ಗ್ಲ್ಯಾಡ್ ಸನ್ ಜತ್ತನ್ನ
ಕೋವಿಡ್-೧೯ ಎಂಬ ನಮ್ಮ ತಲೆಮಾರಿನ ಬಹುದೊಡ್ಡ ಸಾಂಕ್ರಾಮಿಕ ಪಿಡುಗು ಒಂದು ಕಠೋರ ದುಃಸ್ವಪ್ನವಾಗಿ ಇಡೀ ಜಗತ್ತನ್ನೇ ಕಾಡುತ್ತಿರುವ ಸಂದರ್ಭದಲ್ಲಿ ಕ್ರೈಸ್ತವಿಶ್ವಾಸವು ಕೂಡಾ ತನ್ನ ತಳಪಾಯವನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದೆ. ಕೊರೋನಾವನ್ನು ಮನುಕುಲದ ಪಾಪದ ವಿರುದ್ಧ ದೇವರ ಶಾಪ ಮತ್ತು ಇದು ಲೋಕದ ಅಂತ್ಯದ ಆರಂಭ ಎಂದು ವ್ಯಾಖ್ಯಾನಿಸಿ ದೇವರ ಗ್ರಹಿಸಲಾಗದ ಅಪರಿಮಿತ ಮತ್ತು ಅಗಾಧ ಪ್ರೀತಿ ಹಾಗೂ ಅನನ್ಯ ಕೃಪೆಗೆ ಅವಮಾನವೆಸಗುತ್ತಿರುವ ವರ್ಗ ಒಂದೆಡೆಯಾದರೆ, ಕೊರೋನಾವು ಚೀನೀಯರು ತಮ್ಮ ರಾಜಕೀಯ ಮತ್ತು ಆರ್ಥಿಕ ಉದ್ದೇಶಗಳಿಗಾಗಿ ಹುಟ್ಟುಹಾಕಿದ ಬಯೋ-ಅಸ್ತ್ರವೆಂಬ ಅಮೇರಿಕಾದ ವ್ಯಾಖ್ಯಾನವನ್ನು ಪ್ರಶ್ನಾತೀತವಾಗಿ ಸ್ವೀಕರಿಸಿ ಅದಕ್ಕೆ ಇನ್ನಷ್ಟು ಪ್ರಚಾರ ನೀಡುತ್ತಿರುವ ವರ್ಗ ಮತ್ತೊಂದೆಡೆ. ಇನ್ನು ನಮ್ಮ ದೇಶದಲ್ಲಿ ಈ ಸೋಂಕನ್ನು ಪಸರಿಸಿದ್ದು ಮುಸಲ್ಮಾನರು ಮತ್ತು ಅವರಿಗೆ ಇದೊಂದು ಭಯೋತ್ಪಾದನಾ ಅಸ್ತ್ರ ಎಂದು ಕೊರೋನಾವನ್ನು ಕೋಮುವಾದದ ರಾಜಕಾರಣಕ್ಕೆ ಎಳೆದು ಮುಸಲ್ಮಾನ ಬಾಂಧವರನ್ನು ಸೈತಾನೀಕರಿಸುತ್ತಿರುವ ವರ್ಗವೂ ಇಂದು ಬೆಳೆಯುತ್ತಿರುವುದು ದುರದೃಷ್ಟಕರ ಮತ್ತು ಅಷ್ಟೇ ಅಪಾಯಕಾರಿ. ಕ್ರೈಸ್ತ ಸಮುದಾಯವು ಇಂಥ ಯಾವ ವರ್ಗದ ಭಾಗವಾಗದೇ ತನ್ನ ವಿಶ್ವಾಸದ ಸಂಕುಚಿತ ಪರಿಧಿಗಳನ್ನು ಒಡೆದು ವಿಶಾಲವಾದ ಮತ್ತು ಅಷ್ಟೇ ಘಟ್ಟಿಯಾದ ಬುನಾದಿಯನ್ನು ಪುನರ್-ಕಟ್ಟುವ ಸಮಯವಿದು ಎಂದು ಪರಿಗಣಿಸಿದರೆ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಒಳಿತಾಗಬಲ್ಲದು.
ಸಂತೋಷದ ಸಂಗತಿಯೇನೆಂದರೆ, ಸಾಮಾಜಿಕ ಅಂತರವನ್ನು (ಸೋಷಿಯಲ್ ಡಿಸ್ಟನ್ಸ್) ಪಾಲಿಸಬೇಕಾದ ಇಂದಿನ ಅನಿವಾರ್ಯ ಸಂದರ್ಭದಲ್ಲಿ, ಜಾಗತಿಕ ಕ್ರೈಸ್ತ ಸಮುದಾಯವು ಕ್ರೈಸ್ತ ಅನ್ಯೋನ್ಯಕ್ಕೆ ಒಂದು ಅನನ್ಯ ಸಂಕೇತವಾದ ಕರ್ತನ ಪವಿತ್ರಭೋಜನ ಅಥವಾ ಯೂಖರಿಸ್ಟನ್ನು ಆಚರಿಸುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿದೆ. ಈ ಕುರಿತು ವಿವಿಧ ಸಭಾಸಂಪ್ರದಾಯಗಳು ಹುಡುಕಾಡುತ್ತಿರುವ ವಿಭಿನ್ನ ಪರ್ಯಾಯ ವಿಧಾನಗಳನ್ನು ಗಮನಿಸಿ ಕ್ರೈಸ್ತ ಸಭೆ ಒಂದು ಸ್ಥಿತ-ರಚನೆಯಲ್ಲ, ಬದಲಾಗಿ ಅದೊಂದು ಚಲನಾತ್ಮಕ/ಘಟಿಸುತ್ತಿರುವ/ಸಂಭವಿಸುವ ಸಮುದಾಯ (ಚರ್ಚ್ ಈಸ್ ಎ ಹ್ಯಾಪನಿಂಗ್)ವೆಂದು ಅರ್ಥವಿಸುವ ಅಗತ್ಯವಿದೆ.
ಈ ಬೆಳಕಿನಲ್ಲಿ ವಿವಿಧ ಕ್ರೈಸ್ತ ಸಭಾಸಂಪ್ರದಾಯಗಳಲ್ಲಿ ನಡೆಯುತ್ತಿರುವ ಸಕ್ರಿಯ ಜಿಜ್ಞಾಸೆಯ ಕಡೆಗೆ ಒಂದಿಷ್ಟು ಗಮನ ಹರಿಸೋಣ:
ಆರ್ಥಡಾಕ್ಸ್ ಸಂಪ್ರದಾಯದ ಸಭೆಗಳು ಯೂಖರಿಸ್ಟ್ ಆಚರಣೆಯನ್ನು ಕ್ರೈಸ್ತ ಆರಾಧನೆ ಮತ್ತು ಸಾಕ್ಷಿಯ ಕೇಂದ್ರವಾಗಿರಿಸಿಕೊಂಡಿರುವ ಸಭೆಗಳು. ಆದರೆ ಯೂಖರಿಸ್ಟ್ ನ ಆಚರಣೆಯನ್ನೇ ರದ್ಧುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವ ಈ ಸಂದರ್ಭದಲ್ಲಿ ಆರ್ಥಡಾಕ್ಸ್ ದೈವಶಾಸ್ತ್ರಜ್ಞರು ಒಂದು ಆರೋಗ್ಯಕರ ಚರ್ಚೆಯಲ್ಲಿ ತೊಡಗಿರುವುದು ಗಮನಾರ್ಹ. ಹೆಸರಾಂತ ಆರ್ಥಡಾಕ್ಸ್ ದೈವಶಾಸ್ತ್ರಜ್ಞ ಮತ್ತು ಪೆರ್ಗಮಾನ್ ನ ಮೆಟ್ರೊಪಾಲಿಟನ್ ಜಾನ್ ಜಿಜಿಯುಲಾಸ್ ರ ಪ್ರಕಾರ ಪವಿತ್ರ ಯೂಖರಿಸ್ಟ್ ಇಲ್ಲದ ಸಭೆಯು ಸಭೆಯೇ ಅಲ್ಲ. ಆದರೆ ಈ ವೈರಾಣುವನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಅಪಾಯವಿರುವ ಇಂದಿನ ಸಂದರ್ಭದಲ್ಲಿ ನಾವು ಯಾವುದೇ ಅಗತ್ಯ ಮತ್ತು ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳುವ ಅನಿವಾರ್ಯತೆಗೆ ಅದು ನಮ್ಮನ್ನು ತಂದು ನಿಲ್ಲಿಸಿದೆ. ಆ ಅನಿವಾರ್ಯತೆ ಆಲಯದಲ್ಲಿ ನಡೆಯುವ ಆರಾಧನೆಯನ್ನು ರದ್ಧುಗೊಳಿಸುವ ನಿರ್ಧಾರವೂ ಆಗಿರಬಹುದು. ಹೀಗಿದ್ದರೂ ಸಣ್ಣ ಸಂಖ್ಯೆಯಲ್ಲಿ, ಅಂದರೆ ಐದು ಜನರು ಮೀರದಂತೆ, ಜನರು ಸಭೆಯಾಗಿ ಸೇರಿಬಂದು ಪಾದ್ರಿಗಳಿಂದ ಆಚರಿಸಲ್ಪಡುವ ಪವಿತ್ರ ಯೂಖರಿಸ್ಟ್ ನಲ್ಲಿ ಬಾಗವಹಿಸುವುದು ಸಾಧ್ಯ ಮತ್ತು ಅಗತ್ಯ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮತ್ತದು ಕೊರೋನಾ ವೈರಾಣುವನ್ನು ವರ್ಗಾಯಿಸುವ ಶೂನ್ಯ ಸಾಧ್ಯತೆಗೆ ನಡೆಸಬಲ್ಲದು ಎಂಬದೂ ಅವರ ಅಭಿಮತ.
ಅಮೇರಿಕಾದ ಗ್ರೀಕ್ ಆರ್ಥಡಾಕ್ಸ್ ಆರ್ಚ್ ಡಯಾಸಿಸಿಸಿನ ಪಾದ್ರಿಯಾದ ಡಾ. ನಿಕೋಲಾಸ್ ಕಜರಿಯಾನ್ ಶ್ರಮಾದಿನಗಳನ್ನು ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮರುವ್ಯಾಖ್ಯಾನಿಸುತ್ತಾ, ಈಬಾರಿಯ ಶ್ರಮಾದಿನಗಳು ಹಲವು ವಿಧಗಳಲ್ಲಿ ವಿಚಿತ್ರ, ಯಾಕೆಂದರೆ ಇದು ಉಪವಾಸದ, ಪ್ರಾರ್ಥನೆಯ ಮತ್ತು ಪಶ್ಚಾತ್ತಾಪದ ನಮ್ಮ ಹಳೆಯ ವಿಧಾನಗಳನ್ನು ತ್ಯಜಿಸಲು ಕರೆನೀಡುತ್ತವೆ. ಉಪವಾಸವು ಕೂಡಾ ಒಂದು ಪರಿತ್ಯಾಗವಂತಾದರೆ, ಪ್ರಸ್ತುತ ಬಂದೊದಗಿರುವ ಬಿಕ್ಕಟ್ಟು ನಮ್ಮ ಜೀವಮಾನ ಕಾಲದಲ್ಲೇ ನಾವು ಆಚರಿಸದ ಅತ್ಯುತ್ತಮ ಶ್ರಮಾದಿನಗಳನ್ನು ಆಚರಿಸಲು ನಮ್ಮನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಯಾಕೆಂದರೆ, ನಾವು ಈ ಹಿಂದೆ ಸಭೆಗಳಲ್ಲಿ ಆರಾಧಿಸುತ್ತಿದ್ದ, ಕರ್ತನ ಭೋಜನವನ್ನು ಸ್ವೀಕರಿಸುತ್ತಿದ್ದ ಮತ್ತು ಪವಿತ್ರವಾರವನ್ನು ಆಚರಿಸುತ್ತಿದ್ದ ನಮ್ಮ ಹಳೆಯ ವಿಧಾನಗಳನ್ನು ತ್ಯಜಿಸಲು ಈ ಬಿಕ್ಕಟ್ಟು ನಮ್ಮನ್ನು ನಡೆಸಿದೆ ಎನ್ನುತ್ತಾರೆ. ಕ್ರೈಸ್ತಸಭೆಯ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಯ ಕುರಿತು ಅವರು ಮಾತನಾಡುತ್ತಾ, ನಾವಿಂದು ಕ್ರೈಸ್ತಸಭೆ ಮತ್ತು ಕ್ರೈಸ್ತತ್ವದಲ್ಲಿ ನಮ್ಮ ರಕ್ಷಣೆಯನ್ನು ಹುಡುಕುವ ಬದಲಿಗೆ ಸಭೆ ಮತ್ತು ಕ್ರೈಸ್ತತ್ವವನ್ನೇ ರಕ್ಷಿಸಲು ಹೊರಟಂತೆ ಕಾಣುತ್ತದೆ. ಚರ್ಚು, ಸಂಪ್ರದಾಯಗಳಿಗಿಂತಲೂ ನಮ್ಮ ನೆರೆಯವರು ಇಂದು ನಮ್ಮ ನೈಜ ಆಧ್ಯತೆಯಾಗಬೇಕಾಗಿದೆ ಎಂಬ ಬಹು ಅರ್ಥಗರ್ಭಿತ ಚಿಂತನೆಯನ್ನು ಅವರು ನಮ್ಮ ಮುಂದಿಡುತ್ತಾರೆ. ಇದೇ ಅಭಿಪ್ರಾಯವನ್ನು ಪ್ರತಿಪಾದಿಸುತ್ತಾ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಬಾರ್ತಲೋಮಿಯೊರವರು, "ಈಗ ಸಮಸ್ಯೆಯಲ್ಲಿರುವುದು ನಮ್ಮ ನಂಬಿಕೆಯಲ್ಲ, ಬದಲು ನಂಬಿಕೆಯ ಸಮುದಾಯ; ಕ್ರಿಸ್ತನಲ್ಲ, ಕ್ರೈಸ್ತರು; ದೈವಮಾನವನಲ್ಲ, ಬದಲು ಮಾನವರು" ಎನ್ನುತ್ತಾರೆ. ಈ ಎರಡು ವಾದಗಳೂ ನಮ್ಮ ಸಂದರ್ಭದಲ್ಲಿ ಅತ್ಯಂತ ಆಳವಾದ ದೈವಶಾಸ್ತ್ರೀಯ ಸತ್ಯವನ್ನು ಸಾರುತ್ತವೆ. ಸಭೆಯ ಪ್ರಧಾನ ಆಧ್ಯತೆ ಸಮಸ್ಯೆಯಲ್ಲಿರುವ ಜನರೇ ಹೊರತು, ನಮ್ಮ ಸಂಪ್ರದಾಯಗಳಲ್ಲ ಎಂಬ ಮಾತು ಇವತ್ತು ಸಾಂಪ್ರದಾಯಿಕ ರೀತಿಯಲ್ಲಿ ಕಮ್ಯೂನಿಯನ್ ತೆಗೆದುಕೊಳ್ಳಲಾಗದಿದ್ದರೆ ಕ್ರೈಸ್ತತ್ವವೇ ಸತ್ತು ಹೋಗುತ್ತದೆಯೇನೋ ಎಂದು ಆತಂಕಪಡುವ ಮನಸ್ಸುಗಳಿಗೆ ಉತ್ತಮ ಮಾರ್ಗಸೂಚಿಯಾಗಬಲ್ಲದು.
ಆರ್ಥಡಾಕ್ಸ್ ಸಭೆಯ ಯುವ ದೈವಸಾಸ್ತ್ರಜ್ಞ ಡಾ. ಮಾರ್ಕ್ ರೂಸಿಯೆನ್ ಈ ಕುರಿತು ಗಂಭೀರ ದೈವಶಾಸ್ತ್ರೀಯ ಚಿಂತನೆಯೊಂದನ್ನು ಹಂಚಿಕೊಂಡಿದ್ದಾರೆ. 'ಫಾಸ್ಟಿಂಗ್ ಫ್ರಮ್ ಕಮ್ಯೂನಿಯನ್ ಇನ್ ಎ ಪೆಂಡೆಮಿಕ್' (ಒಂದು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕರ್ತನಭೋಜನವನ್ನು ಪರಿತ್ಯಜಿಸುವುದು) ಎಂಬ ತಮ್ಮ ಲೇಖನದಲ್ಲಿ ಹೀಗೆ ಬರೆಯುತ್ತಾರೆ: ಇಂಥ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕರ್ತನ ದೇಹ ರಕ್ತಗಳಿಂದ ವಂಚಿತರಾಗುವ ಸ್ಥಿತಿಯು ದೇವರು ನಮ್ಮ ಮಾನವ ಬಲಹೀನ ಸ್ಥಿತಿಯಲ್ಲಿ ನಮ್ಮೊಂದಿಗೆ ಹೇಗೆ ಒಂದಾದನು ಎಂಬುದನ್ನು ನೆನಪಿಸಿಕೊಳ್ಳುವುದಕ್ಕೆ ನಮಗೆ ಸಹಾಯ ಮಾಡುತ್ತದೆ. ಯೇಸುವಿಗೆ ದೈವೀಕ ಅನುಪಸ್ಥಿತಿಯ ಅರಿವಿತ್ತು. ಕ್ರೂಜೆಯಲ್ಲಿ ಆತ "ನನ್ನ ದೇವರೇ, ನನ್ನ ದೇವೆರೇ, ಯಾಕೆ ನನ್ನ ಕೈಬಿಟ್ಟಿದ್ದೀ" ಎಂದು ಕೂಗಿಟ್ಟ. ಅದು ಯೇಸುಕ್ರಿಸ್ತ ನಮಗೋಸ್ಕರ ಮಾಡಿದ ಬಲಿದಾನ/ತ್ಯಾಗ. ಚರ್ಚಿಗೆ ಹೋಗಲಾಗದೆ ಕರ್ತನ ಪವಿತ್ರಭೋಜನದಲ್ಲಿ ಪಾಲ್ತೆಗೆದುಕೊಳ್ಳದೆ ಇರುವುದು ನಾವು ಇತರರ ಒಳಿತಿಗಾಗಿ ಮಾಡಬೇಕಾದ ಅನಿವಾರ್ಯ ಮತ್ತು ಅಗತ್ಯ ಬಲಿದಾನ/ತ್ಯಾಗ ಎನ್ನುತ್ತಾರೆ ಫಾದರ್ ರೂಸಿಯೆನ್.
ರೋಮನ್ ಕಥೋಲಿಕ ಸಭೆಗಳಲ್ಲಿಯೂ ಕೊರೋನಾದ ಸಂದರ್ಭದಲ್ಲಿ ಯೂಖರಿಸ್ಟ್ ಆಚರಣೆಯ ಪರ್ಯಾಯ ವಿಧಾನಗಳ ಕುರಿತು ಜಿಜ್ಞಾಸೆಗಳು ನಡೆಯುತ್ತಿವೆ. ವರ್ಚುವಲ್ ಯೂಖರಿಸ್ಟ್ ಆಚರಣೆಯ ಸಾಧ್ಯಾಸಾಧ್ಯತೆಗಳ ಕುರಿತು ಸಭೆ ಗಂಭೀರವಾಗಿ ಚರ್ಚಿಸುತ್ತಿದೆ. ಮಾಸ್ಸಿಮೋ ಫಗ್ಗಿಯೊಲಿ ಎಂಬ ಕಥೋಲಿಕ ದೈವಶಾಸ್ತ್ರಜ್ಞ ಕೊರೋನಾ ಸೋಂಕಿನ ಸಂದರ್ಭದಲ್ಲಿ ತಂತ್ರಜ್ಞಾನಗಳ ಮೂಲಕ ಕ್ರೈಸ್ತ ಆರಾಧನೆ ನಡೆಸುವುದರ ಕುರಿತು ಮಾತನಾಡುತ್ತಾ ಅವುಗಳ ಹಿಂದಿರುವ ಸಭಾಶಾಸ್ತ್ರ (ಎಕ್ಲೇಸಿಯಾಲಜಿ)ವನ್ನು ಗಂಭೀರವಾಗಿ ಪರಿಗಣಿಸಲು ಕರೆನೀಡುತ್ತಾರೆ. ಈ ರೀತಿಯ ಅನಿವಾರ್ಯ ಆರಾಧನಾ ವಿಧಾನಗಳು ಮತ್ತು ಪರ್ಯಾಯಗಳು ಸಭೆಯ ರಚನೆ ಮತ್ತು ಅಧಿಕಾರದ ಮೇಲೆಯೂ ಪ್ರಭಾವ ಬೀರುತ್ತವೆ ಎಂಬುದು ಅವರ ಒತ್ತು.
ಪ್ರೊತಸ್ತಾಂತ ಸಭೆಗಳಲ್ಲಿಯೂ ಈ ಕುರಿತು ಸಕ್ರಿಯ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಸಾಂಪ್ರದಾಯಿಕ ರೀತಿಯಲ್ಲಿ ಕರ್ತನ ಪವಿತ್ರ ಭೋಜನ ಸಂಸ್ಕಾರದಲ್ಲಿ ಭಾಗವಹಿಸುವುದು ಅಸಾಧ್ಯವಾಗಿರುವ ಈ ವಿಷಮ ಪರಿಸ್ಥಿತಿ ನಮ್ಮ ವಿಶ್ವಾಸಕ್ಕೆ ಬಂದಿರುವ ಅಪಾಯವಲ್ಲ ಎಂಬುದು ಹಲವು ಪ್ರೊತಸ್ತಾಂತ ದೈವಶಾಸ್ತ್ರಜ್ಞರ ಅಭಿಪ್ರಾಯ. ಲೂಥರನ್ ದೈವಶಾಸ್ತ್ರಜ್ಞೆ ಮತ್ತು ಕ್ಯಾನ್ಸರ್ ರೋಗದಿಂದ ಬದುಕುಳಿದ ಡಾ. ಡೆಯಾನ್ನಾ ಥಾಂಪ್ಸನ್ ರವರು ವರ್ಚುವಲ್ ಯೂಖರಿಸ್ಟನ್ನು ಬಹುವಾಗಿ ಪ್ರತಿಪಾದಿಸುತ್ತಾರೆ. ತನ್ನ ಕ್ಯಾನ್ಸರ್ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಗೆ ತನ್ನ ದಿಗ್ಭಂಧನದ (ಕ್ವಾರಂಟೈನ್) ದಿನಗಳಲ್ಲಿ ವರ್ಚುವಲ್ ಮಾಧ್ಯಮಗಳ ಮೂಲಕ ಕ್ರಿಸ್ತನ ದೇಹದೊಂದಿಗೆ ಪಾಲ್ತೆಗೆದುಕೊಳ್ಳಲು ಸಾಧ್ಯವಾಯಿತು ಎಂಬುದರ ಬಗ್ಗೆ ಅವರು ಮನಮುಟ್ಟುವಂತೆ ಮಾತನಾಡುತ್ತಾರೆ. ಇಂದಿನ ಸಮೂಹ ದಿಗ್ಬಂಧನದ ಸಂದರ್ಭಗಳು ನಾವು ಆತ್ಮದಲ್ಲಿಯೂ ದೇಹದಲ್ಲಿಯೂ ಒಂದಾಗಿ ಸೇರಿಬಂದು ದೇವರನ್ನು ಆರಾಧಿಸುವ ವಿವಿಧ ಪರ್ಯಾಯ ಮತ್ತು ಕ್ರಿಯಾತ್ಮಕ ಚಿಂತನೆಗಳಿಗೆ ನಮ್ಮನ್ನು ನಡೆಸುತ್ತವೆ. ಟಿವಿ/ಕಂಪ್ಯೂಟರ್ ಪರದೆಯ ಮೇಲೆ ನಮ್ಮ ಪಾದ್ರಿಗಳು ಕರ್ತನ ಪವಿತ್ರ ಭೋಜನದ ಪ್ರಾರ್ಥನಾ ವಿಧಿಗಳನ್ನು ನಡೆಸುವಾಗಲೂ ನಾವು ತೆಗೆದುಕೊಳ್ಳುವ ರೊಟ್ಟಿ ಮತ್ತು ದ್ರಾಕ್ಷಾರಸಗಳೆಂಬ ಉಡುಗೊರೆಗಳ ಮೂಲಕ ಕ್ರಿಸ್ತನು ನಮ್ಮಲ್ಲಿಗೆ ಆಗಮಿಸುತ್ತಾನೆ ಎಂಬುದು ಅವರ ಅಭಿಮತ. ಡೆಯಾನ್ನಾರವರು ವರ್ಚುವಲ್ ಮಾಧ್ಯಮವನ್ನು ಇಂದಿನ ವಿಷಮ ಪರಿಸ್ಥಿತಿಯಲ್ಲಿ ಒಂದು ಸೂಕ್ತ ಪರ್ಯಾಯ ಮಾಧ್ಯಮ ಎಂದು ಗುರುತಿಸಿದರೂ ಪಾದ್ರಿಕೇಂದ್ರಿತ ಯೂಖರಿಸ್ಟ್ ಆಚರಣೆಯನ್ನೇ ಪ್ರತಿಪಾದಿಸುತ್ತಾರೆ.
ಈ ಅಭಿಮತಕ್ಕೆ ತುಸು ಭಿನ್ನವಾಗಿ ನಮ್ಮ ನೆಲದ ಹೆಸರಾಂತ ದೈವಶಾಸ್ತ್ರಜ್ಞ ಡಾ. ಓ. ವಿ. ಜತ್ತನ್ನರವರ ಬಹು ಅರ್ಥಗರ್ಭಿತ ದೈವಶಾಸ್ತ್ರೀಯ ಹೇಳಿಕೆಯನ್ನು ಇಲ್ಲಿ ಅವಧರಿಸುವುದು ಉಚಿತ. ಕ್ರೈಸ್ತ ಸಭಾಚರಿತ್ರಕಾರರೂ ವಿಶ್ರಾಂತ ಬಿಷಪರೂ ಆದ ಡಾ. ಸಿ. ಎಲ್. ಫುರ್ಟಾಡೋರವರೊಂದಿಗಿನ ತಮ್ಮ ಈ-ಮೇಲ್ ಸಂಭಾಷಣೆಯಲ್ಲಿ ಜತ್ತನ್ನರವರು ಹೀಗೆ ಅಭಿಪ್ರಾಯ ಪಡುತ್ತಾರೆ: "ಒಬ್ಬ "ದೀಕ್ಷಿತ" ಸಭಾಪಾಲಕರಿಲ್ಲದ ಪರಿಸ್ಥಿತಿಯಲ್ಲಿ ವಿಶ್ವಾಸಿಗಳು ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ಯೋಗ್ಯವಾಗಿ ಕೂಡಿಬಂದು ಸುವಾರ್ತೆಗಳಲ್ಲಿ ಕಂಡುಬರುವ ಕರ್ತನ ಪವಿತ್ರಭೋಜನದ ವಾಕ್ಯಗಳನ್ನು ಬಳಸಿ ಪವಿತ್ರ ಯೂಖರಿಸ್ಟನ್ನು ಆಚರಿಸುವುದರಲ್ಲಿ ಯಾವುದೇ ಗಂಭೀರ ಅಡ್ಡಿಯಿಲ್ಲ ಎಂದು ನಾನು ಬಾವಿಸುತ್ತೇನೆ." ತಮ್ಮ ಈ ಅಭಿಪ್ರಾಯವನ್ನು ಸವಿಸ್ತಾರವಾಗಿ ಆಳವಾದ ದೈವಶಾಸ್ತ್ರೀಯ ತಳಹದಿಯಲ್ಲಿ ಅವರು ಪ್ರತಿಪಾದಿಸುತ್ತಾರೆ.
ಈ ಮೇಲ್ಕಾಣಿಸಿದ ವಿವಿಧ ದೈವಶಾಸ್ತ್ರೀಯ ಚಿಂತನೆಗಳು ಮತ್ತು ಅಭಿಪ್ರಾಯಗಳು ಕೊರೋನಾದಂತಹ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕ್ರೈಸ್ತಸಭೆಗಳು ತಮ್ಮ ವಿಶ್ವಾಸವನ್ನು ಮತ್ತು ದೈವಶಾಸ್ತ್ರವನ್ನು ಮರುವ್ಯಾಖ್ಯಾನಿಸುವ ಸಕ್ರಿಯ ಮತ್ತು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಕ್ರೈಸ್ತವಿಶ್ವಾಸವು ಎಂದೋ ಯಾರೋ ಕಟ್ಟಿಟ್ಟ ಸ್ಥಾವರವಲ್ಲ; ಅದೊಂದು ನಿರಂತರ ಚಲನಾತ್ಮಕ ಪ್ರಕ್ರಿಯೆಯಲ್ಲಿರುವ ಜಂಗಮ ಎಂಬುದು ಸಭೆಯ ಅರಿವಿಗೆ ಬಂದಿರುವುದು ನಿಜಕ್ಕೂ ಶ್ಲಾಘನೀಯ.
ಇಂತಹ ಸಕ್ರಿಯ ಜಿಜ್ಞಾಸೆಗಳ ಮೂಲಕ ವಿಶ್ವಾಸದ ಚಲನಾತ್ಮಕ ಸ್ವರೂಪವನ್ನು ಕ್ರೈಸ್ತಸಭೆ ಮತ್ತೊಮ್ಮೆ ಜೀವಂತಗೊಳಿಸಿರುವುದು ಕ್ರೈಸ್ತತ್ವದ ನಿರಂತರತೆಗೆ ಒಂದು ಸಾಕ್ಷಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಜಿಜ್ಞಾಸೆಯಲ್ಲಿ ಕೆಲವು ಗಮನಾರ್ಹ ವಿಚಾರಗಳು ಚರ್ಚಿಸಲ್ಪಡದೇ ಇರುವುದು ಆತಂಕಕಾರಿ. ಅದು ಕ್ರೈಸ್ತತ್ವದ ನಿರಂತರತೆಗೆ ಧಕ್ಕೆ ತರುವ ಅಪಾಯವನ್ನು ಹೊಂದಿದೆ. ಈ ದಿಶೆಯಲ್ಲಿ ಕೆಲವು ಗಮನಾರ್ಹ ವಿಚಾರಗಳನ್ನು ಇಲ್ಲಿ ಗಂಭೀರವಾಗಿ ಪರಿಗಣಿಸುವುದು ಅಗತ್ಯ:
೧. ಬಹುತೇಕ ಸಭಾಸಂಪ್ರದಾಯಗಳು ವರ್ಚುವಲ್ ಮಾಧ್ಯಮವನ್ನು ಆಲಯದಲ್ಲಿ ನಡೆಯುವ "ಸಾರ್ವಜನಿಕ" ಆರಾಧನೆಗೆ ಒಂದು ಪರ್ಯಾಯ ಮಾಧ್ಯಮವಾಗಿ ಸೂಚಿಸಿರುವುದು ಸ್ಪಷ್ಟ. ವರ್ಚುವಲ್ ಮಾಧ್ಯಮ, ಅಂದರೆ ಟಿ.ವಿ., ಯೂಟ್ಯೂಬ್, ಜೂಮ್, ಸ್ಕೈಪ್ ಇತ್ಯಾದಿ ಮಾಧ್ಯಮಗಳ ಮೂಲಕ ಆರಾಧನೆ, ಮತ್ತು ಅದರಲ್ಲೂ ವಿಶೇಷವಾಗಿ, ಕರ್ತನ ಭೋಜನ ಸಂಸ್ಕಾರದ ಆಚರಣೆಯನ್ನು ನಡೆಸುವುದು ಇಂದಿನ ಪ್ರಸ್ತುತ ಕೊರೋನಾ ಸೋಂಕಿನ ಸಂದರ್ಭದಲ್ಲಿ ಒಂದು ಸಾಧ್ಯದ ಮಾಧ್ಯಮವೇನೋ ನಿಜ. ಆದರೆ ಈ ವರ್ಚುವಲ್ ಮಾಧ್ಯಮಗಳು ಇಂದು ದುರಾದೃಷ್ಟವಶಾತ್ ವ್ಯಾಪಾರೀಕರಣಗೊಂಡಿರುವುದನ್ನೂ ನಾವು ಅಲ್ಲಗಳೆಯುವಂತಿಲ್ಲ. "ಕ್ರೈಸ್ತ" ಎಂದು ಹೇಳಿಕೊಳ್ಳುವ ಎಷ್ಟೋ ಟಿ.ವಿ. ಚಾನಲ್ ಗಳು, ಯೂಟ್ಯೂಬ್ ಚಾನಲ್ ಗಳು ಇಂದು ಯಾವ ಕ್ರೈಸ್ತ ನೈತಿಕ ಮೌಲ್ಯಗಳನ್ನೂ ಪಾಲಿಸದೇ ಕೇವಲ ಲಾಭವೆಸಗುವ ವ್ಯಾಪಾರದ ಉದ್ದೇಶವೊಂದನ್ನೇ ಹೊಂದಿರುವುದು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ನಮ್ಮ ಈ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಇಂತಹ ವರ್ಚುವಲ್ ವ್ಯಾಪಾರೀಕರಣವನ್ನು ಪ್ರೋತ್ಸಾಹಿಸುವ ವ್ಯವಸ್ಥೆಯಾಗದಂತೆ ಎಚ್ಚರವಹಿಸುವುದು ಕ್ರೈಸ್ತರ ಮುಂದಿರುವ ದೊಡ್ಡ ಸವಾಲು. ಅಂತೆಯೇ ಕ್ರೈಸ್ತ ಪಂಗಡಗಳ ನಡುವೆ ಮತ್ತು ಬೋಧಕರ ನಡುವೆ ಒಂದು ಅನಾರೋಗ್ಯಕರ ಪೈಪೋಟಿಯನ್ನು ಕೂಡಾ ಈ ಪರ್ಯಾಯ ಮಾಧ್ಯಮ ಹುಟ್ಟುಹಾಕಿದಂತಿದೆ. ಇದು ಕ್ರೈಸ್ತ ಚೈತನ್ಯಕ್ಕೆ ಮಸಿ ಎರಚುವ ಬೆಳವಣಿಗೆ ಎಂಬುದನ್ನು ಗಮನಿಸಿ ಕ್ರೈಸ್ತ ಸಭೆ ಇದನ್ನು ಎಚ್ಚರದಿಂದ ಎದುರಿಸುವುದು ತೀರಾ ಅಗತ್ಯ.
೨. ಹಲವು ಕ್ರೈಸ್ತ ಪಂಗಡಗಳು ವರ್ಚುವಲ್ ಮಾಧ್ಯಮವನ್ನು ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಒಂದು ಪರ್ಯಾಯ ಸಾಧ್ಯತೆ ಎಂದು ಪರಿಗಣಿಸಿದರೂ ಇದು ಕ್ರೈಸ್ತ ಆರಾಧನೆ ಮತ್ತು ಕರ್ತನ ಪವಿತ್ರಭೋಜನ ಸಂಸ್ಕಾರವನ್ನು ಪುರೋಹಿತಶಾಹಿತ್ವದ ಬಂಧನದಿಂದ ಹೊರತರುವ ಒಂದು ಉತ್ತಮ ಅವಕಾಶ ಎಂದು ಪರಿಗಣಿಸಿದಂತೆ ಕಾಣುವುದಿಲ್ಲ. ವರ್ಚುವಲ್ ಸಭೆಯ ಪರಿಕಲ್ಪನೆ (ವರ್ಚುವಲ್ ಚರ್ಚ್/ಸೈಬರ್ ಚರ್ಚ್) ಪ್ರಜಾಪ್ರಭುತ್ವ ಮತ್ತು ಕ್ರಿಯಾಶೀಲತೆಯ ಬುನಾಧಿಯ ಮೇಲೆ ನಿಂತಿದೆ. ಆದರೆ ಇಂದು ದುರಾದೃಷ್ಟವಶಾತ್ ಇಂತಹ ವಲಯವನ್ನೂ ಪುರೋಹಿತಶಾಹಿತ್ವ/ಪಾದ್ರಿಶಾಹಿತ್ವ/ಬೋಧಕಶಾಹಿತ್ವದ ವರ್ತುಲದೊಳಗೆ ತರುವ ಯತ್ನಗಳು ನಡೆಯುತ್ತಿವೆ. ಟಿ.ವಿ. ಪರದೆಯಲ್ಲಿ ಕೂಡಾ ರೊಟ್ಟಿ-ದ್ರಾಕ್ಷಾರಸಗಳು ಪಾದ್ರಿಯಿಂದ ಆಶೀರ್ವದಿಸಲ್ಪಟ್ಟರೆ ಮಾತ್ರ ನಮ್ಮ ಮನೆಯೊಳಗೆ ನಾವು ಸೇವಿಸುವ ರೊಟ್ಟಿ-ದ್ರಾಕ್ಷಾರಸಗಳಲ್ಲಿ ಕ್ರಿಸ್ತನ ಪ್ರವೇಶವಾಗುವುದು ಎಂಬ ಅಭಿಪ್ರಾಯಗಳಿಂದ ಹಲವರಿಗೆ ಮುಕ್ತಿ ಸಿಗದಿರುವುದು ವಿಪರ್ಯಾಸ. ಮತ್ತೊಂದೆಡೆ, ಸಾಮಾಜಿಕ ಅಂತರ ಮತ್ತು ಕ್ವಾರಂಟೈನ್ ನ ಕಠಿಣ ದಿವಸಗಳಲ್ಲಿ ಜನರು ಆತಂಕದಲ್ಲಿರುವಾಗ ಟಿ.ವಿ. ಪ್ರಸಂಗಿಗಳು, ಟೆಲಿ-ಇವ್ಯಾಂಜಲಿಸ್ಟುಗಳು, ಯೂಟ್ಯೂಬ್ ಪಾದ್ರಿಗಳು ಜನರ ಆತಂಕವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಶೋಚನೀಯ. ಇದುವರೆಗೆ ಪ್ರಸಂಗ ಪೀಠದಿಂದ, ಮೆಗಾ ರಿವೈವಲ್ ಸ್ಟೇಜುಗಳಿಂದ ಜನರನ್ನು ಕಾಡುತ್ತಿದ್ದ ಈ ವರ್ಚುವಲ್ ವ್ಯಾಪಾರಿಗಳು ಇದೀಗ ನಮ್ಮ ಬೆಡ್ ರೂಮು, ಕಿಚನ್ನುಗಳನ್ನೂ ಅತಿಕ್ರಮಿಸುವುದರಲ್ಲಿ ನಾಮುಂದು ತಾಮುಂದು ಎಂದು ಪೈಪೋಟಿಗೆ ಇಳಿದಿರುವುದು ತೀರಾ ಅಪಾಯಕಾರಿ. ಇದರಿಂದ ರೋಸಿಹೋದ ಹಿರಿಯ ಮಿತ್ರರೊಬ್ಬರು ಇತ್ತೀಚೆಗೆ ಹೇಳಿದ ಮಾತು ನೆನಪಾಗುತ್ತಿದೆ: "ಕೊರೋನಾ ವೈರಸಿನ ಹಾವಳಿಗಿಂತಲೂ ಸುವಾರ್ತೆಯ ವರ್ಚುವಲ್ ವ್ಯಾಪಾರಿಗಳ ಹಾವಳಿ ಇದೀಗ ಜಾಸ್ತಿಯಾಗಿದೆ." ಇಂಥ ಸೂಕ್ಷ್ಮಾತಿಸೂಕ್ಷ್ಮಗಳನ್ನೂ ಗಂಭೀರವಾಗಿ ಪರಿಗಣಿಸುವುದು ನಮ್ಮ ವಿಶ್ವಾಸದ ಸಂದಿಗ್ಧ ಹೋರಾಟವಾಗಬೇಕಿದೆ.
೩. ಕೊರೋನಾದ ಸಂದರ್ಭದಲ್ಲಿ ಕಮ್ಯೂನಿಯನ್ ನ ಕುರಿತು ನಡೆಯುತ್ತಿರುವ ಬಹುತೇಕ ಚರ್ಚೆಗಳು ಯೇಸು ತನ್ನ ಶಿಷ್ಯರೊಂದಿಗೆ ಮಾಡಿದ ಕಡೇ ಭೋಜನವನ್ನು ಒಂದು ಸಾಂಪ್ರದಾಯಿಕ ಮತ್ತು ಧಾರ್ಮಿಕ ಸಂಸ್ಕಾರವಾಗಿ ಗುರುತಿಸುತ್ತಿವೆಯೇ ಹೊರತು, ಅದರ ಆಳದಲ್ಲಿರುವ ಯೇಸುವಿನ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ಮುಖವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. "ನನ್ನನ್ನು ನೆನಪಿಸಿಕೊಳ್ಳುವುದಕ್ಕೆ ಹೀಗೆ ಮಾಡಿರಿ" ಎಂಬ ಸುವಾರ್ತೆಗಳಲ್ಲಿನ ಯೇಸುವಿನ ಮಾತುಗಳು ಒಂದು ಪರ್ಯಾಯ ಜೀವನ ಮೌಲ್ಯಕ್ಕೆ ಕರೆನೀಡುವ ಮಾತುಗಳು. ಯೇಸುವಿನ ದೇಹದ ಮುರಿಯಲ್ಪಡುವಿಕೆ ಮತ್ತು ರಕ್ತದ ಹುಯ್ಯಲ್ಪಡುವಿಕೆ ಯೇಸು ಎದುರಿಸಿದ ಅಮಾನವೀಯ ಶ್ರಮೆ, ಅನ್ಯಾಯ, ಅಧರ್ಮದ ರಾಜಕಾರಣವನ್ನು ನಮಗೆ ನೆನಪಿಸುವುದು ಅಗತ್ಯ. ಕರ್ತನ ಭೋಜನದಲ್ಲಿ ಪಾಲ್ತೆಗೆದುಕೊಳ್ಳುವುದು ಎಂದರೆ ಯೇಸುವಿನ ನ್ಯಾಯಪರ ಹೋರಾಟದಲ್ಲಿ ಸತ್ಯ-ಧರ್ಮದ ಪರ ನಿಂತು ಯೇಸುವಿನಂತಹ ಶ್ರಮೆಯನ್ನು ಅನುಭವಿಸಲು ಸಿದ್ಧರಾಗುವುದು ಎಂದರ್ಥ. ಕೋವಿಡ್-೧೯ ಎಂಬ ಸೋಂಕು ಇಂದು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಅನ್ಯಾಯ, ಅಧರ್ಮ, ಅಸತ್ಯಗಳೆಂಬ ಹಲವು ರೋಗಗಳನ್ನು ನಮ್ಮ ಮುಂದೆ ಬಿಚ್ಚಿಟ್ಟಿದೆ. ಒಂದೆಡೆ ಉಳ್ಳವರು ಸ್ಯಾನಿಟೈಸರ್ ನಲ್ಲಿ ದಿನಕ್ಕೆ ಹತ್ತು ಬಾರಿ ಕೈತೊಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಸ್ಲಮ್-ನಿವಾಸಿಗಳು, ವಲಸಿತ ಸಮುದಾಯಗಳು, ಕಾರ್ಮಿಕರು, ದಲಿತರು - ಇಂತಹ ಹಲವು ಬಡವರ್ಗದ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲೂ ನೀರಿಲ್ಲದೆ, ಸೂರಿಲ್ಲದೆ ಅಲೆದಾಡುತ್ತಿರುವ ಚಿತ್ರಣಗಳು ನಮ್ಮ ಸಮಾಜ ಅದೆಷ್ಟು ರೋಗಗ್ರಸ್ತ ಎಂಬುದನ್ನು ಸಾರಿ ಹೇಳುತ್ತಿವೆ. ಇನ್ನೊಂದೆಡೆ ಕೊರೋನಾ ವೈರಾಣುವಿನ ಹೆಸರಿನಲ್ಲಿ ಕೋಮುವಾದದ ರಾಜಕಾರಣಗಳು ಬೆಳೆಯುತ್ತಿದ್ದು ಒಂದು ಕೋಮುವನ್ನೇ, ಜನಾಂಗವನ್ನೇ ಪೈಶಾಚೀಕರಣಗೊಳಿಸುತ್ತಿದೆ. ಇಂಥ ಅನ್ಯಾಯದ ವೈರಾಣುವಿನ ಆರ್ಭಟದ ನಡುವೆ ನ್ಯಾಯಮೂರ್ತಿಯಾದ ಕ್ರಿಸ್ತನ ದೇಹ-ರಕ್ತಗಳಲ್ಲಿ ಪಾಲ್ತೆಗೆದುಕೊಳ್ಳುವುದು ಎಂದರೇನು? ಈ ಕುರಿತ ಜಿಜ್ಞಾಸೆಗಳು ಇಂದು ನಮ್ಮ ಕ್ರೈಸ್ತ ಮನೆಗಳಲ್ಲಿ ಮನಸ್ಸುಗಳಲ್ಲಿ ಆಗಬೇಕಿದೆ. ಕರ್ತನ ಭೋಜನವನ್ನು ಕೇವಲ ಒಂದು ಧಾರ್ಮಿಕ ಸಂಸ್ಕಾರವನ್ನಾಗಿ ಗುರುತಿಸದೆ ಅದೊಂದು ಜೀವನ ಮೌಲ್ಯ ಎಂಬ ಅರಿವು ನಮ್ಮದಾಗಬೇಕು. ಹಾಗಾದಾಗ ಅದು ಟಿ.ವಿ. ಪರದೆಯ ಮೇಲೆ ನಡೆಯುತ್ತದೆಯೋ ಅಥವಾ ನಮ್ಮ ಅಡುಗೆ ಕೋಣೆಯಲ್ಲಿ ನಡೆಯುತ್ತದೆಯೋ, "ದೀಕ್ಷಿತ" ಪಾದ್ರಿಯೇ ಅದನ್ನು ನಡೆಸಬೇಕೋ ಅಥವಾ ನಮ್ಮ ಮಕ್ಕಳು ನಡೆಸಿದರೂ ಆದೀತೋ ಎಂಬೀ ಪ್ರಶ್ನೆಗಳು ಅನಗತ್ಯ, ಅರ್ಥಹೀನ ಮತ್ತು ಅಸಂಬದ್ಧ ಅನ್ನಿಸವೇ?
ಕೊನೆಯದಾಗಿ, ಒಂದು ಉದಾಹರಣೆ:
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಸ್ಟರ್ ಬಾನುವಾರದಂದು ಅಮೇರಿಕಾ ದೇಶ ಸಂಪೂರ್ಣವಾಗಿ ತೆರೆಯಲ್ಪಡುತ್ತದೆ ಎಂಬ ವಿವಾಧಾತ್ಮಕ ಹೇಳಿಕೆಯನ್ನು ನೀಡಿದಾಗ ಅದನ್ನು ಪ್ರತಿರೋಧಿಸಿದ ಮೆನನೈಟ್ ಸಭೆಯ ಸಭಾಪಾಲಕಿ ಮೆಲೀಸಾ ಫ್ಲೋರರ್-ಬಿಕ್ಸ್ಲರ್, "ನಾನು ಡೊನಾಲ್ಡ್ ಟ್ರಂಪ್ ಗೆ ಖಚಿತ ಪಡಿಸುತ್ತೇನೆ, ನನ್ನ ಸಭೆ ಈಸ್ಟರ್ ಬಾನುವಾರದಂದು ಸೇರಿಬರುವುದಿಲ್ಲ. ಹಾಗೆ ಮಾಡಿ ಕೊರೋನಾ ವೈರಾಣುವನ್ನು ಪಸರಿಸುವಂತೆ ಮಾಡುವುದು ನನ್ನ ಕ್ರೈಸ್ತ ವಿಶ್ವಾಸಕ್ಕೆ ನಾನು ಮಾಡುವ ದ್ರೋಹ, ಮತ್ತು ನಮ್ಮ ಸಾಮುದಾಯಿಕ ಆರಾಧನೆಗೆ ನಾವು ಎಸಗುವ ಮೋಸ. ಕ್ರೈಸ್ತ ಆರಾಧನೆ ಇಂತಹ ಮರಣದ ಸಂಸ್ಕೃತಿಯನ್ನುಎತ್ತಿಹಿಡಿದರೆ, ಕ್ರಿಸ್ತನ ದೇಹವಾದ ನಂಬಿಕೆಯ ಸಮುದಾಯದ ಜೀವವನ್ನು ಲೆಕ್ಕಿಸದಿದ್ದರೆ, ಅದನ್ನು ಪಣಕ್ಕಿಟ್ಟರೆ, ಅಂತಹ ಸಭೆಯ ನಾಯಕರು ದೇವರ ನ್ಯಾಯತೀರ್ವಿಕೆಗೆ ಗುರಿಯಾಗುತ್ತಾರೆ" ಎಂಬ ಕಠಿಣ, ಆದರೆ ಪ್ರವಾದನೀಯ, ಮಾತುಗಳನ್ನಾಡಿದರು. ಕೋವಿಡ್-೧೯ ಸೋಂಕನ್ನು ತಡೆಗಟ್ಟುವಲ್ಲಿ ಸಭೆ ಇಂದು ಇಂತಹ ಜಾಣ್ಮೆಯ ಮತ್ತು ಅಷ್ಟೇ ಎದೆಗಾರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ನಮ್ಮ ಒಂದು ಕ್ಷಣದ ಬುದ್ಧಿಗೇಡಿ ನಿರ್ಧಾರ ಮತ್ತು ಅವಿವೇಕದ ಸ್ಪರ್ಶ ಕ್ರಿಸ್ತನ ದೇಹದ ಅಂಗವಾದ ನಮ್ಮ ನೆರೆಯವನಿ/ಳಿಗೆ ಮಾರಣಾಂತಕವಾದೀತು. ನಮ್ಮ ಸಂಪ್ರದಾಯ, ಆಚರಣೆ, ವ್ರತಗಳಿಗಿಂತಲೂ ಹೆಚ್ಚಿನದು ನಮ್ಮ ನೆರೆಯವನ/ಳ ಜೀವ ಮತ್ತು ನ್ಯಾಯಬದ್ಧ ಸಮಾಜ. ಕೊರೋನಾದ ವಿಷಮ ಸನ್ನಿವೇಶದಲ್ಲಿ ನಾವು ಕಂಡುಕೊಳ್ಳುವ ಯಾವ ಪರ್ಯಾಯಗಳೂ ನಮ್ಮ ನೆರೆಯವರ ಪ್ರಾಣಕ್ಕೆ ಕಂಟಕವಾಗಬಾರದು. ಅಂತೆಯೇ ನಮ್ಮ ವಿಶ್ವಾಸವನ್ನು ಒಂದೆಡೆ ವರ್ಚುವಲ್ ಲೋಕದ ಸರಕ(ಕೊಮೊಡಿಟಿ)ನ್ನಾಗಿಸದೆ, ಮತ್ತೊಂದೆಡೆ ಪುರೋಹಿತಶಾಹಿತ್ವದ ಪಂಜರದಲ್ಲಿ ಕಟ್ಟಿಹಾಕದೆ ಸದಾ ಚಲನಾಶೀಲ ಶಕ್ತಿಯನ್ನಾಗಿಸಬೇಕಾದುದು ನಮ್ಮೆಲ್ಲರ ಕ್ರೈಸ್ತ ನಿಯೋಗ. ಇದು ಕೊರೋನಾದ ವಿರುದ್ಧದ ಹೋರಾಟ ಮಾತ್ರವಲ್ಲ, ಕ್ರಿಸ್ತನ ಪರ ಹೋರಾಟವೂ ಹೌದು.
____________________
References:
http://anglican.ink/2020/03/31/the-church-without-the-eucharist-is-not-the-church-interview-with-john-zizioulas/
https://publicorthodoxy.org/2020/03/28/an-orthodox-ethos-of-solidarity-against-covid-19/
https://www.sbs.com.au/language/english/audio/bartholomew-what-is-at-stake-is-not-our-faith-it-is-the-faithful
https://publicorthodoxy.org/2020/03/17/fasting-from-communion-in-a-pandemic
https://wp.stolaf.edu/lutherancenter/2020/03/christ-is-really-present-virtually-a-proposal-for-virtual-communion/
https://sojo.net/articles/i-refuse-participate-worship-leads-devastation
https://www.ncronline.org/news/parish/church-after-coronavirus-crisis-exposes-what-essential
Email Conversation between Rt. Rev. Dr. C. L. Furtado and Rev. Dr. O. V. Jathanna, dated 1 April 2020.