಂದ ಹಲವರಿಗೆ ಮುಕ್ತಿ ಸಿಗದಿರುವುದು ವಿಪರ್ಯಾಸ. ಮತ್ತೊಂದೆಡೆ, ಸಾಮಾಜಿಕ ಅಂತರ ಮತ್ತು  ಕ್ವಾರಂಟೈನ್ ನ ಕಠಿಣ ದಿವಸಗಳಲ್ಲಿ ಜನರು ಆತಂಕದಲ್ಲಿರುವಾಗ ಟಿ.ವಿ. ಪ್ರಸಂಗಿಗಳು, ಟೆಲಿ-ಇವ್ಯಾಂಜಲಿಸ್ಟುಗಳು, ಯೂಟ್ಯೂಬ್ ಪಾದ್ರಿಗಳು ಜನರ ಆತಂಕವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಶೋಚನೀಯ. ಇದುವರೆಗೆ ಪ್ರಸಂಗ ಪೀಠದಿಂದ, ಮೆಗಾ ರಿವೈವಲ್ ಸ್ಟೇಜುಗಳಿಂದ ಜನರನ್ನು ಕಾಡುತ್ತಿದ್ದ ಈ ವರ್ಚುವಲ್ ವ್ಯಾಪಾರಿಗಳು ಇದೀಗ ನಮ್ಮ ಬೆಡ್ ರೂಮು, ಕಿಚನ್ನುಗಳನ್ನೂ ಅತಿಕ್ರಮಿಸುವುದರಲ್ಲಿ ನಾಮುಂದು ತಾಮುಂದು ಎಂದು ಪೈಪೋಟಿಗೆ ಇಳಿದಿರುವುದು ತೀರಾ ಅಪಾಯಕಾರಿ. ಇದರಿಂದ ರೋಸಿಹೋದ ಹಿರಿಯ ಮಿತ್ರರೊಬ್ಬರು ಇತ್ತೀಚೆಗೆ ಹೇಳಿದ ಮಾತು ನೆನಪಾಗುತ್ತಿದೆ: "ಕೊರೋನಾ ವೈರಸಿನ ಹಾವಳಿಗಿಂತಲೂ ಸುವಾರ್ತೆಯ ವರ್ಚುವಲ್ ವ್ಯಾಪಾರಿಗಳ ಹಾವಳಿ ಇದೀಗ ಜಾಸ್ತಿಯಾಗಿದೆ." ಇಂಥ ಸೂಕ್ಷ್ಮಾತಿಸೂಕ್ಷ್ಮಗಳನ್ನೂ ಗಂಭೀರವಾಗಿ ಪರಿಗಣಿಸುವುದು ನಮ್ಮ ವಿಶ್ವಾಸದ ಸಂದಿಗ್ಧ ಹೋರಾಟವಾಗಬೇಕಿದೆ. 

೩. ಕೊರೋನಾದ ಸಂದರ್ಭದಲ್ಲಿ ಕಮ್ಯೂನಿಯನ್ ನ ಕುರಿತು ನಡೆಯುತ್ತಿರುವ ಬಹುತೇಕ ಚರ್ಚೆಗಳು ಯೇಸು ತನ್ನ ಶಿಷ್ಯರೊಂದಿಗೆ ಮಾಡಿದ ಕಡೇ ಭೋಜನವನ್ನು ಒಂದು ಸಾಂಪ್ರದಾಯಿಕ ಮತ್ತು ಧಾರ್ಮಿಕ ಸಂಸ್ಕಾರವಾಗಿ ಗುರುತಿಸುತ್ತಿವೆಯೇ ಹೊರತು, ಅದರ ಆಳದಲ್ಲಿರುವ ಯೇಸುವಿನ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ಮುಖವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. "ನನ್ನನ್ನು ನೆನಪಿಸಿಕೊಳ್ಳುವುದಕ್ಕೆ ಹೀಗೆ ಮಾಡಿರಿ" ಎಂಬ ಸುವಾರ್ತೆಗಳಲ್ಲಿನ ಯೇಸುವಿನ ಮಾತುಗಳು ಒಂದು ಪರ್ಯಾಯ ಜೀವನ ಮೌಲ್ಯಕ್ಕೆ ಕರೆನೀಡುವ ಮಾತುಗಳು. ಯೇಸುವಿನ ದೇಹದ ಮುರಿಯಲ್ಪಡುವಿಕೆ ಮತ್ತು ರಕ್ತದ ಹುಯ್ಯಲ್ಪಡುವಿಕೆ ಯೇಸು ಎದುರಿಸಿದ ಅಮಾನವೀಯ ಶ್ರಮೆ, ಅನ್ಯಾಯ, ಅಧರ್ಮದ ರಾಜಕಾರಣವನ್ನು ನಮಗೆ ನೆನಪಿಸುವುದು ಅಗತ್ಯ. ಕರ್ತನ ಭೋಜನದಲ್ಲಿ ಪಾಲ್ತೆಗೆದುಕೊಳ್ಳುವುದು ಎಂದರೆ ಯೇಸುವಿನ ನ್ಯಾಯಪರ ಹೋರಾಟದಲ್ಲಿ ಸತ್ಯ-ಧರ್ಮದ ಪರ ನಿಂತು ಯೇಸುವಿನಂತಹ ಶ್ರಮೆಯನ್ನು ಅನುಭವಿಸಲು ಸಿದ್ಧರಾಗುವುದು ಎಂದರ್ಥ. ಕೋವಿಡ್-೧೯ ಎಂಬ ಸೋಂಕು ಇಂದು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಅನ್ಯಾಯ, ಅಧರ್ಮ, ಅಸತ್ಯಗಳೆಂಬ ಹಲವು ರೋಗಗಳನ್ನು ನಮ್ಮ ಮುಂದೆ ಬಿಚ್ಚಿಟ್ಟಿದೆ. ಒಂದೆಡೆ ಉಳ್ಳವರು ಸ್ಯಾನಿಟೈಸರ್ ನಲ್ಲಿ ದಿನಕ್ಕೆ ಹತ್ತು ಬಾರಿ ಕೈತೊಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಸ್ಲಮ್-ನಿವಾಸಿಗಳು, ವಲಸಿತ ಸಮುದಾಯಗಳು, ಕಾರ್ಮಿಕರು, ದಲಿತರು - ಇಂತಹ ಹಲವು ಬಡವರ್ಗದ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲೂ ನೀರಿಲ್ಲದೆ, ಸೂರಿಲ್ಲದೆ ಅಲೆದಾಡುತ್ತಿರುವ ಚಿತ್ರಣಗಳು ನಮ್ಮ ಸಮಾಜ ಅದೆಷ್ಟು ರೋಗಗ್ರಸ್ತ ಎಂಬುದನ್ನು ಸಾರಿ ಹೇಳುತ್ತಿವೆ. ಇನ್ನೊಂದೆಡೆ ಕೊರೋನಾ ವೈರಾಣುವಿನ ಹೆಸರಿನಲ್ಲಿ ಕೋಮುವಾದದ ರಾಜಕಾರಣಗಳು ಬೆಳೆಯುತ್ತಿದ್ದು ಒಂದು ಕೋಮುವನ್ನೇ, ಜನಾಂಗವನ್ನೇ ಪೈಶಾಚೀಕರಣಗೊಳಿಸುತ್ತಿದೆ. ಇಂಥ ಅನ್ಯಾಯದ ವೈರಾಣುವಿನ ಆರ್ಭಟದ ನಡುವೆ ನ್ಯಾಯಮೂರ್ತಿಯಾದ ಕ್ರಿಸ್ತನ ದೇಹ-ರಕ್ತಗಳಲ್ಲಿ ಪಾಲ್ತೆಗೆದುಕೊಳ್ಳುವುದು ಎಂದರೇನು? ಈ ಕುರಿತ ಜಿಜ್ಞಾಸೆಗಳು ಇಂದು ನಮ್ಮ ಕ್ರೈಸ್ತ ಮನೆಗಳಲ್ಲಿ ಮನಸ್ಸುಗಳಲ್ಲಿ ಆಗಬೇಕಿದೆ. ಕರ್ತನ ಭೋಜನವನ್ನು ಕೇವಲ ಒಂದು ಧಾರ್ಮಿಕ ಸಂಸ್ಕಾರವನ್ನಾಗಿ ಗುರುತಿಸದೆ ಅದೊಂದು ಜೀವನ ಮೌಲ್ಯ  ಎಂಬ ಅರಿವು ನಮ್ಮದಾಗಬೇಕು. ಹಾಗಾದಾಗ ಅದು ಟಿ.ವಿ. ಪರದೆಯ ಮೇಲೆ ನಡೆಯುತ್ತದೆಯೋ ಅಥವಾ ನಮ್ಮ ಅಡುಗೆ ಕೋಣೆಯಲ್ಲಿ ನಡೆಯುತ್ತದೆಯೋ, "ದೀಕ್ಷಿತ" ಪಾದ್ರಿಯೇ ಅದನ್ನು ನಡೆಸಬೇಕೋ ಅಥವಾ ನಮ್ಮ ಮಕ್ಕಳು ನಡೆಸಿದರೂ ಆದೀತೋ ಎಂಬೀ ಪ್ರಶ್ನೆಗಳು ಅನಗತ್ಯ, ಅರ್ಥಹೀನ ಮತ್ತು ಅಸಂಬದ್ಧ ಅನ್ನಿಸವೇ? 

ಕೊನೆಯದಾಗಿ, ಒಂದು ಉದಾಹರಣೆ: 

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಸ್ಟರ್ ಬಾನುವಾರದಂದು ಅಮೇರಿಕಾ ದೇಶ ಸಂಪೂರ್ಣವಾಗಿ ತೆರೆಯಲ್ಪಡುತ್ತದೆ ಎಂಬ ವಿವಾಧಾತ್ಮಕ ಹೇಳಿಕೆಯನ್ನು ನೀಡಿದಾಗ ಅದನ್ನು ಪ್ರತಿರೋಧಿಸಿದ ಮೆನನೈಟ್ ಸಭೆಯ ಸಭಾಪಾಲಕಿ ಮೆಲೀಸಾ ಫ್ಲೋರರ್-ಬಿಕ್ಸ್ಲರ್, "ನಾನು ಡೊನಾಲ್ಡ್ ಟ್ರಂಪ್ ಗೆ ಖಚಿತ ಪಡಿಸುತ್ತೇನೆ, ನನ್ನ ಸಭೆ ಈಸ್ಟರ್ ಬಾನುವಾರದಂದು ಸೇರಿಬರುವುದಿಲ್ಲ. ಹಾಗೆ ಮಾಡಿ ಕೊರೋನಾ ವೈರಾಣುವನ್ನು ಪಸರಿಸುವಂತೆ ಮಾಡುವುದು ನನ್ನ ಕ್ರೈಸ್ತ ವಿಶ್ವಾಸಕ್ಕೆ ನಾನು ಮಾಡುವ ದ್ರೋಹ, ಮತ್ತು ನಮ್ಮ ಸಾಮುದಾಯಿಕ ಆರಾಧನೆಗೆ ನಾವು ಎಸಗುವ ಮೋಸ. ಕ್ರೈಸ್ತ ಆರಾಧನೆ ಇಂತಹ ಮರಣದ ಸಂಸ್ಕೃತಿಯನ್ನುಎತ್ತಿಹಿಡಿದರೆ, ಕ್ರಿಸ್ತನ ದೇಹವಾದ ನಂಬಿಕೆಯ ಸಮುದಾಯದ ಜೀವವನ್ನು ಲೆಕ್ಕಿಸದಿದ್ದರೆ, ಅದನ್ನು ಪಣಕ್ಕಿಟ್ಟರೆ, ಅಂತಹ ಸಭೆಯ ನಾಯಕರು ದೇವರ ನ್ಯಾಯತೀರ್ವಿಕೆಗೆ ಗುರಿಯಾಗುತ್ತಾರೆ" ಎಂಬ ಕಠಿಣ, ಆದರೆ ಪ್ರವಾದನೀಯ, ಮಾತುಗಳನ್ನಾಡಿದರು. ಕೋವಿಡ್-೧೯ ಸೋಂಕನ್ನು ತಡೆಗಟ್ಟುವಲ್ಲಿ ಸಭೆ ಇಂದು ಇಂತಹ ಜಾಣ್ಮೆಯ ಮತ್ತು ಅಷ್ಟೇ ಎದೆಗಾರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ನಮ್ಮ ಒಂದು ಕ್ಷಣದ ಬುದ್ಧಿಗೇಡಿ ನಿರ್ಧಾರ ಮತ್ತು ಅವಿವೇಕದ ಸ್ಪರ್ಶ ಕ್ರಿಸ್ತನ ದೇಹದ ಅಂಗವಾದ ನಮ್ಮ ನೆರೆಯವನಿ/ಳಿಗೆ ಮಾರಣಾಂತಕವಾದೀತು. ನಮ್ಮ ಸಂಪ್ರದಾಯ, ಆಚರಣೆ, ವ್ರತಗಳಿಗಿಂತಲೂ ಹೆಚ್ಚಿನದು ನಮ್ಮ ನೆರೆಯವನ/ಳ ಜೀವ ಮತ್ತು ನ್ಯಾಯಬದ್ಧ ಸಮಾಜ. ಕೊರೋನಾದ ವಿಷಮ ಸನ್ನಿವೇಶದಲ್ಲಿ  ನಾವು ಕಂಡುಕೊಳ್ಳುವ ಯಾವ ಪರ್ಯಾಯಗಳೂ ನಮ್ಮ ನೆರೆಯವರ ಪ್ರಾಣಕ್ಕೆ ಕಂಟಕವಾಗಬಾರದು. ಅಂತೆಯೇ ನಮ್ಮ ವಿಶ್ವಾಸವನ್ನು ಒಂದೆಡೆ ವರ್ಚುವಲ್ ಲೋಕದ ಸರಕ(ಕೊಮೊಡಿಟಿ)ನ್ನಾಗಿಸದೆ, ಮತ್ತೊಂದೆಡೆ ಪುರೋಹಿತಶಾಹಿತ್ವದ ಪಂಜರದಲ್ಲಿ ಕಟ್ಟಿಹಾಕದೆ ಸದಾ ಚಲನಾಶೀಲ ಶಕ್ತಿಯನ್ನಾಗಿಸಬೇಕಾದುದು ನಮ್ಮೆಲ್ಲರ ಕ್ರೈಸ್ತ ನಿಯೋಗ. ಇದು ಕೊರೋನಾದ ವಿರುದ್ಧದ ಹೋರಾಟ ಮಾತ್ರವಲ್ಲ, ಕ್ರಿಸ್ತನ ಪರ ಹೋರಾಟವೂ ಹೌದು.


____________________

References:

http://anglican.ink/2020/03/31/the-church-without-the-eucharist-is-not-the-church-interview-with-john-zizioulas/

https://publicorthodoxy.org/2020/03/28/an-orthodox-ethos-of-solidarity-against-covid-19/

https://www.sbs.com.au/language/english/audio/bartholomew-what-is-at-stake-is-not-our-faith-it-is-the-faithful

https://publicorthodoxy.org/2020/03/17/fasting-from-communion-in-a-pandemic

https://wp.stolaf.edu/lutherancenter/2020/03/christ-is-really-present-virtually-a-proposal-for-virtual-communion/

https://sojo.net/articles/i-refuse-participate-worship-leads-devastation

https://www.ncronline.org/news/parish/church-after-coronavirus-crisis-exposes-what-essential

Email Conversation between Rt. Rev. Dr. C. L. Furtado and Rev. Dr. O. V. Jathanna, dated 1 April 2020.