Wednesday, August 9, 2017

"Challenging Beelzebul(s)"

ಲೂಕ 11:14-26

ಬೆಲ್ಜೆಬೂಲ ಅಂದ್ರೆ ಯಾರು? "ಸೊಲೊಮೋನನ ಒಡಂಬಡಿಕೆ" ಎಂಬ ಹಳೆಒಡಂಬಡಿಕೆಯ ಪ್ಸ್ಯುಡೋಬರಹಗಳಲ್ಲಿ ಬೆಲ್ಜೆಬೂಲನನ್ನು ಫಿಲಿಷ್ಟಿಯರು ಆರಾಧಿಸುತ್ತಿದ್ದ ಒಂದು ಶಕ್ತಿ ಎಂದು ಗುರುತಿಸಲಾಗಿದೆ. ಈ ಶಕ್ತಿ ಜನರ ನಡುವೆ ಒಡಕುಗಳನ್ನು ಉಂಟುಮಾಡುತ್ತಿತ್ತು, ಪಟ್ಟಣಗಳಲ್ಲಿ ಕಲಹಗಳಿಗೆ, ಕಾದಾಟಗಳಿಗೆ ಕಾರಣವಾಗಿತ್ತು, ಕೊಲೆ, ರಕ್ತಪಾತ ಮತ್ತು ಯುದ್ಧದಂತಹ ಧಮನಕಾರೀ ವರ್ತನೆಗೂ ಇದು ಕಾರಣವಾಗಿತ್ತು, ಎಂಬ ವಿವರಣೆಯೂ ಈ ಬರಹದಲ್ಲಿದೆ. ಕ್ರೈಸ್ತ ಪರಂಪರೆಯಲ್ಲಿಯೂ ಬೆಲ್ಜೆಬೂಲನ ಕುರಿತು ವ್ಯಾಪಕ ಅಧ್ಯಯನಗಳು ನಡೆದಿವೆ. ದೆವ್ವಗಳ ಒಡೆಯ, ಕೆಡುಕಿನ ಶಕ್ತಿಯ ಮೂಲ, ಪೈಶಾಚಿಕಶಕ್ತಿ, ಸೈತಾನ ಎಂದೆಲ್ಲಾ ಈತನನ್ನು ವರ್ಣಿಸಲಾಗಿದೆ. ಇತ್ತೀಚಿನ ವಸಾಹತೋತ್ತರ ದೃಷ್ಟಿಕೋನದಲ್ಲಿಯೂ ಬೆಲ್ಜೆಬೂಲನನ್ನು ವ್ಯಾಖ್ಯಾನಿಸುವ ಯತ್ನಗಳು ನಡೆದಿವೆ. ಸುಗೀರ್ತರಾಜಾ ತನ್ನ ಬೈಬಲ್ ಮತ್ತು ಸಾಮ್ರಾಜ್ಯ ಎಂಬ ಪುಸ್ತಕದಲ್ಲಿ ಬೆಲ್ಜೆಬೂಲನನ್ನು ರೋಮ್ ಸಾಮ್ರಾಜ್ಯಕ್ಕೆ ಸಮೀಕರಿಸಿರುವುದು ಗಮನಾರ್ಹ. ಸುಗೀರ್ತರಾಜಾ ಅವರ ಪ್ರಕಾರ ರೋಮ್ ಸಾಮ್ರಾಜ್ಯವು ಜನಸಾಮಾನ್ಯರತ್ತ ತನ್ನ ಧಮನಕಾರೀ ಧೋರಣೆಯ ಮೂಲಕ ಪೈಶಾಚಿಕವಾಗಿ ವರ್ತಿಸುತ್ತಿತ್ತು. ಅವರನ್ನು ಧ್ವನಿಹೀನರನ್ನಾಗಿ, ಅಂದರೆ ಮೂಕರನ್ನಾಗಿಸಿತ್ತು. ಯೇಸು ಅಂತಹ ಶಕ್ತಿಗಳ ವಿರುದ್ಧ ಹೋರಾಡುತ್ತಾ, ಮೂಕರು ಮಾತನಾಡುವಂತೆ ಮಾಡುವ ಮೂಲಕ ದೇವರ ಶಕ್ತಿಯನ್ನು ಬೆಲ್ಜೆಬೂಲನ ಶಕ್ತಿಗೆ ಪ್ರತಿಶಕ್ತಿಯಾಗಿ ಮತ್ತು ಪರ್ಯಾಯಶಕ್ತಿಯಾಗಿ ಬಳಸಿದ. ಈ ವಾದ ನಮ್ಮ ಭಾರತೀಯ ಸನ್ನಿವೇಶಕ್ಕೆ ಹೆಚ್ಚು ಅರ್ಥಗರ್ಭಿತ ವ್ಯಾಖ್ಯಾನ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ವಾಖ್ಯಪರಿಚ್ಚೇದವನ್ನು ಅರ್ಥವಿಸುವ ಯತ್ನ ಮಾಡೋಣ.

ವಚನ 14ರಲ್ಲಿ “ಯೇಸು ಮೂಕದೆವ್ವವನ್ನು ಬಿಡಿಸುತ್ತಿದ್ದನು, ಮತ್ತು ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತಾಡಿದನು” ಅಂತ ಲೂಕ ಹೇಳ್ತಾನೆ. ಮೂಕನು ಮಾತನಾಡಿದಾಗ ಯೇಸುವಿನ ಅಧಿಕಾರ ಪ್ರಶ್ನಿಸಲ್ಪಡುತ್ತದೆ. ಯೇಸುವು ಬೆಲ್ಜೆಬೂಲನ ಸಹಾಯದಿಂದ ಮೂಕನು ಮಾತನಾಡುವಂತೆ ಮಾಡಿದ ಎಂಬ ಆರೋಪ ಯೇಸುವಿನ ಮೇಲೆ ಹೊರಸಿಲಾಗುತ್ತದೆ. ಯೇಸು ತನ್ನ ಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಾನೆ. ಹಾಗೆ ಸಮರ್ಥಿಸುತ್ತಾ, ಕೆಡುಕಿಗೆ ಕಾರಣನಾದ ಬೆಲ್ಜಬೂಲ ಕೆಡುಕಿನ ಶಕ್ತಿಗೆ ಬಲಿಯಾಗಿ ಧ್ವನಿಹೀನನಾಗಿದ್ದ ವ್ಯಕ್ತಿಗೆ ಧ್ವನಿನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸ್ತಾನೆ. ವಚನ 21ರಲ್ಲಿ ಯೇಸು ಬಳಸುವ “ಬಲಿಷ್ಠನು” ಎಂಬ ಪದ ಸಾಂಕೇತಿಕವಾಗಿಯೂ ರೂಪಕವಾಗಿಯೂ ಗುರುತಿಸಲ್ಪಡಬೇಕಾದುದು ಅಗತ್ಯ. “ಒಬ್ಬ ಬಲಿಷ್ಠನು ಸರ್ವಾಯುಧವನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ...” ಎಂಬ ಮಾತು ಇಲ್ಲಿ ವಿಶೇಷ. ಇಲ್ಲಿ ತನ್ನ ಮನೆಯನ್ನು ಎಂಬ ಪದಕ್ಕೆ ಹೌಸ್‍ಹೋಲ್ಢ್ ಎಂಬ ಭಾಷಾಂತರವಿದೆ. ರೋಮ್ ಸಾಮ್ರಾಜ್ಯದಲ್ಲಿ ಹಾಗೂ ಹೆರೋದಿಯನರಲ್ಲಿ ಹೌಸ್‍ಹೋಲ್ಡ್ ಎಂದರೆ ಕೇಲವ ಒಂದು ಕುಟುಂಬ ಅಥವಾ ಒಬ್ಬನ ಮನೆ ಎಂದು ಅರ್ಥವಲ್ಲ; ಬದಲು ಅದು ಸಾಮ್ರಾಜ್ಯವನ್ನು ಸೂಚಿಸುತ್ತದೆ. ಆ ಸಾಮ್ರಾಜ್ಯಗಳು ಪರಸ್ಪರ ಘರ್ಷಿಸಿ ಒಡೆಯುವುದನ್ನೂ ಮತ್ತು ಕಡೆಯಲ್ಲಿ ಹಲವು ಸಾಮ್ರಾಜ್ಯಗಳು ಕಪಟ ಮೈತ್ರಿಯಿಂದ ಒಂದಾಗಿ ಅಂತ್ಯಸ್ಥಿತಿಯು ತೀರಾ ಹಾಳಾಗುವುದನ್ನೂ ಲೂಕ ಯೇಸುವಿನ ಮಾತಿನಲ್ಲಿ ಮಾರ್ಮಿಕವಾಗಿ ತಿಳಿಸುತ್ತಾನೆ. ಇಲ್ಲಿರುವ ಸಂಘರ್ಷ ದೈವೀಶಕ್ತಿ ಮತ್ತು ಕೆಡುಕಿನ ಶಕ್ತಿಗಳ ನಡುವೆ.

ಭಾರತದ ವಸಾಹತುಷಾಹೀ ಸಂದರ್ಭದಲ್ಲಿ ಹಲವು ವಸಾಹತುಗಳು ತಮ್ಮೊಳಗೆ ಘರ್ಷಣೆಗಳನ್ನು ಹೊಂದಿದ್ದು, ಆದರೆ ಕಡೆಯಲ್ಲಿ ಭಾರತವನ್ನು ವಸಾಹತುಗೊಳಿಸುವಲ್ಲಿ ಕಪಟಮೈತ್ರಿ ಮಾಡಿಕೊಂಡಿದ್ದು ಚರಿತ್ರೆಯಲ್ಲಿ ಸ್ಪಷ್ಟ. ಈ ಘರ್ಷಣೆಯಲ್ಲಿ ಜನಸಾಮಾನ್ಯ ಭಾರತೀಯ ಧ್ವನಿಹೀನನಾಗಿ ಮೂಕನಾಗಿಸಲ್ಪಟ್ಟಿದ್ದೂ ಚರಿತ್ರೆಯ ಪುಟಗಳಲ್ಲಿ ಸಾಕ್ಷ್ಯ. ಯೇಸು ಇಲ್ಲಿ ಮೂಕನನ್ನು ಮಾತನಾಡುವಂತೆ ಮಾಡಿದ ಕ್ರಿಯೆ ಅತ್ಯಂತ ಕ್ರಾಂತಿಕಾರೀ ಹಾಗೂ ಅದೊಂದು ಸ್ವಾತಂತ್ರ್ಯದ ಪಯಣಕ್ಕೆ ನಾಂದಿ ಹಾಡಿದ ಕ್ರಿಯೆ.

ಇಂದು ನಮ್ಮ ನಾಡಿನಲ್ಲಿ ಬಲಹೀನರನ್ನು ಮೂಕದೆವ್ವಗಳು ಆಕ್ರಮಿಸುವ ಎಷ್ಟೋ ಯತ್ನಗಳು ನಡೆಯುತ್ತಿವೆ. ಮೋದಿಯ ಮೋಡಿಯ ಮಾತುಗಳಿಗೆ ಮರುಳಾಗಿ ಜೈಜೈಕಾರ ಹಾಕುವ ಹಿಂದುತ್ವವಾದಿಗಳು ಅಲ್ಪಸಂಖ್ಯಾತರ ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಅವರನ್ನು ಮೂಕರನ್ನಾಗಿಸುತ್ತಿರುವುದು ಜಗಜ್ಜಾಹಿರ. ಮೋದಿಯ ಸಾಮ್ರಾಜ್ಯದಲ್ಲಿ ಮಾತನಾಡುವ ಸ್ವಾತಂತ್ರ್ಯ ಪಡೆದಿರುವವರು ಮೂಲಭೂತವಾದೀ ಪೆಡಂಭೂತಗಳು ಮಾತ್ರ. ಸಾಧ್ವಿ ಸರಸ್ವತಿ, ತೊಗಾಡಿಯಾ, ಮೊತಾಲಿಕ್ - ಹೀಗೆ ಕೆಲವು ಬೆಲ್ಜೆಬೂಲನ ಶಕ್ತಿಗಳು. ಇಲ್ಲಿ ಅಧಿಕಾರಷಾಹಿಗಳ ಕಪಟ ಮೈತ್ರಿ ಕೂಡಾ ನಡೆಯುತ್ತದೆ. ಆರ್.ಎಸ್.ಎಸ್., ಸಂಘ ಪರಿವಾರ, ಬಜರಂಗದಳ ಇಂಥಹ ಸಂಘಟನೆಗಳೊಟ್ಟಿಗೆ ಹಲವು ಮಠಮಾನ್ಯಗಳೂ, ರಾಜಕೀಯ ಪಕ್ಷಗಳೂ ಮೈತ್ರಿಮಾಡಿಕೊಂಡು ಅಲ್ಪಸಂಖ್ಯಾತರ ಮತ್ತು ಸೆಕ್ಯುಲರಿಸ್ಟ್‍ಗಳ ವಿರುದ್ಧ ಸಮರವನ್ನೇ ಸಾಧಿಸಿವೆ. ಧಾರ್ಮಿಕ ಅಲ್ಪಸಂಖ್ಯಾತರು ಧ್ವನಿಯೇ ಕಳಕೊಂಡು ಮೂಕರಾಗಿದ್ದಾರೆ.

ಮೂಕನು ಮಾತನಾಡುವಂತೆ ಮಾಡುವ ಯೇಸುವಿನ ಬಿಡುಗಡೆಯ ಕಾರ್ಯ ಇಂದು ಕ್ರೈಸ್ತ ಸಭೆಯ ಮುಂದಿರುವ ಬಹುದೊಡ್ಡ ಸವಾಲು. ಕ್ರೈಸ್ತ ಮನಸ್ಸುಗಳು ಬೆಲ್ಜಬೂಲನ ಮೂಲಭೂತವಾದೀ ಹಿಡಿತದಿಂದ ಹೊರಬಂದು ಮಾತನಾಡಬಲ್ಲವೇ? ಅಥವಾ ಆತನ ಸಾಮ್ರಾಜ್ಯಕ್ಕೆ ಮಣಿದು ತಮ್ಮ ಅಸ್ಥಿತ್ವವನ್ನು ಕಳಕೊಳ್ಳುತ್ತವೆಯೇ? ಘರ್ ವಾಪಸಿ ಚರ್ಚೆಯನ್ನು ಈ ಹಿನ್ನೆಲೆಯಲ್ಲಿ ಪ್ರಶ್ನಿಸುವುದೂ ಅಗತ್ಯ. “ಆ ದೆವ್ವವು ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು.” ದೆವ್ವವನ್ನು ಬಿಡಿಸಲು ಯೇಸು ಅವಲಂಬಿಸಿದ್ದ ದೈವೀಶಕ್ತಿಗೆ ಸಾಮಥ್ರ್ಯವಿದೆ. ಆದರೆ ಮಾತನಾಡುವ ಜವಾಬ್ಧಾರಿ ಬಿಡುಗಡೆ ಹೊಂದಿದ ನಮ್ಮ ಮುಂದಿದೆ. ಬಿಡುಗಡೆ ಹೊಂದಿದ ಸಮುದಾಯ, ರಕ್ಷಿಸಲ್ಪಟ್ಟ ದೇವಪ್ರಜೆ ಎಂದೆಲ್ಲಾ ಕರೆದುಕೊಳ್ಳುವ ನಾವು ಇನ್ನೂ ಮೂಕಾವಸ್ಥೆಯಲ್ಲಿಯೇ ಇರುವುದಾದರೆ, ನಮ್ಮ ಕ್ರೈಸ್ತ ಸಾಕ್ಷಿಯಲ್ಲಿ ಏನೋ ಕೊರತೆ ಇದೆ ಎಂದರ್ಥ. ಇತ್ತೀಚೆಗೆ ಆರ್.ಎಸ್.ಎಸ್. ಮುಖಂಡ ಮೋಹನ್ ಭಾಗವತ್ ಮಾತೆ ತೆರೇಸಾರ ವಿರುದ್ಧ ಮತಾಂತರದ ಆರೋಪಹಾಕಿ ಕ್ರೈಸ್ತ ಸೇವೆಯ ಸಾಕ್ಷಿಗೇ ಸವಾಲನ್ನು ಒಡ್ಡಿದ. ಕಳೆದ ಭಾನುವಾರ ಮಂಗಳೂರಿನ ಪ್ರಗತಿಪರ ಚಿಂತಕರ ವೇದಿಕೆ (ಅದರ ಎಲ್ಲಾ ಪದಾದಿಕಾರಿಗಳೂ ಹಿಂದೂಗಳೇ) ಒಂದು ಬೃಹತ್ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಮಂಗಳೂರಿನ ಎಲ್ಲಾ ಕ್ರೈಸ್ತ ಸಭೆಗಳಿಗೆ ಈ ಕಾರ್ಯಕ್ರಮಕ್ಕೆ ಆಮಂತ್ರಣವಿತ್ತು. ಸುಮಾರು 500ಕ್ಕೂ ಮೀರಿ ಜನಸೇರಿದ್ದ ಆ ಸಭೆಯಲ್ಲಿ ಇದ್ದ ಪ್ರೊತಸ್ತಾಂತ ಕ್ರೈಸ್ತರ ಸಂಖ್ಯೆ ಎಷ್ಟು ಗೊತ್ತೇ? ಕೇವಲ 5. ಸಿ.ಎಸ್.ಐ. ಸಭೆಗಳು ಇಂದಿಗೂ ಮೂಕಾವಸ್ಥೆಯಲ್ಲಿರುವುದು ಕ್ರೈಸ್ತ ಸಾಕ್ಷಿಗೇ ಒಂದು ಕಳಂಕ. ಪ್ರಾಯಶಃ ನಾವಿನ್ನೂ ಬೆಲ್ಜೆಬೂಲನಿಂದ ಮುಕ್ತಿಹೊಂದಿಲ್ಲವೇನೋ! ಅಥವಾ ಕೇವಲ ನನ್ನ ಮನೆಯನ್ನು ಕಾಪಾಡಿಕೊಂಡರೆ ಸಾಕು, ಎಂಬ ಸಾಮ್ರಾಜ್ಯಷಾಹೀದೋರಣೆ ನಮ್ಮದಾಗಿದೆಯೋ? ತೆರೇಸಾ ಪ್ರೊತಸ್ತಾಂತಳಲ್ಲವಲ್ಲ, ಕಂದಮಾಲ್ ನಮ್ಮ ಊರೇನಲ್ವಲ್ಲಾ, ಗ್ರಹಾಂ ಸ್ಟೈನ್ ಏನು ಸಿ.ಎಸ್.ಐ. ಪಾದ್ರಿಯಾ; ಅಡೊರೇಷನ್ ಚಾಪಲ್ ತಾನೇ, ನಮ್ಮ ಕೆ.ಟಿ.ಸಿ. ಚಾಪಲ್ ಅಲ್ಲವಲ್ಲ: ಹಿಂದುತ್ವವಾದಿಗಳಿಂದ ಧಮನಕ್ಕೆ ಒಳಗಾದ ಇದ್ಯಾವುದೂ “ನಮ್ಮ ಸಂಗತಿಗಳ”ಲ್ಲ ಎಂಬ ಮನೋಭಾವ ನಮ್ಮದೋ? ಇಂಥ ಮನೋಭಾವದಿಂದ ನಾವು ಇನ್ನೂ ಮೌನಿಗಳಾಗಿ ಮೂಕಸ್ಥಿತಿಯಲ್ಲಿರುವುದಾದರೆ ಬೆಲ್ಜೆಬೂಲ ನಮ್ಮನ್ನು ಇನ್ನೂ ಬಿಟ್ಟಿಲ್ಲ. ಆ ಬೆಲ್ಜೆಬೂಲನಿಂದ ಮುಕ್ತರಾಗಿ ಮಾತನಾಡುವ ಶಕ್ತಿಗಳು ನಾವಾಗಬೇಕು. ಯೇಸುವಿನಿಂದ ಬಿಡುಗಡೆಯ ಅನುಭವ ಹೊಂದಿದ ಆ ವ್ಯಕ್ತಿಯ ಮಾತು ಸಾಮ್ರಾಜ್ಯಷಾಹಿಗಳ ನಿದ್ದೆಗೆಡಿಸಿತು. ಇಂದು ನಾವಾಡುವ ಮಾತು ಮೂಲಭೂತವಾದೀ ಪೆಡಂಭೂತಗಳ ನಿದ್ದೆಗೆಡಿಸುವ ಅಗತ್ಯವಿದೆ. ಹಿಂದೂ ಬೃಹತ್ ಸಮಾವೇಶಗಳಲ್ಲಿ ಬೊಬ್ಬಿಟ್ಟು ಅಲ್ಪಸಂಖ್ಯಾತರನ್ನು ಮೂಕರನ್ನಾಗಿಸಲು ಯತ್ನಿಸುವ ಬೆಲ್ಜೆಬೂಲನ ಶಕ್ತಿಯ ವಿರುದ್ಧ ನಾವಾಡುವ ಮಾತು ಕ್ರಾಂತಿಯ ಕಹಳೆಯನ್ನೂದಲಿ. ಯೇಸು ಆತುಕೊಂಡಿದ್ದ ದೈವೀಶಕ್ತಿ ಈ ದಿಶೆಯಲ್ಲಿ ನಮಗೆ ದಾರಿದೀಪವಾಗಲಿ.

No comments:

Post a Comment